ರಾಣಿಬೆನ್ನೂರು ತಾಲೂಕಿನ ಕುಸಗೂರ ಹತ್ತಿರವಿರುವ ಅರಣ್ಯ ಪ್ರದೇಶದಲ್ಲಿ ಸೋಮವಾರ ಕಾಡಾನೆ ಕಾಣಿಸಿಕೊಂಡಿದ್ದು ಸುತ್ತಲಿನ ಪ್ರದೇಶದ ಜನರಲ್ಲಿ ಭಯದ ವಾತಾವರಣ ಉಂಟು ಮಾಡಿದೆ.

ರಾಣಿಬೆನ್ನೂರು: ತಾಲೂಕಿನ ಕುಸಗೂರ ಹತ್ತಿರವಿರುವ ಅರಣ್ಯ ಪ್ರದೇಶದಲ್ಲಿ ಸೋಮವಾರ ಕಾಡಾನೆ ಕಾಣಿಸಿಕೊಂಡಿದ್ದು ಸುತ್ತಲಿನ ಪ್ರದೇಶದ ಜನರಲ್ಲಿ ಭಯದ ವಾತಾವರಣ ಉಂಟು ಮಾಡಿದೆ.

ಶಿಕಾರಿಪುರ ಅಥವಾ ಶಿರಾಳಕೊಪ್ಪ ಕಡೆಯಿಂದ ಬಂದಿರಬಹುದು ಎನ್ನಲಾದ ಆನೆ ಭಾನುವಾರ ಬ್ಯಾಡಗಿ ತಾಲೂಕಿನ ಹಿರೇಅರಣಿ ಗ್ರಾಮದಲ್ಲಿ ಕಾಣಿಸಿಕೊಂಡಿತ್ತು. ನಂತರ ಮೋಟೆಬೆನ್ನೂರ ಮಾರ್ಗವಾಗಿ ಕುಸಗೂರ ಅರಣ್ಯ ಪ್ರದೇಶಕ್ಕೆ ಬಂದು ಸೇರಿಕೊಂಡಿದೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗ್ರಾಮದ ಬಳಿಯ ನೀಲಗಿರಿ ತೋಪಿನಲ್ಲಿ ಕಂಡುಬಂದ ಒಂಟಿ ಸಲಗವನ್ನು ಸುತ್ತುವರೆದು ಜನರನ್ನು ದೂರ ಇರುವಂತೆ ಎಚ್ಚರಿಕೆ ನೀಡುವ ದೃಶ್ಯ ಕಂಡುಬಂದಿತು.ಮುಗಿಬಿದ್ದ ಜನತೆ: ಹಲಗೇರಿ ಹಾಗೂ ಕುಸಗೂರ ಗ್ರಾಮದ ಹತ್ತಿರದ ಅರಣ್ಯ ಪ್ರದೇಶದಲ್ಲಿ ಕಾಡಾನೆ ಬಂದಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಸುತ್ತಲಿನ ಜನರು ಸ್ಥಳಕ್ಕೆ ಆಗಮಿಸಿ ಕಾಡಿನಲ್ಲಿಯೇ ಆನೆ ಹುಡುಕುವ ಪ್ರಯತ್ನ ಮಾಡಿದರು. ಇನ್ನು ಕೆಲವೊಬ್ಬರು ದೂರದಲ್ಲಿರುವ ಆನೆಯನ್ನು ಮೊಬೈಲ್‌ನಲ್ಲಿ ಸೆರೆಹಿಡಿಯುವ ಕೆಲಸ ಮಾಡುತ್ತಿದ್ದರು. ಹತ್ತಿರಕ್ಕೆ ಹೋಗುತ್ತಿದ್ದ ಜನರನ್ನು ಅರಣ್ಯ ಇಲಾಖೆಯ ಸಿಬ್ಬಂದಿ ದೂರಕ್ಕೆ ಕಳಿಸುವಲ್ಲಿ ಹೈರಾಣಾದರು.

ಆನೆ ಗ್ರಾಮಕ್ಕೆ ಬಂದಿರುವ ಸುದ್ದಿ ಗ್ರಾಮದ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರಲ್ಲಿ ಆತಂಕ ಮೂಡಿದ್ದು, ಆದಷ್ಟು ಬೇಗ ಸೆರೆಹಿಡಿಯಬೇಕು ಎಂಬ ಒತ್ತಾಯವಾಗಿದೆ.ಆನೆ ಸೆರೆಹಿಡಿಯಲು ಸಜ್ಜು: ಈಗಾಗಲೇ ಆನೆ ಸೆರೆ ಹಿಡಿಯಲು ಶಿವಮೊಗ್ಗದ ಸಕ್ರೇಬೈಲ್‌ನಿಂದ ಎರಡು ಆನೆಗಳೊಂದಿಗೆ ನುರಿತ ತಂಡ ಬಂದಿದ್ದು, ಮೋಟೆಬೆನ್ನೂರ ಹತ್ತಿರವಿರುವ ಸಾಲುಮರದ ತಿಮ್ಮಕ್ಕನ ಉದ್ಯಾನವನದಲ್ಲಿ ಬಿಡಾರ ಹೂಡಿವೆ. ಇನ್ನಷ್ಟು ಸಿಬ್ಬಂದಿಯನ್ನು ಸಜ್ಜುಗೊಳಿಸಿ ಆನೆ ಸೆರೆಹಿಡಿಯುವ ಪ್ರಯತ್ನದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯಿದೆ ಎಂದು ತಿಳಿದುಬಂದಿದೆ.

ಬ್ಯಾಡಗಿ ತಾಲೂಕಿನಲ್ಲಿ ಆನೆ ಬಂದಿದೆ ಎಂದು ಭಾನುವಾರ ಕೇಳಿದ್ದೇವೆ. ಆದರೆ ಬೆಳಗ್ಗೆ ನೋಡಿದರೆ ನಮ್ಮ ಗ್ರಾಮದ ಹತ್ತಿರವೇ ಆನೆ ಬಂದಿದ್ದು, ರೈತರಲ್ಲಿ ಭಯ ಮೂಡಿದೆ. ಆದಷ್ಟು ಬೇಗ ಆನೆ ಹಿಡಿಯುವ ಕೆಲಸವನ್ನು ಅರಣ್ಯಾಧಿಕಾರಿಗಳು ಮಾಡಬೇಕಾಗಿದೆ ಎಂದು ಹಲಗೇರಿ ರೈತ ಎಂ.ಆರ್. ಪಾಟೀಲ ಹೇಳಿದರು.