ಕ್ಷೇತ್ರದ ಅಭಿವೃದ್ಧಿಗೆ ಪಕ್ಷಭೇದ ಮರೆತು ಸಹಕಾರ ನೀಡಿ: ಬಸವರಾಜ ಉಳ್ಳಾಗಡ್ಡಿ

| Published : Jul 20 2024, 12:48 AM IST

ಸಾರಾಂಶ

ಯಲಬುರ್ಗಾ ಪಟ್ಟಣದ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜ ಆವರಣದಲ್ಲಿ ಶುಕ್ರವಾರ ಕಲ್ಯಾಣ ಕರ್ನಾಟಕ ಅನುದಾನದಡಿ ಸುಮಾರು ₹೧.೪೭ ಕೋಟಿ ವೆಚ್ಚದಲ್ಲಿ ಆರು ಕೊಠಡಿಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು.

ಯಲಬುರ್ಗಾ: ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಅವರು ಸಾಕಷ್ಟು ಅನುದಾನ ತಂದಿದ್ದಾರೆ. ಜನರು ಪಕ್ಷಭೇದ ಮರೆತು ತಾಲೂಕಿನ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಹೇಳಿದರು.

ಪಟ್ಟಣದ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜ ಆವರಣದಲ್ಲಿ ಶುಕ್ರವಾರ ಕಲ್ಯಾಣ ಕರ್ನಾಟಕ ಅನುದಾನದಡಿ ಸುಮಾರು ₹೧.೪೭ ಕೋಟಿ ವೆಚ್ಚದಲ್ಲಿ ಆರು ಕೊಠಡಿಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸರ್ಕಾರದಿಂದ ಸಾವಿರಾರು ಕೋಟಿ ರು. ಕ್ಷೇತ್ರಕ್ಕೆ ತಂದು ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.ಕಾಂಗ್ರೆಸ್ ಆಡಳಿತ ಬಂದ ಒಂದೇ ವರ್ಷದಲ್ಲಿ ಹೊಸದಾಗಿ ೧೨ ಪ್ರೌಢಶಾಲೆ, ೬ ಪದವಿ ಪೂರ್ವ ಕಾಲೇಜು, ಶಾಲಾ-ಕಾಲೇಜಗಳ ಕಟ್ಟಡ ನಿರ್ಮಾಣ, ಹೊಸ ಕೆರೆ ನಿರ್ಮಾಣ ಸೇರಿದಂತೆ ಕೋಟ್ಯಂತರ ರು. ಅನುದಾನ ಮಂಜೂರಾತಿ ಕೊಡಿಸಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಸುಧಾರಣೆಗೆ ಹೆಚ್ಚು ಅನುಕೂಲವಾಗಿದೆ ಎಂದು ಹೇಳಿದರು.

ಸಿಡಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲಿ ಮಾತನಾಡಿ, ನಮ್ಮ ಮಹಿಳಾ ಕಾಲೇಜಗೆ ಆರು ಕೊಠಡಿಗಳನ್ನು ಶಾಸಕ ಬಸವರಾಜ ರಾಯರಡ್ಡಿ ಅವರು ಮಂಜೂರು ಮಾಡಿದ್ದು, ಕಟ್ಟಡ ಕಾಮಗಾರಿ ಗುಣಮಟ್ಟದ್ದಾಗಬೇಕು ಎಂದರು.

ಜಿಪಂ ಎಇಇ ಶ್ರೀಧರ್ ತಳವಾರ, ಆರೋಗ್ಯ ರಕ್ಷಾ ಸಮಿತಿಯ ಉಪಾಧ್ಯಕ್ಷ ಡಾ. ಶಿವನಗೌಡ ದಾನರೆಡ್ಡಿ, ಪಪಂ ಸದಸ್ಯ ರಿಯಾಜ್ ಖಾಜಿ, ಹನುಮಂತ ಭಜಂತ್ರಿ, ಶರಣಪ್ಪ ಗಾಂಜಿ, ಕಾಲೇಜು ಪ್ರಾಚಾರ್ಯರು, ಶಾಲಾ ಮುಖ್ಯಶಿಕ್ಷಕ ಇದ್ದರು.