ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಮಿತಿ ರಚಿಸಿ: ಅನಂತಮೂರ್ತಿ ಹೆಗಡೆ

| Published : Jun 28 2024, 01:01 AM IST

ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಮಿತಿ ರಚಿಸಿ: ಅನಂತಮೂರ್ತಿ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರ ಮೇಲೆ ಬಹಳ ಗೌರವವಿದ್ದು, ಸ್ವಂತ ಖರ್ಚಿನಿಂದ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುತ್ತೇನೆ ಜನತೆಗೆ ಭರವಸೆ ನೀಡಿದ್ದರು. ಒಂದು ವರ್ಷವಾದರೂ ಆಸ್ಪತ್ರೆಯ ಕುರಿತು ಸುದ್ದಿ ಇಲ್ಲ.

ಶಿರಸಿ: ಕಾಂಗ್ರೆಸ್ ಸರ್ಕಾರಕ್ಕೆ ಜನರ ಸಾವು ತಮಾಷೆಯ ವಿಷಯವಾಗಿದ್ದು, ವಿಧಾನಸಭೆ ಮತ್ತು ಲೋಕಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ನಿರ್ಮಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ೪೫ ದಿನದೊಳಗಡೆ ಸಮಿತಿ ರಚನೆ ಮಾಡಬೇಕು. ಇಲ್ಲವಾದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ನಿರ್ಮಾಣ ಕಾಂಗ್ರೆಸ್‌ಗೆ ಚುನಾವಣೆಯ ವಿಷಯವಾಗಿದ್ದು, ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಮನುಷ್ಯತ್ವ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರ ಮೇಲೆ ಬಹಳ ಗೌರವವಿದ್ದು, ಸ್ವಂತ ಖರ್ಚಿನಿಂದ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುತ್ತೇನೆ ಜನತೆಗೆ ಭರವಸೆ ನೀಡಿದ್ದರು. ಒಂದು ವರ್ಷವಾದರೂ ಆಸ್ಪತ್ರೆಯ ಕುರಿತು ಸುದ್ದಿ ಇಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ, ಕೆ. ಸುಧಾಕರ, ದಿನಕರ ಶೆಟ್ಟಿ, ರೂಪಾಲಿ ನಾಯ್ಕ, ಸುನೀಲ ನಾಯ್ಕ ನೇತೃತ್ವದಲ್ಲಿ ಕುಮಟಾದಲ್ಲಿ ಜಾಗ ಗುರುತಿಸಿ, ಸರ್ಕಾರದ ಮೇಲೆ ಒತ್ತಡ ತಂದ ಪರಿಣಾಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿದ್ದರು. ಬದಲಾದ ಸರ್ಕಾರದ ಅವಧಿಯಲ್ಲಿ ಹಣ ವಾಪಸ್‌ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.ರಸ್ತೆ ಅಪಘಾತ, ಅವಘಡ, ಅನಾರೋಗ್ಯದಿಂದ ಬಳಲುತ್ತಿರುವವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು, ಉಡುಪಿ, ಮಣಿಪಾಲ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಇನ್ನಿತರ ಆಸ್ಪತ್ರೆಗೆ ದಾಖಲಿಸಬೇಕಾದ ಸ್ಥಿತಿ ಇದೆ. ಸಾಗಿಸುವ ಮಾರ್ಗಮಧ್ಯೆ ಬಹಳಷ್ಟು ರೋಗಿಗಳು ಮಾರ್ಗಮಧ್ಯೆ ಸಾವಿಗೀಡಾಗುತ್ತಿದ್ದಾರೆ ಎಂದರು. ಬಿಜೆಪಿ ಗ್ರಾಮೀಣ ಮಂಡಲಾಧ್ಯಕ್ಷೆ ಉಷಾ ಹೆಗಡೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ೧ ವರ್ಷ ಅಧಿಕಾರ ಪೂರೈಸಿದ್ದು, ೫ ಗ್ಯಾರಂಟಿ ಈಡೇರಿಸಿದ್ದೇವೆ ಎಂದು ಹೇಳುವ ಕಾಂಗ್ರೆಸ್ಸಿಗರು, ಆಸ್ಪತ್ರೆ ನಿರ್ಮಾಣದ ಬಗ್ಗೆ ಇಚ್ಛಾಶಕ್ತಿ ತೋರಿಸಲಿ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ವಿಶೇಷ ಪ್ರಯತ್ನ ವಹಿಸಲಿ ಎಂದು ಆಗ್ರಹಿಸಿದರು.ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ರೇಖಾ ಹೆಗಡೆ, ಜಿಪಂ ಮಾಜಿ ಸದಸ್ಯೆ ಶೋಭಾ ನಾಯ್ಕ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ನಂದನಸಾಗರ, ಮಾರುತಿ ಹರಿಕಂತ್ರ ಮತ್ತಿತರರು ಇದ್ದರು.