ಸಾರಾಂಶ
ಘಟಪ್ರಭಾ ಅಣೆಕಟ್ಟು ಮತ್ತು ಬ್ಯಾರೇಜ್‌ಗಳ ನದಿ ಪಾತ್ರದಲ್ಲಿನ ಪ್ರವಾಹ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ತಾಂತ್ರಿಕ ಪರಿಶೀಲನೆ ಕೈಗೊಂಡು, ವಾಸ್ತವಿಕ ಅಂಶಗಳ ಒಳಗೊಂಡ ವರದಿ ಸಲ್ಲಿಸಲು ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿದೆ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರಾಜ್ಯದ ಕೃಷ್ಣಾ ಕಣಿವೆ ವ್ಯಾಪ್ತಿಯಲ್ಲಿ ಬರುವ ಕೃಷ್ಣಾ ಭಾಗ್ಯ ಜಲನಿಗಮ ಮತ್ತು ಕರ್ನಾಟಕ ನೀರಾವರಿ ನಿಗಮಗಳ ವ್ಯಾಪ್ತಿಯಲ್ಲಿನ ಘಟಪ್ರಭಾ ಅಣೆಕಟ್ಟು ಮತ್ತು ಬ್ಯಾರೇಜ್‌ಗಳ ನದಿ ಪಾತ್ರದಲ್ಲಿನ ಪ್ರವಾಹ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ತಾಂತ್ರಿಕ ಪರಿಶೀಲನೆ ಕೈಗೊಂಡು, ವಾಸ್ತವಿಕ ಅಂಶಗಳ ಒಳಗೊಂಡ ವರದಿ ಸಲ್ಲಿಸಲು ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿದೆ ಎಂದು ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ತಿಳಿಸಿದ್ದಾರೆ.ಪ್ರತಿವರ್ಷ ಸಂಭವಿಸುವ ಕೃಷ್ಣಾ ನದಿಪಾತ್ರ ಹಾಗೂ ಮುಂಗಾರಿನ ಮಳೆಗಾಲದ ಅವಧಿಯಲ್ಲಿ ಉಂಟಾಗುವ ಪ್ರವಾಹದ ಸಂದರ್ಭದಲ್ಲಿ ಗ್ರಾಮಗಳ, ಜಮೀನು ಜನಜಾನುವಾರುಗಳಿಗೆ ಆಗುತ್ತಿರುವ ತೊಂದರೆ, ಬೆಳೆ ಮತ್ತು ಆಸ್ತಿಗಳ ಹಾನಿ ಕುರಿತು ಜಲಸಂಪನ್ಮೂಲ ಇಲಾಖೆಗೆ ಸೂಕ್ತ ಅಧ್ಯಯನ ನಡೆಸಿ ವರದಿ ಪಡೆಯಲು ಮಾಡಿಕೊಂಡ ಸೂಚನೆಯಂತೆ ಸರ್ಕಾರದ ಜಲಸಂಪನ್ಮೂಲ ಇಲಾಖೆ ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತಾಂತ್ರಿಕ ಸಮಿತಿ ರಚಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಸ್ತಾಪಿತ ಅಧ್ಯಯನಕ್ಕಾಗಿ ಸರ್ಕಾರದ ಮಟ್ಟದಲ್ಲಿ ಕೂಲಂಕಷವಾಗಿ ಪರಿಶೀಲಿಸಿ ಸರ್ಕಾರವು ಪ್ರವಾಹದಿಂದ ಆಗುವ ಪರಿಣಾಮಗಳನ್ನು ಮತ್ತು ಪ್ರವಾಹ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಲು ತಂಡ ರಚಿಸಿ ಆದೇಶ ಹೊರಡಿಸಿದೆ ಎಂದಿದ್ದಾರೆ.ಸಮಿತಿಯಲ್ಲಿರುವ ಪ್ರಮುಖರು:
ಕೃಷ್ಣಾಭಾಗ್ಯ ಜಲನಿಗಮ ವ್ಯಾಪ್ತಿಯ ಆಲಮಟ್ಟಿ ಹಾಗೂ ನಾರಾಯಣಪೂರ ವಲಯದ ಮುಖ್ಯ ಅಭಿಯಂತರರು, ಕರ್ನಾಟಕ ನೀರಾವರಿ ನಿಗಮದ ಬೆಳಗಾವಿ ಹಾಗೂ ಧಾರವಾಡದ ಮುಖ್ಯ ಅಭಿಯಂತರರು, ಹಾಗೂ ನಿವೃತ್ತ ನೀರಾವರಿ ನಿಗಮದ ಕಾರ್ಯದರ್ಶಿಗಳಾದ ಸಿದ್ಧಗಂಗಪ್ಪಾ, ಹೈಡ್ರೋಲಜಿ ತಜ್ಞರಾದ ರಾಮಪ್ರಸಾದ, ನಿವೃತ್ತ ಮುಖ್ಯ ಅಭಿಯಂತರರಾದ ಪೋತದಾರ, ಅರವಿಂದ ಕಣಗಲಿ, ಎಮ್ ನಾರಾಯಣ ಅವರನ್ನು ತಜ್ಞರ ಸಮಿತಿಯಲ್ಲಿ ಸರ್ಕಾರ ಸೇರಿಸಿದೆ.ಒಂದು ತಿಂಗಳ ಕಾಲಾವಕಾಶ:
ತಜ್ಞರ ಸಮಿತಿಯೂ ಜಲಾಶಗಳ ಒಳಹರಿವು ಮತ್ತು ಹೊರಹರಿವು ಆಧರಿಸಿ ನದಿ ಪಾತ್ರದಲ್ಲಿನ ಪ್ರವಾಹ ಉಂಟಾಗದಂತೆ ನಿಯಂತ್ರಿತವಾಗಿ ನೀರಿನ ಪ್ರಮಾಣದ ಕುರಿತು ಅಧ್ಯಯನ, ಜಲಾಶಯಗಳ ಹಿನ್ನೀರಿನಲ್ಲಿ ಬಾಧಿತ ಜಮೀನು ಹಾಗೂ ಗ್ರಾಮಗಳ ಆಸ್ತಿಪಾಸ್ತಿಗಳ ಕುರಿತು ಪರಿಶೀಲನೆ. ಹಿಪ್ಪರಗಿ ಜಲಾಶಯದಿಂದ ಹಿನ್ನೀರಿನ ಶೇಕರಣೆಯಿಂದ ಹಾಗೂ ಹೆಚ್ಚುವರಿ ಪ್ರವಾಹದ ಕುರಿತು ಅಧ್ಯಯನ ಸೇರಿದಂತೆ ಪ್ರವಾಹ ನಿಯಂತ್ರಣ ಮತ್ತು ಸಮನ್ವಯ ಸಾಧನೆಗೆ ಬೇಕಾದ ಅಂಶಗಳ ಬಗ್ಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.