ಅಧಿಕಾರ ಸಿಕ್ಕಾಗ ಅಭಿವೃದ್ಧಿಗೆ ಶ್ರಮಿಸಬೇಕು. ನೀವು ಮಾಡಿದ ಅಭಿವೃದ್ಧಿ ಕೆಲಸಗಳು ನಿಮ್ಮನ್ನು ಶಾಶ್ವತವಾಗಿ ಜನರು ನೆನಪಿನಲ್ಲಿಡುತ್ತಾರೆ

ಕನಕಗಿರಿ: ಪಕ್ಷ ಬೇಧ ಮರೆತು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕನಕಗಿರಿ ಪಟ್ಟಣದ ಅಭಿವೃದ್ಧಿಗೆ ಮುಂದಾಗಬೇಕು ಎಂದು ನೂತನ ಪಪಂ ಅಧ್ಯಕ್ಷರಿಗೆ ಜಿಪಂ ಮಾಜಿ ಸದಸ್ಯ ವಿರೇಶ ಸಮಗಂಡಿ ಹೇಳಿದರು.

ಅವರು ಪಟ್ಟಣದ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ನಡೆದ ಪಪಂ ನೂತನ ಅಧ್ಯಕ್ಷೆ ತನುಶ್ರೀ ಟಿ.ಜೆ.ರಾಮಚಂದ್ರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಧಿಕಾರ ಸಿಕ್ಕಾಗ ಅಭಿವೃದ್ಧಿಗೆ ಶ್ರಮಿಸಬೇಕು. ನೀವು ಮಾಡಿದ ಅಭಿವೃದ್ಧಿ ಕೆಲಸಗಳು ನಿಮ್ಮನ್ನು ಶಾಶ್ವತವಾಗಿ ಜನರು ನೆನಪಿನಲ್ಲಿಡುತ್ತಾರೆ. ಪಟ್ಟಣದ ಅಭಿವೃದ್ಧಿಗೆ ಸದಸ್ಯರು ಹಾಗೂ ಪಟ್ಟಣದ ಮುಖಂಡರ ಸಹಕಾರದೊಂದಿಗೆ ಮುನ್ನಡೆಯಬೇಕು ಎಂದು ತಿಳಿಸಿದರು.

ಇನ್ನೂ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ ಮಾತನಾಡಿ, ದಾಖಲೆಗಳಿಗಾಗಿ ಜನ ಸಾಮಾನ್ಯರನ್ನು ಕಚೇರಿಗೆ ಅಲೆದಾಡಿಸುವುದನ್ನು ತಪ್ಪಿಸಲು ನೂತನ ಅಧ್ಯಕ್ಷರು ಶ್ರಮಿಸಬೇಕು. ಪ್ರಭಾವಿಗಳ ಹಾಗೂ ಮುಖಂಡರ ದಾಖಲೆ ಅಧಿಕಾರಿಗಳು ಶೀಘ್ರವಾಗಿ ವಿಲೇ ಮಾಡುತ್ತಾರೆ. ಆದರೆ, ಜನಸಾಮಾನ್ಯರನ್ನು ಅಲೆದಾಡಿಸುವುದು ಸಾಮಾನ್ಯವಾಗಿರುವುದರಿಂದ ಜನರು ಬೇಸತ್ತುಕೊಳ್ಳುತ್ತಾರೆ.ಇದನ್ನು ತಪ್ಪಿಸಬೇಕು ಎಂದರು.

ಮುಖಂಡರಾದ ಶರಣಪ್ಪ ಭತ್ತದ, ಡಾ.ದೊಡ್ಡಯ್ಯ ಅರವಟಗಿಮಠ, ತಾಪಂ ಅಧ್ಯಕ್ಷ ಬಸವಂತಗೌಡ, ಮಲ್ಲಿಕಾರ್ಜುನಗೌಡ, ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಮಾತನಾಡಿದರು.

ನೂತನ ಅಧ್ಯಕ್ಷೆ ತನುಶ್ರೀ ಮಾತನಾಡಿ, ನನ್ನನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ ಸಚಿವ ತಂಗಡಗಿಗೆ ನನ್ನ ಕುಟುಂಬ ಹಾಗೂ ನನ್ನ ಸಮಾಜ ಆಭಾರಿಯಾಗಿರುತ್ತದೆ. ಎಲ್ಲರ ಸಹಕಾರದೊಂದಿಗೆ ಅಭಿವೃದ್ಧಿಗೆ ಸಹಕರಿಸುತ್ತೇನೆ ಎಂದರು.

ಪಪಂ ಮಾಜಿ ಅಧ್ಯಕ್ಷೆ ಹುಸೇನ್‌ಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯರಾದ ಶರಣೇಗೌಡ, ಹುಸೇನ್‌ಬೀ, ರಾಜಾಸಾಬ್ ನಂದಾಪುರ, ನಂದಿನಿ, ಹನುಮಂತ ಬಸರಿಗಿಡ, ಸಿದ್ದೇಶ ಕಲುಬಾಗಿಲಮಠ, ರಾಕೇಶ ಕಂಪ್ಲಿ, ನೂರ್‌ಸಾಬ್ ಗಡ್ಡಿಗಾಲ, ಶೇಷಪ್ಪ ಪೂಜಾರ ಇತರರಿದ್ದರು.

ಕಚೇರಿಯಲ್ಲಿ ಫೈಲ್ ಮಾಯ, ಗುಡುಗಿದ ಸದಸ್ಯ

ಪಪಂ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳು ತಮ್ಮ ಕೆಲಸದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಸಾರ್ವಜನಿಕರ ಆಸ್ತಿ ದಾಖಲೆಗಳ ಫೈಲ್‌ಗಳೇ ಕಚೇರಿಯಿಂದ ಮಾಯವಾಗುತ್ತಿವೆ. ಇದು ಮುಂದುವರಿದರೆ ಸರಿ ಇರುವುದಿಲ್ಲ. ಮುಂದೆ ಹೀಗಾಗದಂತೆ ಸಿಬ್ಬಂದಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು.ನೂತನ ಅಧ್ಯಕ್ಷೆ ತನುಶ್ರೀ ಸ್ನಾತಕೋತ್ತರ ಪದವೀದರರು, ಇನ್ನು ಮುಂದೆ ಕಡತಗಳು ಮಾಯವಾಗದಂತೆ ನೋಡಿಕೊಳ್ಳಬೇಕು ಹಾಗೂ ಪಟ್ಟಣದ ಅಭಿವೃದ್ದಿಗೆ ಒತ್ತು ನೀಡಬೇಕೆಂದು 10ನೇ ವಾರ್ಡ್‌ನ ಸದಸ್ಯ ಸಂಗಪ್ಪ ಸಜ್ಜನ್ ಆಗ್ರಹಿಸಿದರು.

ಪರಸ್ಪರ ಟಾಂಗ್ : ಇನ್ನು ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ ಮಾತನಾಡಿ, ಅಧಿಕಾರ ಹಂಚಿಕೆ ಮಾಡಿದರೆ ಅಭಿವೃದ್ಧಿ ಕುಂಠಿತವಾಗುತ್ತದೆ. ನಮ್ಮ ಸರ್ಕಾರದಲ್ಲಿ ಭೂಮಿ ಖರೀದಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಮುಂದಾಗಿದ್ದೇವು. ಆದರೆ,ಕೋರನಾ ಅಡ್ಡಿಯಾಯಿತು ಎಂದರು. ಇದಕ್ಕೆ ಪ್ರತಿಯಾಗಿ ಬ್ಲಾಕ್ ಕಾಂಗ್ರೆಸ್ ಗಂಗಾಧರಸ್ವಾಮಿ ಕಲುಬಾಗಿಲಮಠ ಮಾತನಾಡಿ, ಒಂದೇ ಸರ್ಕಾರದಲ್ಲಿ ಮೂರ‍್ನಾಲ್ಕು ಮುಖ್ಯಮಂತ್ರಿಗಳಾದ ಉದಾಹರಣೆಗಳಿವೆ. ಅಭಿವೃದ್ದಿ ಯಾರೇ ಇದ್ದರೂ ಆಗುತ್ತದೆ ಎಂದು ಪರೋಕ್ಷವಾಗಿ ಸಣ್ಣ ಕನಕಪ್ಪರಿಗೆ ಟಾಂಗ್ ನೀಡಿದರು.