ಸಾರಾಂಶ
ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳನ್ನು ರಚನೆ ಮಾಡುವುದರ ಮೂಲಕ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸೌಲಭ್ಯಗಳನ್ನು ಪಡೆಯಬೇಕೆಂದು ಸಂಸ್ಥೆಯ ಜಿಲ್ಲಾ ನಿರ್ದೇಶಕ ಪ್ರವೀಣಕುಮಾರ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳನ್ನು ರಚನೆ ಮಾಡುವುದರ ಮೂಲಕ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸೌಲಭ್ಯಗಳನ್ನು ಪಡೆಯಬೇಕೆಂದು ಸಂಸ್ಥೆಯ ಜಿಲ್ಲಾ ನಿರ್ದೇಶಕ ಪ್ರವೀಣಕುಮಾರ ತಿಳಿಸಿದರು.ನಗರದ ಮಾತೆ ಮಹಾದೇವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿರುವ ಬಸವಕಲ್ಯಾಣ ತಾಲೂಕು ವ್ಯಾಪ್ತಿಯ ಒಕ್ಕೂಟ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕ್ಷೇತ್ರದ ಹಿನ್ನೆಲೆ, ಸ್ವ-ಸಹಾಯ ಸಂಘಗಳ ಕಲ್ಪನೆ, ಸಿಸಿ ಖಾತೆಯಲ್ಲಿ ಆಗುವ ವ್ಯವಹಾರಗಳ ಬಗ್ಗೆ ತಿಳಿಸಿ, ಎಲ್ಲರೂ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಅರಿತು ಸದುಪಯೋಗ ಮಾಡಿಕೊಳ್ಳಬೇಕೆಂದರು.ಸದ್ಭಾವನಾ ಮಂಚ್ ಸಮಿತಿ ಜಿಲ್ಲಾಧ್ಯಕ್ಷ ಗುರುನಾಥ ಗಡ್ಡೆ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು, ಈ ನಾಡಿನ ಈ ಭಾಗದಲ್ಲಿ ಪರ್ಯಾಯ ಸರ್ಕಾರದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ ಎಂದು ತಿಳಿಸಿದರು.
ಸಮುದಾಯ ಕಾರ್ಯಕ್ರಮದಡಿಯಲ್ಲಿ ನಿರ್ಗತಿಕರಿಗೆ ಪ್ರತಿ ತಿಂಗಳು ಮಾಶಾಸನ ವಿತರಣೆ, ವಾತ್ಸಲ್ಯ ಮನೆ ರಚನೆ, ಅಂಗವಿಕಲರಿಗೆ ಬೇಕಾದ ಸಲಕರಣೆ ವಿತರಣೆ, ಮಾಸಿಕವಾಗಿ ವಿದ್ಯಾರ್ಥಿ ವೇತನ, ರುದ್ರಭೂಮಿ ಅಭಿವೃದ್ಧಿ, ಕೆರೆಗಳ ಅಭಿವೃದ್ಧಿ, ದೇವಸ್ಥಾನಗಳ ಜಿರ್ಣೋದ್ಧಾರ, ಶಾಲೆಗಳಿಗೆ ಬೆಂಚು ಡೆಸ್ಕು ವಿತರಣೆ, ಶುದ್ಧ ಕುಡಿಯುವ ನೀರಿನ ಘಟಕಗಳ ರಚನೆ, ಶಾಲೆಗಳ ಕಟ್ಟಡ, ಶೌಚಾಲಯ, ಕೃಷಿ ಚಟುವಟಿಕೆಗಳಿಗೆ ಉತ್ತೇಜನ ಹೀಗೆ ಹತ್ತು ಹಲವಾರು ಕಾರ್ಯಕ್ರಮ ಮಾಡುವುದರ ಮೂಲಕ ಪೂಜ್ಯರು ಕರ್ನಾಟಕದ ಸಮಗ್ರ ವಿಕಾಸಕ್ಕೆ ಶ್ರಮಿಸುತ್ತಿದ್ದಾರೆ ಎಂದರು.ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಶ್ರೀಕಾಂತ ಅವರು ತಾಲೂಕಿನ ವ್ಯಾಪ್ತಿಯಲ್ಲಿ ಒಂದು ವರ್ಷದಲ್ಲಿ ಯೋಜನೆಯ ಮೂಲಕ ಅನುಷ್ಠಾನ ಮಾಡಿದ ಕಾರ್ಯಕ್ರಮಗಳ ಸಾಧನಾ ವರದಿ ಕುರಿತು ಮಾತನಾಡಿದರು.ಸಮಾಜ ಸೇವಕರಾದ ಸಂಜು ರೆಡ್ಡಿ ಅವರು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ನಮ್ಮ ಜಿಲ್ಲೆಯ ಬಡ ಜನರ ಹೊಟ್ಟೆ ತುಂಬಿಸುವುದರ ಜತೆಗೆ ಎಲ್ಲರನ್ನು ಆರ್ಥಿಕ ಸಶಕ್ತರನ್ನಾಗಿಸುವ ಕೆಲಸ ಮಾಡಿದ್ದಾರೆ ಎಂದರು.ಬ್ಯಾಂಕ್ ಆಫ್ ಬರೋಡಾದ ಜಂಟಿ ಪ್ರಬಂಧಕ ಪ್ರಕಾಶ್ ಯರೂರ ಮಠ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಬ್ಯಾಂಕ್ ಆಫ್ ಬರೋಡಾ ಬ್ಯಾಂಕಿನ ಮೂಲಕ ಸಂಘಗಳಿಗೆ ಆರ್ಥಿಕ ನೆರವನ್ನು ನೀಡುತ್ತಿರುವುದರೊಂದಿಗೆ ಜನರಲ್ಲಿ ಉಳಿತಾಯದ ಮನೋಭಾವನೆ ಮೂಡಿಸಿದೆ ಎಂದರು. ಯೋಜನೆಯ ಸಿಬ್ಬಂದಿಗಳು, ಸೇವಾ ಪ್ರತಿನಿಧಿಗಳು, ಸಿಎಸ್‌ಸಿ ಸೇವಾದಾರರು, ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಆಂತರಿಕ ಲೆಕ್ಕ ಪರಿಶೋಧಕಾರದ ಸಂತೋಷ ನಿರೂಪಿಸಿದರು. ಯೋಜನಾಧಿಕಾರಿ ಶ್ರೀ ಕಾಂತ ಸ್ವಾಗತಿಸಿದರು, ಮೇಲ್ವಿಚಾರಕ ಭೀಮರಾಯ ವಂದಿಸಿದರು.