ಕಳಪೆ ಕಾಮಗಾರಿಗಳ ಸೂಕ್ತ ತನಿಖೆಗೆ ಸಮಿತಿ ರಚಿಸಿ: ಬಿಜೆಪಿ ಮುಖಂಡ ದೇವರಾಜೇಗೌಡ

| Published : Oct 16 2024, 12:31 AM IST

ಕಳಪೆ ಕಾಮಗಾರಿಗಳ ಸೂಕ್ತ ತನಿಖೆಗೆ ಸಮಿತಿ ರಚಿಸಿ: ಬಿಜೆಪಿ ಮುಖಂಡ ದೇವರಾಜೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಜಲಸಂಪನ್ಮೂಲ ಇಲಾಖೆಯಲ್ಲಿ ೨೦೧೩ ರಿಂದ ೨೦೨೪ ರವರಗೆ ಸಾವಿರಾರು ಕೋಟಿ ರೂಪಾಯಿ ಪಾವತಿಸಿರುವ ಕಳಪೆ ಕಾಮಗಾರಿಗಳ ತನಿಖೆ ನಡೆಸಲು ಪ್ರಾಮಾಣಿಕ, ನಿವೃತ್ತ ನ್ಯಾಯ ಮೂರ್ತಿಗಳ ಸಮಿತಿ ರಚನೆ ಮಾಡಿ ವರದಿ ಪಡೆದು ನಂತರ ಎಸ್‌ಐಟಿ ರಚನೆ ಮಾಡುವಂತೆ ಬಿಜೆಪಿ ಮುಖಂಡ ಜಿ.ದೇವರಾಜೇಗೌಡ ಆಗ್ರಹಿಸಿದರು. ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಎಸ್‌ಐಟಿ ನೇಮಿಸುವಂತೆ ಒತ್ತಾಯ । ಅಕ್ರಮ ಎಸಗಿದವರ ವಿರುದ್ಧ ಕ್ರಮಕ್ಕೆ ಆಗ್ರಹ

ಕನ್ನಡಪ್ರಭ ವಾರ್ತೆ ಹಾಸನ

ಜಲಸಂಪನ್ಮೂಲ ಇಲಾಖೆಯಲ್ಲಿ ೨೦೧೩ ರಿಂದ ೨೦೨೪ ರವರಗೆ ಸಾವಿರಾರು ಕೋಟಿ ರೂಪಾಯಿ ಪಾವತಿಸಿರುವ ಕಳಪೆ ಕಾಮಗಾರಿಗಳ ತನಿಖೆ ನಡೆಸಲು ಪ್ರಾಮಾಣಿಕ, ನಿವೃತ್ತ ನ್ಯಾಯ ಮೂರ್ತಿಗಳ ಸಮಿತಿ ರಚನೆ ಮಾಡಿ ವರದಿ ಪಡೆದು ನಂತರ ಎಸ್‌ಐಟಿ ರಚನೆ ಮಾಡುವಂತೆ ಬಿಜೆಪಿ ಮುಖಂಡ ಜಿ.ದೇವರಾಜೇಗೌಡ ಆಗ್ರಹಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾದ ಮೇಲೆ ಈ ಹಿಂದಿನ ಸರ್ಕಾರದ ಕೆಲ ಸಚಿವರು ಸರ್ಕಾರದ ಬೊಕ್ಕಸವನ್ನು ಲೂಟಿ ಮಾಡಿದ್ದಾರೆ ಎಂದು ತಮ್ಮ ಸಚಿವ ಸಂಪುಟದ ಸಹದ್ಯೋಗಿಗಳೊಂದಿಗೆ ಕೆಲವು ಮಹತ್ತರವಾದ ತೀರ್ಮಾನಗಳನ್ನು ಕೈಗೊಂಡಿದ್ದಾರೆ. ಅದೇ ರೀತಿಯಲ್ಲಿ ೨೦೧೩ ರಿಂದ ೨೦೨೪ರ ವರಗೆ ಯಾವುದೇ ಸರ್ಕಾರವಿದ್ದರೂ ಕೂಡ ಅಂಜದೆ, ನಿರ್ಭಯವಾಗಿ ಜಲಸಂಪನ್ಮೂಲ ಇಲಾಖೆಯಲ್ಲಿನ ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ಬರುವ ಹೇಮಾವತಿ ಎಡದಂಡ ನಾಲೆ ಹಾಗೂ ಬಲದಂಡೆ ನಾಲೆ ಆಧುನೀಕರಣ ಕಾಮಗಾರಿಯ ಸುಮಾರು ೨೩೦೦ ಕೋಟಿ ರು. ಮತ್ತು ಫಂಡ್ ಡೈವರ್ಷನ್ ಮಾಡಿ ಹಾಸನ ಜಿಲ್ಲೆಯಲ್ಲಿ ಇತರೆ ಅಭಿವೃದ್ಧಿ ಕಾಮಗಾರಿಯಲ್ಲಿ ಸುಮಾರು ೫೬೦೦ ಕೋಟಿ ರು. ಹಾಗೂ ಇದೇ ಇಲಾಖೆಯಲ್ಲಿನ ವಿಶ್ವೇಶ್ವರಯ್ಯ ಜಲ ನಿಗಮದಲ್ಲಿನ ಎತ್ತಿನಹೊಳೆ ಯೋಜನೆಯ ಕಾಮಗಾರಿಯಲ್ಲಿನ ಕೇವಲ ೮೩೨ ಕೋಟಿ ರು.ಗೆ ಸರ್ಕಾರದಿಂದ ಅನುಮೋದನೆ ಪಡೆದು ಟೆಂಡರ್ ಕರೆದು ನಂತರ ಆ ಕಾಮಗಾರಿಯ ಮೊತ್ತವನ್ನು ೨,೬೦೦ ಕೋಟಿ ರು.ಗೆ ಏರಿಸಿ ಈಗಾಗಲೇ ೧೭೦೦ ಕೋಟಿ ರು. ಹಣ ಪಾವತಿಸಿರುವ ಬಗ್ಗೆ ಸ್ವತಃ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಈ ಯೋಜನೆಯ ಉದ್ಘಾಟನೆಯ ಸಮಯದಲ್ಲಿ ಘೋಷಣೆ ಮಾಡಿದ್ದಾರೆ ಎಂದು ದೂರಿದರು.

೧೭೦೦ ಕೋಟಿ ರು. ಕಾಮಗಾರಿಯ ಬಿಲ್‌ನ ತನಿಖೆ ಹಾಗೂ ರಾಜ್ಯದ ಉದ್ದ-ಅಗಲಕ್ಕೂ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಈ ೧೦ ವರ್ಷಗಳಲ್ಲಿ ಕೆ.ಆರ್.ಡಿ.ಸಿ.ಎಲ್.ನಿಂದ (ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ) ಲೆಕ್ಕಕ್ಕೆ ಸಿಗದಷ್ಟು ಕೋಟಿ ರು. ಹಣ ವ್ಯಯ ಮಾಡಿರುವ ಬಗ್ಗೆ ತಮ್ಮ ಸರ್ಕಾರಕ್ಕೆ ಮಾಹಿತಿ ಇದೆ. ಆದ ಕಾರಣ ಕಳಂಕ ರಹಿತ ಮುಖ್ಯಮಂತ್ರಿ ಆದ ತಾವು ಮತ್ತು ತಮ್ಮ ಮಂತ್ರಿ ಮಂಡಲ ಉತ್ತಮ ತೀರ್ಮಾನ ತೆಗೆದುಕೊಂಡು ಒಬ್ಬ ಪ್ರಾಮಾಣಿಕ ನಿವೃತ್ತ ನ್ಯಾಯಮೂರ್ತಿಗಳ ಸಮಿತಿಯನ್ನು ರಚನೆ ಮಾಡಿ ಅವರಿಂದ ವರದಿ ಪಡೆದು ನಂತರ ತಮ್ಮ ಅಧೀನದಲ್ಲಿರುವ ಎಸ್‌ಐಟಿ ತನಿಖಾ ತಂಡ ರಚನೆ ಮಾಡಿ ಈ ಕಾಮಗಾರಿಗಳಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಹಣ ಲಪಟಾಯಿಸಿರುವವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಈ ನಾಡಿನ ಬೊಕ್ಕಸಕ್ಕೆ ಆಗಿರುವ ನಷ್ಟವನ್ನು ಭರಿಸಬೇಕಾಗಿ ತಮ್ಮಲ್ಲಿ ಮನವಿ ಮಾಡುತ್ತೇವೆ ಎಂದು ಹೇಳಿದರು.