ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕುಷ್ಠರೋಗ ಶಾಪ ಅಥವಾ ಪಾಪದಿಂದ ಬರುವ ಖಾಯಿಲೆ ಅಲ್ಲ. ಸರಿಯಾದ ಸಮಯದಲ್ಲಿ ನಿಗದಿತ ಚಿಕಿತ್ಸೆ ನೀಡುವ ಮೂಲಕ ಕುಷ್ಠರೋಗ ಗುಣಮುಖವಾಗಲು ಸಾಧ್ಯವಿದೆ. ಈ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಹೇಳಿದರು.ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಕುಷ್ಠರೋಗ ಪತ್ತೆ ಅಭಿಯಾನ ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಚಿತ್ರದುರ್ಗ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 3,98,008 ಮನೆಗಳಿವೆ. ಕುಷ್ಠರೋಗ ಪತ್ತೆಗಾಗಿ ಒಟ್ಟು 1,469 ತಂಡ ರಚನೆ ಮಾಡಲಾಗಿದೆ. ಪ್ರತಿಯೊಂದು ತಂಡದಲ್ಲಿ ಒಬ್ಬ ಆಶಾ ಕಾರ್ಯಕರ್ತೆ ಅಥವಾ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ, ಒಬ್ಬ ಪುರುಷ ಆರೋಗ್ಯ ಸ್ವಯಂ ಸೇವಕರು ಇರಲಿದ್ದಾರೆ. ಡಿ.27ರಿಂದ ಜ.11 ವರೆಗೆ 14 ದಿನಗಳ ಕಾಲ ನಿಗದಿಪಡಿಸಿದ ಮನೆಗಳ ಭೇಟಿ ಮಾಡಿ ಸಂಶಯಾಸ್ಪದ ಕುಷ್ಠ ರೋಗ ಲಕ್ಷಣ ಇರುವವರನ್ನು ಪತ್ತೆಹಚ್ಚಲಿದ್ದಾರೆ ಎಂದರು.
ಐದು ತಂಡಗಳಿಗೆ ಒಬ್ಬ ಮೇಲ್ವಿಚಾರಣಾ ಅಧಿಕಾರಿ ಇದ್ದು, ಒಟ್ಟು 293 ಮೇಲ್ವಿಚಾರಣಾ ಅಧಿಕಾರಿಗಳು ಅಭಿಯಾನದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಮನೆ ಭೇಟಿ ಮಾಡುವುದರ ಮುಖಾಂತರ ಸಂಶಯಾಸ್ಪದ ಕುಷ್ಠರೋಗಿಗಳನ್ನು ಪತ್ತೆಹಚ್ಚಿ ದೃಢಪಟ್ಟ ರೋಗಿಗೆ ರೋಗಲಕ್ಷಣಗಳಿಗನುಗುಣವಾಗಿ ಆರು ತಿಂಗಳಿಂದ ಒಂದು ವರ್ಷದ ಅವಧಿಯ ಒಳಗೆ ರೋಗಿಯ ಮನೆ ಬಾಗಿಲಿಗೆ ಉಚಿತ ಔಷಧಿ ಒದಗಿಸುವುದರ ಮುಖಾಂತರ ಕುಷ್ಠರೋಗ ಮುಕ್ತ ಚಿತ್ರದುರ್ಗ ಜಿಲ್ಲೆಯನ್ನಾಗಿಸಲು ಪಣತೊಟ್ಟಿದ್ದೇವೆ ಎಂದರು.ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ನಾಗರಾಜ್ ಮಾತನಾಡಿ, ಸಮೀಕ್ಷಾ ತಂಡದವರು ಬೆಳಗ್ಗೆ 8ರಿಂದ 11ಗಂಟೆಯ ಒಳಗೆ ಸಾರ್ವಜನಿಕರ ಮನೆ ಭೇಟಿ ಮಾಡುವರು. ಎರಡು ವರ್ಷ ಮೇಲ್ಪಟ್ಟ ಎಲ್ಲರೂ ತಮ್ಮ ದೇಹದ ಮೇಲೆ ಯಾವುದೇ ಸಂಶಯಾಸ್ಪದ ಮಚ್ಚೆಗಳಿದ್ದಲ್ಲಿ ಅವರಿಗೆ ತೋರಿಸಿರಿ ಮತ್ತು ಸಹರಿಸಬೇಕು ಎಂದು ಮನವಿ ಮಾಡಿದರು.
ಕುಷ್ಠರೋಗ ಪತ್ತೆ ಅಭಿಯಾನ ಜಾಥಾದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು, ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿಯರು ಜಾನಪದ ಕಲಾತಂಡಗಳು ಭಾಗವಹಿಸಿದ್ದರು. ಜಾಥಾವು ಜಿಲ್ಲಾ ಆಸ್ಪತ್ರೆಯ ಆವರಣದಿಂದ ಆರಂಭವಾಗಿ ಮದಕರಿ ಸರ್ಕಲ್, ತಾಲೂಕು ಕಚೇರಿ ಹಾಗೂ ನ್ಯಾಯಾಲಯ ಬೀದಿಗಳಲ್ಲಿ ಸಂಚರಿಸಿತು.ಜಿಲ್ಲಾ ಶಸ್ತ್ರಚಿಕಿತ್ಸಕ ಡಾಕ್ಟರ್ ರವೀಂದ್ರ, ಸಿ.ಎಚ್ಓ ಡಾ.ಅಭಿನವ ಆರ್. ತಾಲೂಕು ಆರೋಗ್ಯ ಅಧಿಕಾರಿ ಡಾ.ಬಿ.ವಿ.ಗಿರೀಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ, ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗೌರಮ್ಮ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಾನಕಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಮುಖ್ಯ ಆರೋಗ್ಯ ಮೇಲ್ವಿಚಾರಣಾ ಅಧಿಕಾರಿ ಎಂ.ಬಿ ಹನುಮಂತಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಗಂಗಾಧರ್ ರೆಡ್ಡಿ, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಕಚೇರಿ ಮೇಲ್ವಿಚಾರಣಾಧಿಕಾರಿ ತಂಡದ ವೈ.ತಿಪ್ಪೇಶ್, ಎಂ ಚಂದ್ರಪ್ಪ. ಕೆ.ರಾಜೇಂದ್ರ ಪ್ರಸಾದ್, ಯು.ಕಿರಣ್. ಮಂಜುನಾಥ. ಓಂಕಾರ ಸ್ವಾಮಿ ಜಾಥಾದಲ್ಲಿ ಪಾಲ್ಗೊಂಡಿದ್ದರು.