ಸಾರಾಂಶ
ಇಂದು ಮಾನವನ ಸುಖಕ್ಕೋಸ್ಕರ ಪ್ರಕೃತಿ, ಪರಿಸರದ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇಂತಹ ಕಾಲಘಟ್ಟದಲ್ಲಿ ಅರಣ್ಯ ಸಂರಕ್ಷಣೆಯ ಪವಿತ್ರ ಹೊಣೆ ಹೊತ್ತಿರುವ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಧಾರವಾಡ: ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಪ್ರಸಕ್ತ ಸನ್ನಿವೇಶದಲ್ಲಿ ವನ, ವನ್ಯ ಸಂಪತ್ತಿನ ಸಂರಕ್ಷಣೆಯ ಜವಾಬ್ದಾರಿ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.
ಇಲ್ಲಿನ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ರಾಜ್ಯಮಟ್ಟದ ಅರಣ್ಯ ಕ್ರೀಡಾಕೂಟವನ್ನು ಉದ್ಘಾಟಿಸಿದ ಅವರು, ಸಂವಿಧಾನದ ಆಶಯದಂತೆ ಪ್ರತಿಯೊಬ್ಬರೂ ಪ್ರಕೃತಿ ಪರಿಸರ ರಕ್ಷಿಸಬೇಕು. ನಮ್ಮ ಪೂರ್ವಿಕರು ನೈಸರ್ಗಿಕ ಸಂಪನ್ಮೂಲವನ್ನು ಹಿತಮಿತವಾಗಿ ಬಳಸುತ್ತಿದ್ದರು. ಆದರೆ, ಇಂದು ಮಾನವನ ಸುಖಕ್ಕೋಸ್ಕರ ಪ್ರಕೃತಿ, ಪರಿಸರದ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇಂತಹ ಕಾಲಘಟ್ಟದಲ್ಲಿ ಅರಣ್ಯ ಸಂರಕ್ಷಣೆಯ ಪವಿತ್ರ ಹೊಣೆ ಹೊತ್ತಿರುವ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಲು ತಿಳಿಸಿದರು.ಸೌಲಭ್ಯ ರಹಿತ ಕಾನನ ಪ್ರದೇಶದಲ್ಲಿ, ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಅರಣ್ಯ ಸಿಬ್ಬಂದಿಗೆ ಕ್ರೀಡಾ ಕೂಟಗಳು ಮನರಂಜನೆಯ ಜತೆಗೆ ಒತ್ತಡ ನಿವಾರಿಸಲು ಸಹಕಾರಿಯಾಗುತ್ತದೆ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸದೃಢ ಯುವಶಕ್ತಿಯ ಅಗತ್ಯವಿದ್ದು, ಕ್ರೀಡಾ ಚಟುವಟಿಕೆ ಯುವಜನರನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢಗೊಳಿಸುತ್ತದೆ ಎಂದರು.ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಅವರನ್ನು ಸ್ಮರಿಸಿದ ಸಚಿವರು, ಸರ್ಕಾರ ಕ್ರೀಡಾಪಟುಗಳಿಗೆ ಮತ್ತು ಕ್ರೀಡಾ ತರಬೇತುದಾರರಿಗೆ ಪ್ರೋತ್ಸಾಹ ನೀಡಲು ಖೇಲ್ ರತ್ನ, ಅರ್ಜುನ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿಯೇ ಮೊದಲಾದ ಪ್ರಶಸ್ತಿಗಳನ್ನು ನೀಡುತ್ತಿದೆ. ಇಂದು ಇಲ್ಲಿ ಪಾಲ್ಗೊಳ್ಳುವ ಇಲಾಖೆಯ ಸಿಬ್ಬಂದಿ, ರಾಷ್ಟ್ರಮಟ್ಟ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವಂತಾಗಲಿ ಎಂದು ಹಾರೈಸಿದರು.ಶಾಸಕ ಎನ್.ಎಚ್. ಕೋನರಡ್ಡಿ, ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ ಇದ್ದರು.