ಸಾರಾಂಶ
ಹುಬ್ಬಳ್ಳಿ: ಧಾರವಾಡ ಮಹಾನಗರ ಪ್ರತ್ಯೇಕ ಪಾಲಿಕೆ ರಚನೆಗೆ ನಮ್ಮ ವಿರೋಧವಿಲ್ಲ. ಆದರೆ, ಸದಸ್ಯರ ಅವಧಿ ಪೂರ್ಣಗೊಳ್ಳುವ ಪೂರ್ವದಲ್ಲೇ ಮೊಟಕುಗೊಳಿಸಿ ಪಾಲಿಕೆ ವಿಸರ್ಜನೆಯ ಹುನ್ನಾರಕ್ಕೆ ನಮ್ಮ ವಿರೋಧವಿದೆ. ಕಾಂಗ್ರೆಸ್ ಸದಸ್ಯರು ಬಿಜೆಪಿ ಸದಸ್ಯರ ಬಗ್ಗೆ ಸುಳ್ಳು ಆರೋಪ ಮಾಡುವ ಮೂಲಕ ಜನರ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಹು-ಧಾ ಮಹಾನಗರ ಪಾಲಿಕೆ ಸಭಾನಾಯಕ ವೀರಣ್ಣ ಸವಡಿ ಆರೋಪಿಸಿದರು.
ಮಂಗಳವಾರ ಪಾಲಿಕೆಯ ತಮ್ಮ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಧಾರವಾಡದಲ್ಲಿ ಸೋಮವಾರ ಪಾಲಿಕೆ ಪ್ರತ್ಯೇಕಕ್ಕೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಕಾಂಗ್ರೆಸ್ ಮುಖಂಡರಾದ ಅರವಿಂದ ಏಗನಗೌಡರ, ಪಾಲಿಕೆ ವಿರೋಧ ಪಕ್ಷದ ನಾಯಕ ರಾಜಶೇಖರ ಕಮತಿ, ಸದಸ್ಯರಾದ ಶಂಭುಗೌಡ ಸಾಲಿಮನಿ, ಕವಿತಾ ಕಬ್ಬೇರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.ಧಾರವಾಡ ನಗರ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಪ್ರತ್ಯೇಕ ಪಾಲಿಕೆ ಮಾಡಲು ನಾವೆಲ್ಲ ಸೇರಿ ಚರ್ಚಿಸಿಯೇ ಈ ನಿರ್ಣಯ ತೆಗೆದುಕೊಂಡಿದ್ದೇವೆ. ಇದಕ್ಕೆ ಎಲ್ಲ ಪಕ್ಷದ ಸದಸ್ಯರು ಒಪ್ಪಿಗೆ ನೀಡಿದ್ದರು. ಈಚೆಗೆ ಶಾಸಕ ವಿನಯ ಕುಲಕರ್ಣಿ ಅವರು ಸರ್ಕಾರಕ್ಕೆ ಬರೆದ ಪತ್ರದಲ್ಲಿ ಪ್ರತ್ಯೇಕಗೊಂಡ ಧಾರವಾಡ ಮಹಾನಗರ ಪಾಲಿಕೆಗೆ ನೂತನ ಆಯುಕ್ತರು, ₹100 ಕೋಟಿ ಅನುದಾನ ಹಾಗೂ ಆಡಳಿತಾಧಿಕಾರಿ ನೇಮಕಗೊಳಿಸುವಂತೆ ಪತ್ರ ಬರೆದಿರುವುದೇ ಈಗ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೆಲ್ಲ ನೋಡಿದರೆ ಪಾಲಿಕೆ ವಿಸರ್ಜನೆ ಮಾಡುವ ಹುನ್ನಾರ ಅಡಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ನಾವೆಲ್ಲರೂ ಪಾಲಿಕೆ ವಿಸರ್ಜನೆಗೆ ವಿರೋಧಿಸಿದ್ದೇವೆಯೇ ಹೊರತು ಪ್ರತ್ಯೇಕ ಪಾಲಿಕೆಗಲ್ಲ. ಪಾಲಿಕೆ ಸದಸ್ಯರಾಗಿ ಚುನಾಯಿತರಾದ ಎಲ್ಲ ಸದಸ್ಯರ ಅಧಿಕಾರಾವಧಿ 2027ರ ಜೂನ್ ವರೆಗೆ ಇದೆ. ಆದರೆ, ಈ ಅವಧಿಯನ್ನು 2025ಲ್ಲಿಯೇ ಮುಗಿಸಲು ಸರ್ಕಾರ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.ಈ ಕುರಿತು ಸರ್ಕಾರ ಹೊರಡಿಸಿರುವ ಗೆಜೆಟ್ ನೋಟಿಫಿಕೇಷನ್ ಸ್ಪಷ್ಟವಾಗಿ ಯಾವುದೇ ಅಂಶಗಳನ್ನು ಉಲ್ಲೇಖ ಮಾಡಿಲ್ಲ. ಈ ಹಿಂದೆ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ಕುರಿತು ಚರ್ಚಿಸಿ ಬಹುಮತದಿಂದ ಆಕ್ಷೇಪಣೆ ಸಲ್ಲಿಸಲಾಗಿದೆ. ಆದರೆ, ಕೆಲವು ಕಾಂಗ್ರೆಸ್ ಸದಸ್ಯರು ಬಿಜೆಪಿಯವರಿಗೆ ಪ್ರತ್ಯೇಕ ಪಾಲಿಕೆ ರಚನೆಯಾಗುತ್ತಿರುವುದು ಇಷ್ಟವಿಲ್ಲ. ಈ ಕುರಿತು ಕೇಂದ್ರ ಸಚಿವರು, ಬಿಜೆಪಿ ಶಾಸಕರು ಪಾಲಿಕೆ ಸದಸ್ಯರ ಮೇಲೆ ಒತ್ತಡ ಹಾಕಿ ಆಕ್ಷೇಪಣೆ ಸಲ್ಲಿಸುವಂತೆ ಮಾಡಿದ್ದಾರೆ ಎಂದು ಆರೋಪಿಸುತ್ತಿರುವುದು ಶುದ್ಧ ಸುಳ್ಳು ಎಂದರು.
ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿ ಮಾತನಾಡಿ, ಕಾಂಗ್ರೆಸ್‌ನ ಅರವಿಂದ ಏಗನಗೌಡರ ಸಮರ್ಪಕ ಮಾಹಿತಿ ಪಡೆದುಕೊಂಡು ಬಿಜೆಪಿ ಮೇಲೆ ಆರೋಪ ಮಾಡಲಿ. ಈ ರೀತಿ ಸುಳ್ಳು ಆರೋಪ ಮಾಡಿ ಜನರ ದಾರಿತಪ್ಪಿಸುವ ಕೆಲಸ ಮಾಡಬೇಡಿ ಎಂದರು.ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಟ್ಲರ್ ಆಡಳಿತ ನಡೆಸುತ್ತಿದೆ. ನಮ್ಮ ಅಧಿಕಾರ ಮೊಟಕುಗೊಳಿಸಿದರೆ ಮುಂದಿನ ದಿನಗಳಲ್ಲಿ ನಾವು ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ಉಮೇಶಗೌಡ ಕೌಜಗೇರಿ, ಮಲ್ಲಿಕಾರ್ಜುನ ಗುಂಡೂರು, ಚಂದ್ರಶೇಖರ ಮನಗುಂಡಿ, ವಿಜಯಾನಂದ ಶೆಟ್ಟಿ ಸೇರಿದಂತೆ ಹಲವರಿದ್ದರು.