ಚುನಾವಣೆ ಮುಗಿದ ತಕ್ಷಣ ಬರ ನಿರ್ವಹಣೆಗೆ ಟಾಸ್ಕ್‌ಫೋರ್ಸ್‌ ರಚಿಸಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

| Published : May 06 2024, 12:33 AM IST

ಚುನಾವಣೆ ಮುಗಿದ ತಕ್ಷಣ ಬರ ನಿರ್ವಹಣೆಗೆ ಟಾಸ್ಕ್‌ಫೋರ್ಸ್‌ ರಚಿಸಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ಮಳೆ ಇಲ್ಲದ್ದಕ್ಕೆ ರೈತರಿಗೆ ಮೇವಿನಕೊರತೆ ಎದುರಾಗಿದೆ. ಜಾನುವಾರುಗಳಿಗೆ ಹಸಿ, ಒಣ ಮೇವು ಒದಗಿಸುವ ಜತೆಗೆ ಮೇವು ಬ್ಯಾಂಕ್‌ ಸ್ಥಾಪನೆ ಮಾಡಬೇಕು. ಜಾನುವಾರ ಸಾಕಣೆ ಕೇಂದ್ರ ಸ್ಥಾಪಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರಗೊಂಡಿದ್ದು, ಜಾನುವಾರುಗಳಿಗೆ ಮೇವು ಇಲ್ಲದಾಗಿದೆ. ಮತದಾನ ಮುಗಿದ ತಕ್ಷಣವೇ ಸರ್ಕಾರ ಜಾನುವಾರುಗಳಿಗೆ ಆಹಾರ ಕಿಟ್‌, ಮೇವು ಒದಗಿಸಲು ಟಾಸ್ಕ್‌ಫೋರ್ಸ್‌ ರಚನೆ ಮಾಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಎಷ್ಟು ಕೊಟ್ಟಿದೆಯೋ ಗೊತ್ತಿಲ್ಲ. ಆದರೆ, ಈ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಬರ ಪರಿಸ್ಥಿತಿಯನ್ನೂ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿದರು.

ಮಳೆ ಇಲ್ಲದ್ದಕ್ಕೆ ರೈತರಿಗೆ ಮೇವಿನಕೊರತೆ ಎದುರಾಗಿದೆ. ಜಾನುವಾರುಗಳಿಗೆ ಹಸಿ, ಒಣ ಮೇವು ಒದಗಿಸುವ ಜತೆಗೆ ಮೇವು ಬ್ಯಾಂಕ್‌ ಸ್ಥಾಪನೆ ಮಾಡಬೇಕು. ಜಾನುವಾರ ಸಾಕಣೆ ಕೇಂದ್ರ ಸ್ಥಾಪಿಸಬೇಕು. ಆದರೆ, ಇವುಗಳನ್ನು ತೆರೆಯುವ ಲಕ್ಷಣಗಳೇ ಕಾಣುತ್ತಿಲ್ಲ. ಬರ ನಿರ್ವಹಣೆಗೆ ಜಿಲ್ಲಾಧಿಕಾರಿ ಬಳಿಯೂ ಹಣವಿಲ್ಲ. ಇನ್ನು ಮೇಲಾದರೂ ಬರದಿಂದ ಕೆಂಗಟ್ಟಿರುವ ರೈತ ಸಮುದಾಯಕ್ಕೆ ಸರ್ಕಾರ ಸ್ಪಂದಿಸಬೇಕು ಎಂದು ಸಲಹೆ ಮಾಡಿದರು.

ತಮ್ಮ ಮಾತಿನುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಜೋಶಿ, ಹಾಲಿನ ದರ ಹೆಚ್ಚಳ ಮಾಡಿ ಗ್ರಾಹಕರಿಗೆ ಹೊರೆ ಮಾಡಿದ್ದರೂ, ಹೈನುಗಾರರಿಗೆ ಕಳೆದ ಏಳು ತಿಂಗಳಿನಿಂದ ಪ್ರೋತ್ಸಾಹಧನ ನೀಡಿಲ್ಲ. ₹10 ಬಾಂಡ್‌ ಪೇಪರ್‌ ಅನ್ನು ₹100ಕ್ಕೆ ಏರಿಸಲಾಗಿದೆ. ₹100 ಇದ್ದ ಬಾಂಡ್‌ ಪೇಪರ್‌ ಅನ್ನು ₹500 ಹೆಚ್ಚಳ ಮಾಡಿದ್ದಾರೆ. ಆಸ್ತಿ ನೋಂದಣಿ ಶುಲ್ಕವನ್ನು ದುಪ್ಪಟ್ಟು ಮಾಡಿದ್ದಾರೆ. ₹4.75 ಇದ್ದ ಒಂದು ಯುನಿಟ್‌ ವಿದ್ಯುತ್‌ನ್ನು ₹7.25ಕ್ಕೆ ಏರಿಸಿದ್ದಾರೆ. ವೃದ್ಯಾಪ್ಯ ವೇತನ, ಸಂಧ್ಯಾ ಸುರಕ್ಷಾ ಹಣ ಬಿಡುಗಡೆ ಮಾಡಿಲ್ಲ. ನೀರಾವರಿ ಪೈಪಿನ ಸಬ್ಸಿಡಿ ತೆಗೆದು ಹಾಕಿ ರೈತರ ಮರಣ ಶಾಸನ ಬರೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹದಾಯಿ ಯೋಜನೆ ಇಲ್ಲಿ ವರೆಗೆ ಆಗಿರುವ ಕೆಲಸಗಳು ಬಿಜೆಪಿ ಕಾಲದಲ್ಲೇ ಆಗಿದೆ. ಕಾಂಗ್ರೆಸ್‌ ಕೇವಲ ಅಡ್ಡಗಾಲು ಹಾಕುವ ಕೆಲಸ ಮಾಡಿದೆ. ಉಳಿದ ಕೆಲಸವನ್ನು ನಮ್ಮ ಸರ್ಕಾರವೇ ಮಾಡಲಿದೆ ಎಂದ ಅವರು, ಜಿಲ್ಲೆಯಲ್ಲಿ ಸಾರಿಗೆ ಸಂಪರ್ಕ ಅಭಿವೃದ್ಧಿಗೆ ಇನ್ನಷ್ಟು ಒತ್ತುಕೊಟ್ಟು, ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಹೂಡಿಕೆ ಬರುವಂತೆ ಮಾಡುವ ಚಿಂತನೆ ಇಟ್ಟುಕೊಂಡಿದ್ದೇನೆ ಎಂದರು.

ಟೂರಿಂಗ್‌ ಟಾಕೀಸ್‌ ರಾಹುಲ್‌

ಒಬಿಸಿ ಮೀಸಲಾತಿಯನ್ನು ಮುಸ್ಲಿಮರಿಗೆ ಹಂಚಿಕೆ ಮಾಡುವ, 370ನೇ ವಿಧಿ ರದ್ದುಗೊಳ್ಳಿಸುತ್ತೇವೆ ಎನ್ನುವ ಕಾಂಗ್ರೆಸ್‌ ಪ್ರಣಾಳಿಕೆಯೇ ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ತಯಾರಿಸಿದ ಮುಸ್ಲಿಂ ಲೀಗ್‌ ಪ್ರಣಾಳಿಕೆ ಇದ್ದಂತಿದೆ. ಇನ್ನು ಸಂಪತ್ತಿನ ಮರು ಹಂಚಿಕೆ ನಕ್ಸಲ್‌ವಾದದ ಮಾನಸಿಕತೆ ಇದ್ದಂತಿದೆ ಎಂದ ಹೇಳಿದರು.

ಇನ್ನು ಕಾಂಗ್ರೆಸ್‌ನ ಯುವರಾಜ ರಾಹುಲ್‌ ಅವರು ಕೇರಳದ ಜನರಿಗೆ ತಿಳಿಸದೇ ರಾಯಬರೇಲಿಗೆ ಹೋಗಿ ಸ್ಪರ್ಧೆ ಮಾಡಿದ್ದಾರೆ. ಕೇರಳದಲ್ಲಿ ಸೋಲುವ ಭೀತಿಯಿಂದಲೇ ಅಲ್ಲಿಗೆ ಹೋಗುವ ಮೂಲಕ ಟೂರಿಂಗ್‌ ಟಾಕೀಸ್‌ ರಾಹುಲ್‌ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್‌ನಿಂದ ನ್ಯಾಯ ಸಿಗಲ್ಲ ಅಂದಿದ್ದರು

ನೇಹಾ ತಂದೆ ನಿರಂಜನ ಹಿರೇಮಠ ಅವರು ಕಾಂಗ್ರೆಸ್‌ ಬೆಂಬಲಿಸುವುದಾಗಿ ಹೇಳಿದ್ದಾರಲ್ಲ ಎಂದು ಪ್ರಶ್ನೆಗೆ, ನೇಹಾ ಹತ್ಯೆ ಆದ ದಿನ ನಮ್ಮ ಸರ್ಕಾರದಿಂದ ನ್ಯಾಯ ಸಿಗಲ್ಲ, ನೀವೆ ನಮಗೆ ನ್ಯಾಯ ಕೊಡಿಸಬೇಕು ಎಂದು ನಿರಂಜನ ಅವರೇ ಕಿಮ್ಸ್‌ನಲ್ಲಿ ನನ್ನ ಬಳಿ ಹೇಳಿದ್ದರು. ಈಗ ಅವರಿಗೆ ಯಾವ ಭರವಸೆ ಸಿಕ್ಕಿದೆಯೋ ಗೊತ್ತಿಲ್ಲ ಎಂದು ಜೋಶಿ ಹೇಳಿದರು.ದಿಂಗಾಲೇಶ್ವರರ ಹಿಂದೆ ಕಾಂಗ್ರೆಸ್‌?

ತಮ್ಮ ವಿರುದ್ಧ ಪ್ರಚಾರ ಮಾಡುತ್ತಿರುವ ದಿಂಗಾಲೇಶ್ವರ ಶ್ರೀಗಳ ಹಿಂದೆ ಯಾರಿದ್ದಾರೆ ಎಂಬ ಪ್ರಶ್ನೆಗೆ ಜೋಶಿ ಅವರು, ಅವರ ಹಿಂದೆ ಯಾರಿದ್ದಾರೆ ಎನ್ನುವ ಬಗ್ಗೆ ಈಗ ಹೇಳಲ್ಲ, ಚುನಾವಣೆ ಮುಗಿದ ಮೇಲೆ ಹೇಳುತ್ತೇನೆ ಎಂದರು.

ಆಗ ಶಾಸಕ ಮಹೇಶ ಟೆಂಗಿನಕಾಯಿ ಅವರು, ನವಲಗುಂದದಲ್ಲಿ ಶ್ರೀಗಳು ನಡೆಸಿದ ಸಭೆಗೆ ಕಾಂಗ್ರೆಸ್ಸಿನವರೇ ಪರವಾನಗಿ ತೆಗೆದುಕೊಂಡಿರುವ ಪತ್ರವನ್ನು ತೋರಿಸಿದರಲ್ಲದೇ, ಇದರಿಂದ ಶ್ರೀಗಳ ಹಿಂದೆ ಯಾರಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಇದಕ್ಕೆ ಧ್ವನಿಗೂಡಿಸಿದ ಜೋಶಿ ಅವರು ಸಹ ಅಮರಗೋಳದ ಸಭೆಗೂ ಕಾಂಗ್ರೆಸ್ಸಿನವರೇ ಅನುಮತಿ ಪಡೆದಿದ್ದಾರೆ ಎಂದು ಹೇಳಿದರು.