ಭಾರತದಲ್ಲಿ ಮರೆವಿನ ಕಾಯಿಲೆ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಇತ್ತೀಚಿನ ರಾಷ್ಟ್ರೀಯ ಮತ್ತು ವೈದ್ಯಕೀಯ ವರದಿಗಳ ಪ್ರಕಾರ 60 ವರ್ಷ ಮೇಲ್ಪಟ್ಟ ಸುಮಾರು 88 ಲಕ್ಷ ಜನರು ಡಿಮೆನ್ಶಿಯಾ ಅಥವಾ ಆಲ್ಜೈಮರ್ಸ್‌ ನಿಂದ ಬಳಲುತ್ತಿದ್ದಾರೆ. ಹೀಗಾಗಿ, ಈ ಕಾಯಿಲೆಯೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಮತ್ತು ಆರಂಭಿಕ ಚಿಕಿತ್ಸೆ ಮುಖ್ಯ.

ಕನ್ನಡಪ್ರಭ ವಾರ್ತೆ ಮೈಸೂರು

ಮರೆವು ಕೇವಲ ವಯಸ್ಸಿನ ಸಹಜ ಲಕ್ಷಣವಲ್ಲ. ಆರಂಭದಲ್ಲೇ ಆಲ್ಜೈಮರ್ಸ್‌ ಗುರುತಿಸಿ, ತಜ್ಞರ ಸಲಹೆ ಪಡೆಯಬೇಕು ಎಂದು ಶಾರದಾ ವಿಲಾಸ ಫಾರ್ಮಸಿ ಕಾಲೇಜು ಪ್ರಾಂಶುಪಾಲ ಹಾಗೂ ಆಲ್ಜೈಮರ್ಸ್‌ ಅಂಡ್‌ ರಿಲೇಟೆಡ್‌ ಡಿಸಾರ್ಡರ್ಸ್ ಸೊಸೈಟಿ ಆಫ್‌ ಇಂಡಿಯಾ ಮೈಸೂರು ಘಟಕದ ಅಧ್ಯಕ್ಷ ಡಾ.ಹನುಮಂತಾಚಾರ್ ಜೋಶಿ ತಿಳಿಸಿದರು.

ನಗರದ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ನಡೆದ ವಿಶ್ವ ಆಲ್ಜೈಮರ್ಸ್‌ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮರೆವು ಹಾಗೂ ನೆನಪಿನ ಶಕ್ತಿ ಕುಸಿತವು ಹಿರಿಯರ ದೈನಂದಿನ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ವ್ಯಕ್ತಿಗೆ ಇರುವಿಕೆಯೇ ನೆನಪಿಲ್ಲದಂತಹ ಸ್ಥಿತಿ ಎದುರಾದರೆ ಜೀವನ ಕಷ್ಟಕರವಾಗುತ್ತದೆ ಎಂದರು.

ಭಾರತದಲ್ಲಿ ಮರೆವಿನ ಕಾಯಿಲೆ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಇತ್ತೀಚಿನ ರಾಷ್ಟ್ರೀಯ ಮತ್ತು ವೈದ್ಯಕೀಯ ವರದಿಗಳ ಪ್ರಕಾರ 60 ವರ್ಷ ಮೇಲ್ಪಟ್ಟ ಸುಮಾರು 88 ಲಕ್ಷ ಜನರು ಡಿಮೆನ್ಶಿಯಾ ಅಥವಾ ಆಲ್ಜೈಮರ್ಸ್‌ ನಿಂದ ಬಳಲುತ್ತಿದ್ದಾರೆ. ಹೀಗಾಗಿ, ಈ ಕಾಯಿಲೆಯೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಮತ್ತು ಆರಂಭಿಕ ಚಿಕಿತ್ಸೆ ಮುಖ್ಯ ಎಂದರು.

ಜೆಎಸ್‌ಎಸ್‌ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಪಿ. ಮಧು ಮಾತನಾಡಿ, ಸಾಮಾನ್ಯವಾಗಿ ವಯಸ್ಸಾದಂತೆ ಸಣ್ಣಪುಟ್ಟ ವಿಷಯಗಳನ್ನು ಮರೆಯುವುದು ಸ್ವಾಭಾವಿಕ. ಉದಾಹರಣೆಗೆ ಹೋದ ಜಾಗದ ಹೆಸರು ತಕ್ಷಣ ನೆನಪಾಗದಿರುವುದು ಅಥವಾ ಲೆಕ್ಕಾಚಾರ ಮಾಡುವಾಗ ಸಣ್ಣಪುಟ್ಟ ತಪ್ಪುಗಳಾಗುವುದು ವಯೋಸಹಜ ಮರೆವಿನ ಲಕ್ಷಣಗಳಾಗಿವೆ. ಆದರೆ, ನೆನಪಿನ ಶಕ್ತಿ ಹಂತ ಹಂತವಾಗಿ ಕ್ಷೀಣಿಸುತ್ತಾ ಹೋದರೆ ಅದು ಆಲ್ಜೈಮರ್ಸ್‌ ಕಾಯಿಲೆಯ ಮುನ್ಸೂಚನೆಯಾಗಿರುತ್ತದೆ. ಹೀಗಾಗಿ, ಈ ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವುದರಿಂದ ರೋಗದ ತೀವ್ರತೆಯನ್ನು ಕಡಿಮೆ ಮಾಡಲು ಮತ್ತು ರೋಗಿಯ ಜೀವನದ ಗುಣಮಟ್ಟವನ್ನು ಉತ್ತಮಗೊಳಿಸಲು ಸಾಧ್ಯವಾಗುತ್ತದೆ ಎಂದರು.

ಜೆಎಸ್‌ಎಸ್‌ ಆಸ್ಪತ್ರೆಯ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಎಂ. ಕಿಶೋರ್‌ ಮಾತನಾಡಿ, ವಿನಾಕಾರಣ ಭಯ ಪಡುವುದು, ಆತಂಕ, ಖಿನ್ನತೆ ಅಥವಾ ಬೇಗನೆ ಕೋಪಗೊಳ್ಳುವುದು ಆಲ್ಜೈಮರ್ಸ್‌ ಲಕ್ಷಣವಾಗಿದೆ. ಇದನ್ನು ನಿರ್ಲಕ್ಷ ಮಾಡದೆ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಮತ್ತು ಸಮಾಲೋಚನೆ ಪಡೆಯಿರಿ ಎಂದರು.

ನರ ವಿಜ್ಞಾನ ವಿಭಾಗದ ವೈದ್ಯ ಡಾ.ಪಿ.ಶಾಸ್ತಾರ ಮಾತನಾಡಿ, ಮನುಷ್ಯನಿಗೆ ಆಲ್ಜೈಮರ್ಸ್‌ ಹೆಚ್ಚಾದಂತೆ ರೋಗಿಗಳಲ್ಲಿ ಖಿನ್ನತೆ, ಆತಂಕ, ನಿದ್ರಾಹೀನತೆ ಮತ್ತು ಕಿರಿಕಿರಿ ಅಥವಾ ಆಕ್ರೋಶದಂತಹ ನಡವಳಿಕೆಯ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಇವುಗಳನ್ನು ನಿಯಂತ್ರಿಸಿ ಸೂಕ್ತ ಚಿಕಿತ್ಸೆ ನೀಡಲು ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ನರವಿಜ್ಞಾನ ವಿಭಾಗ, ವೃದ್ಧಾರೋಗ ವಿಭಾಗ ಮತ್ತು ಮನೋವಿಜ್ಞಾನ ವಿಭಾಗಗಳಲ್ಲಿ ನುರಿತ ವೈದ್ಯರು ಒಂದೇ ಕಡೆ ಲಭ್ಯವಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದರು.

ವೃದ್ಧಾರೋಗ ವಿಭಾಗದ ಮುಖ್ಯಸ್ಥೆ ಡಾ. ಪ್ರತಿಭಾ ಪೆರೇರಾ, ವೈದ್ಯರಾದ ಡಾ. ತೇಜಸ್ವಿನಿ, ಡಾ. ಶಿಲ್ಪಾ ಅವರೇಬೀಳ, ಡಾ. ಕ್ಷಮಾ ಮೊದಲಾದವರು ಇದ್ದರು.