ಹಂಪಿಯ ಶಿಥಿಲ ಸ್ಮಾರಕ ಗುರುತಿಸಲು ಸಮಿತಿ ರಚನೆ

| Published : May 24 2024, 12:55 AM IST / Updated: May 24 2024, 01:27 PM IST

ಸಾರಾಂಶ

ಹಂಪಿಯಲ್ಲಿ ಮಳೆಗೆ ಶ್ರೀವಿರೂಪಾಕ್ಷೇಶ್ವರ ರಥಬೀದಿಯ ಸಾಲುಮಂಟಪದ ಎರಡು ಮಂಟಪಗಳು ಉರುಳಿವೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ಹಂಪಿಯ ಸ್ಮಾರಕಗಳ ವೀಕ್ಷಣೆಗೆ ದೇಶ, ವಿದೇಶಿ ಪ್ರವಾಸಿಗರು ಆಗಮಿಸುತ್ತಿದ್ದರೂ ಈ ಅಪರೂಪದ ಸ್ಮಾರಕಗಳ ಸಂರಕ್ಷಣೆ ಒತ್ತು ನೀಡಲಾಗುತ್ತಿಲ್ಲ ಎಂಬ ಕೂಗು ಎದ್ದಿದೆ. ಭಾರತೀಯ ಪುರಾತತ್ವ ಇಲಾಖೆ ಹಂಪಿಯಲ್ಲಿರುವ ಸ್ಮಾರಕ, ಮಂಟಪ, ದೇವಾಲಯಗಳು ಶಿಥಿಲಾವಸ್ಥೆಗೆ ತಲುಪಿರುವುದನ್ನು ಗುರುತಿಸುವ ಕಾರ್ಯಕ್ಕೆ ಮುಂದಾಗಿದೆ.

ಹಂಪಿಯಲ್ಲಿ ಮಳೆಗೆ ಶ್ರೀವಿರೂಪಾಕ್ಷೇಶ್ವರ ರಥಬೀದಿಯ ಸಾಲುಮಂಟಪದ ಎರಡು ಮಂಟಪಗಳು ಉರುಳಿವೆ. ಈ ಮಂಟಪಗಳಲ್ಲಿ ವಿಜಯನಗರ ಅರಸರ ಕಾಲದಲ್ಲಿ ವಜ್ರ, ವೈಢೂರ್ಯ, ಮುತ್ತು, ರತ್ನಗಳನ್ನು ಬಳ್ಳದಿಂದ ಅಳೆಯಲಾಗುತ್ತಿತ್ತು ಎಂದು ಆಗಿನ ಕಾಲಕ್ಕೆ ಹಂಪಿಗೆ ಬಂದಿದ್ದ ವಿದೇಶಿ ಪ್ರವಾಸಿಗರೇ ಹೇಳಿದ್ದಾರೆ. ಹೀಗಿದ್ದರೂ ಹಂಪಿ ಈ ಸಾಲು ಮಂಟಪಗಳ ಸಂರಕ್ಷಣೆ ಹಾಗೂ ಜೀರ್ಣೋದ್ಧಾರಕ್ಕೆ ವೇಗ ದೊರೆತಿಲ್ಲ ಎಂಬ ದೂರುಗಳಿವೆ.

ಹಂಪಿಯ ಶ್ರೀವಿರೂಪಾಕ್ಷೇಶ್ವರ ರಥಬೀದಿಯ ಸಾಲು ಮಂಟಪಗಳಲ್ಲಿ ಈ ಹಿಂದೆ ಅಂಗಡಿ-ಮುಂಗಟ್ಟುಗಳನ್ನು ನಡೆಸಲಾಗುತ್ತಿತ್ತು. 2009-10ರಲ್ಲಿ ಕಾರ್ಯಾಚರಣೆ ನಡೆಸಿ ಹಂಪಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಆಗಿನ ಜಿಲ್ಲಾಡಳಿತ ತೆರವು ಮಾಡಿತ್ತು. ಬಳಿಕ ಪುರಾತತ್ವ ಇಲಾಖೆ ಸುಪರ್ದಿಗೆ ಒಪ್ಪಿಸಲಾಗಿತ್ತು. ಹೀಗಿದ್ದರೂ ಈ ಸ್ಮಾರಕಗಳನ್ನು ಜೀರ್ಣೋದ್ಧಾರ ಮಾಡುವ ಕೆಲಸ ಮಾತ್ರ ವೇಗ ಪಡೆದಿಲ್ಲ ಎಂಬುದು ಸ್ಮಾರಕಪ್ರಿಯರ ಅಭಿಪ್ರಾಯ.

ಸಮಿತಿ ರಚನೆ:

ಭಾರತೀಯ ಪುರಾತತ್ವ ಇಲಾಖೆಯ ಹಂಪಿ ವಲಯದಿಂದ ಈಗ ಪರಿಣತ ಅಧಿಕಾರಿಗಳ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿ ಹಂಪಿಯಲ್ಲಿ ಶಿಥಿಲಾವಸ್ಥೆಗೆ ತಲುಪಿರುವ ದೇವಾಲಯ, ಮಂಟಪಗಳು, ಸ್ಮಾರಕಗಳನ್ನು ಗುರುತಿಸಿ ವರದಿ ನೀಡಲಿದೆ. ಈ ವರದಿ ಆಧಾರದಲ್ಲಿ ಕ್ರಮ ವಹಿಸಲು ಪುರಾತತ್ವ ಇಲಾಖೆಯ ಹಂಪಿ ವಲಯ ನಿರ್ಧರಿಸಿದೆ.

2019-20ರಿಂದಲೇ ಹಂಪಿಯ ಸಾಲುಮಂಟಪಗಳ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳಲಾಗಿದೆ. ಆಗ ₹2 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿತ್ತು. ಈಗಲೂ ಜೀರ್ಣೋದ್ಧಾರ ಕಾರ್ಯ ನಡೆಸಲಾಗುತ್ತಿದೆ. ರಥಬೀದಿಯ ಸಾಲು ಮಂಟಪಗಳ ಸಮಗ್ರ ಜೀರ್ಣೋದ್ಧಾರಕ್ಕಾಗಿ ₹30 ಕೋಟಿ ವೆಚ್ಚ ತಗುಲಲಿದೆ ಎನ್ನುತ್ತವೆ ಪುರಾತತ್ವ ಇಲಾಖೆಯ ಮೂಲಗಳು.

ಈ ಹಿಂದೆಯೂ ಹಂಪಿಯಲ್ಲಿ ಗಾಳಿ-ಮಳೆಗೆ ಸ್ಮಾರಕಗಳು ಉರುಳಿ ಬಿದ್ದಿದ್ದವು. ಆಗಲೂ ಜಿರ್ಣೋದ್ಧಾರ ಕಾರ್ಯ ನಡೆಸಲಾಗಿತ್ತು. ಈಗಲೂ ಆ ಕಾರ್ಯ ನಡೆಯುತ್ತಿದೆ ಎನ್ನುತ್ತಾರೆ ಅಧಿಕಾರಿಗಳು. ಈ ಹಿಂದೆ ಹಂಪಿಯ ಕುದುರೆಗೊಂಬೆ ಮಂಟಪ, ವರಾಹ ದೇವಾಲಯ, ಶ್ರೀಕೃಷ್ಣ ದೇವಾಲಯದ ಆವರಣದಲ್ಲಿ ಮಂಟಪಗಳು, ಕಮಲ ಮಹಲ್‌ ಬಳಿ ಕೋಟೆಗೋಡೆ, ಶ್ರೀವಿರೂಪಾಕ್ಷೇಶ್ವರ ರಥಬೀದಿಯ ಮಂಟಪಗಳು, ಮಾಲವ್ಯಂತ ರಘುನಾಥ ದೇವಾಲಯದ ಗಾಳಿ ಗೋಪುರಗಳು ಕೂಡ ಉರುಳಿದ್ದವು. ಆಗ ಜೀರ್ಣೋದ್ಧಾರ ಕೈಗೊಳ್ಳಲಾಗಿತ್ತು. ಈಗ ಈ ಮಂಟಪ ಕೂಡ ಜೀರ್ಣೋದ್ಧಾರ ಮಾಡಲಾಗುವುದು ಎಂದು ಪುರಾತತ್ವ ಇಲಾಖೆ ತಿಳಿಸಿದೆ.

ಹಂಪಿಯ ಸ್ಮಾರಕಗಳನ್ನು ಸಂರಕ್ಷಣೆ ಮಾಡಬೇಕು. ಯುನೆಸ್ಕೊ ಪಟ್ಟಿಯಲ್ಲಿದ್ದರೂ ಗಾಳಿ-ಮಳೆಗೆ ಬೀಳುವ ಹಂತಕ್ಕೆ ತಲುಪಿರುವ ಸ್ಮಾರಕಗಳನ್ನು ಗುರುತಿಸಿ, ಜೀರ್ಣೋದ್ಧಾರ ಕೈಗೊಳ್ಳಲಾಗುತ್ತಿಲ್ಲ ಎನ್ನುತ್ತಾರೆ ವಿಜಯನಗರ ಸ್ಮಾರಕ ಸಂಸ್ಕೃತಿ ಸೇನೆ ಅಧ್ಯಕ್ಷ ಡಾ. ವಿಶ್ವನಾಥ ಮಾಳಗಿ.

ಶಿಥಿಲಾವಸ್ಥೆಯ ಸ್ಮಾರಕ, ಮಂಟಪ, ದೇಗುಲ ಗುರುತಿಸಲು ಸಮಿತಿ ರಚಿಸಲಾಗಿದೆ. ಈ ಸಮಿತಿ ವರದಿ ಸಲ್ಲಿಸಲಿದೆ. ಬಳಿಕ ಕ್ರಮ ವಹಿಸಲಾಗುವುದು. ಮಳೆಗೆ ಬಿದ್ದ ಮಂಟಪಗಳನ್ನು ಜೀರ್ಣೋದ್ಧಾರ ಮಾಡಲಾಗುವುದು ಎನ್ನುತ್ತಾರೆ ಭಾರತೀಯ ಪುರಾತತ್ವ ಇಲಾಖೆ ಹಂಪಿ ವಲಯ ಅಧೀಕ್ಷಕ ನಿಹಿಲ್‌ ದಾಸ್‌.