ಕಾವೇರಿ ನದಿ ನೀರಿನ ಮಾಲಿನ್ಯ ತಡೆಗೆ ಮಾರ್ಗೋಪಾಯ ಕಂಡುಕೊಳ್ಳಲು ತಜ್ಞರ ಸಮಿತಿ ರಚನೆ

| Published : Jul 05 2024, 12:47 AM IST

ಕಾವೇರಿ ನದಿ ನೀರಿನ ಮಾಲಿನ್ಯ ತಡೆಗೆ ಮಾರ್ಗೋಪಾಯ ಕಂಡುಕೊಳ್ಳಲು ತಜ್ಞರ ಸಮಿತಿ ರಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾವೇರಿ ನದಿ ನೀರಿನ ಮಾಲಿನ್ಯ ತಡೆಗೆ ತುರ್ತು ಮಾರ್ಗೋಪಾಯಗಳ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯ ಪರಿಸರ ಅಧಿಕಾರಿ ನಿರಂಜನ್‌ ಅಧ್ಯಕ್ಷತೆಯಲ್ಲಿ ಒಂಬತ್ತು ಮಂದಿಯ ತಜ್ಞರ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶಿಸಿದ್ದು, ಜು. 9ರೊಳಗಾಗಿ ವರದಿ ನೀಡುವಂತೆ ತಿಳಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಾವೇರಿ ನದಿಗೆ ಒಳಚರಂಡಿ ನೀರು, ಕೈಗಾರಿಕಾ ತ್ಯಾಜ್ಯ, ಘನತ್ಯಾಜ್ಯ ಸೇರ್ಪಡೆಯಾಗಿ ಮಲಿನವಾಗುತ್ತಿದೆ. ಸುತ್ತಲಿನ ಪರಿಸರ ಹಾಳಾಗುತ್ತಿದೆ. ನದಿಯಲ್ಲಿನ ಜಲಚರಗಳು, ನದಿ ಆಶ್ರಯಿಸಿರುವ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವುದರಿಂದ ಸೂಕ್ತ ಕ್ರಮ ಕೈಗೊಳ್ಳಬೇಕು. ತ್ಯಾಜ್ಯ ನೀರು ಸೇರ್ಪಡೆ ತಡೆಯಲು ತಜ್ಞರ ಸಮಿತಿ ರಚಿಸುವಂತೆ ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಈ ಪತ್ರಕ್ಕೆ ಸ್ಪಂದಿಸಿ ಅರಣ್ಯ ಇಲಾಖೆ ಸಮಿತಿ ರಚಿಸಿ ಆದೇಶಿಸಿದೆ. ಸಮಿತಿಯ ಅಧ್ಯಕ್ಷರಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯ ಪರಿಸರ ಅಧಿಕಾರಿ ನಿರಂಜನ್‌, ಸದಸ್ಯರನ್ನಾಗಿ ಮೈಸೂರಿನ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್‌, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧೀಕ್ಷಕ ಎಂಜಿನಿಯರ್‌, ಮೈಸೂರು ಪಾಲಿಕೆಯ ಅಧೀಕ್ಷಕ ಎಂಜನಿಯರ್‌, ಮೈಸೂರು ವಿ.ವಿ. ಪರಿಸರ ವಿಜ್ಞಾನ ಅಧ್ಯಯನ ವಿಭಾಗದ ಮುಖ್ಯಸ್ಥ, ಮೈಸೂರಿನ ಚಾಮರಾಜೇಂದ್ರ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಪ್ರಾಧ್ಯಾಪಕ ಡಾ. ಬಿ.ಮನೋಜ್‌ಕುಮಾರ್‌, ಕೆಐಎಡಿಬಿ ಕಾರ್ಯನಿರ್ವಾಹಕ ಎಂಜಿನಿಯರ್‌ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿವೃತ್ತ ಹಿರಿಯ ಪರಿಸರ ಅಧಿಕಾರಿ ಎಂ.ಬಿ. ಪ್ರಕಾಶ್‌ ನೇಮಿಸಲಾಗಿದೆ. ಮೈಸೂರಿನ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿಯನ್ನು ಸದಸ್ಯ ಸಂಯೋಜಕರನ್ನಾಗಿ ನಿಯೋಜಿಸಲಾಗಿದೆ.

ತಮ್ಮ ಪತ್ರಕ್ಕೆ ಸ್ಪಂದಿಸಿ ತಜ್ಞರ ಸಮಿತಿ ರಚಿಸಿರುವ ಸರ್ಕಾರಕ್ಕೆ ದಿನೇಶ್‌ ಗೂಳಿಗೌಡ ಅಭಿನಂದನೆ ಸಲ್ಲಿಸಿದ್ದಾರೆ