ಸಾರಾಂಶ
- ಪುತ್ರರು, ಮುಖಂಡರ ಸಮೇತ ಸಚಿವ ಮಲ್ಲಿಕಾರ್ಜುನ ಸಮ್ಮುಖ ಕಾಂಗ್ರೆಸ್ ಸೇರ್ಪಡೆ
- - - ಕನ್ನಡಪ್ರಭ ವಾರ್ತೆ, ದಾವಣಗೆರೆಜಗಳೂರು ಮಾಜಿ ಶಾಸಕ ಟಿ.ಗುರುಸಿದ್ದನಗೌಡ ತಮ್ಮ ಪುತ್ರ , ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ. ಟಿ.ಜಿ. ರವಿಕುಮಾರ ಸೇರಿದಂತೆ ತಮ್ಮ ಬೆಂಬಲಿಗರು, ಕಾರ್ಯಕರ್ತರೊಂದಿಗೆ ಶುಕ್ರವಾರ ಗಣಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸಮ್ಮುಖ ಕಾಂಗ್ರೆಸ್ಸಿಗೆ ಸೇರ್ಪಡೆಯಾದರು.
ನಗರದ ನೂತನ ಕಾಲೇಜು ರಸ್ತೆಯಲ್ಲಿರುವ ಮಾಜಿ ಶಾಸಕ ಟಿ.ಗುರುಸಿದ್ದನಗೌಡರ ನಿವಾಸಕ್ಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸಂಜೆ ಆಗಮಿಸಿದ ವೇಳೆ ಸುಮಾರು ಹೊತ್ತು ಉಭಯ ಕುಶಲೋಪರಿ, ಚರ್ಚೆ ನಡೆಸಿದರು. ಬಳಿಕ ಶಾಲು ಹೊದಿಸಿ, ಹಾರ ಹಾಕಿ, ಪಕ್ಷದ ಶಲ್ಯವನ್ನು ಹಾಕುವ ಮೂಲಕ ಗುರುಸಿದ್ದನಗೌಡ ಸೇರಿದಂತೆ ಅನೇಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸಿದರು.ಗುರುಸಿದ್ದನಗೌಡರ ಜೊತೆಗೆ ಪುತ್ರರಾದ ಡಾ. ಟಿ.ಜಿ.ರವಿಕುಮಾರ, ಟಿ.ಜಿ.ಅರವಿಂದ, ಟಿ.ಜಿ.ಪ್ರವೀಣ, ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ, ನಾಗರಾಜ ಸ್ವಾಮಿ, ಮಟ್ಟಿಕಲ್ಲು ವೀರಭದ್ರ ಸ್ವಾಮಿ, ಗೌರಿಪುರ ಶಿವಣ್ಣ, ಅನೇಕರು ಮಾತೃಪಕ್ಷ ಬಿಜೆಪಿ ತೊರೆದು, ಜಗಳೂರು ಶಾಸಕ ಬಿ.ದೇವೇಂದ್ರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜಿ.ಪುಟ್ಟಸ್ವಾಮಿ, ಕಮ್ಮತ್ತಹಳ್ಳಿ ಮಂಜುನಾಥ, ಶ್ಯಾಗಲೆ ಜಯಣ್ಣ ಇತರರ ಸಮ್ಮುಖ ಕಾಂಗ್ರೆಸ್ ಸೇರ್ಪಡೆಯಾದರು.
ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸುದ್ದಿಗಾರರೊಂದಿಗೆ ಮಾತನಾಡಿ, ಹಿರಿಯರಾದ ಮಾಜಿ ಶಾಸಕ ಟಿ.ಗುರುಸಿದ್ದನಗೌಡ ಮತ್ತು ಬೆಂಬಲಿಗರು ಕಾಂಗ್ರೆಸ್ ಸೇರಿರುವುದಿಂದ ನಮಗೆ ಆನೆ ಬಲ ಬಂದಂತಾಗಿದೆ. ಇಂತಹ ಹಿರಿಯರ ಮಾರ್ಗದರ್ಶನದಲ್ಲಿ ನಾವು ಮುನ್ನಡೆಯುತ್ತೇವೆ ಎಂದು ಹೇಳಿದರು.ಆರೈಕೆ ಆಸ್ಪತ್ರೆ ಮುಖ್ಯಸ್ಥ, ಹಿರಿಯ ಮುಖಂಡ ಡಾ. ಟಿ.ಜಿ. ರವಿಕುಮಾರ ಮಾತನಾಡಿ, ಬಿಜೆಪಿಯಲ್ಲಿ ಸರ್ವಾಧಿಕಾರಿ ಧೋರಣೆ ಖಂಡಿಸುತ್ತಲೇ ಬಂದಿದ್ದೆವು. ವಿದ್ಯಾವಂತರಿಗೆ ಅವಕಾಶ ನೀಡುವಂತೆ ಮನವಿ ಮಾಡಿದರೂ ಬಿಜೆಪಿ ಹೈಕಮಾಂಡ್ ನಮ್ಮ ಮನವಿಗೆ ಸ್ಪಂದಿಸಲಿಲ್ಲ. ಅಲ್ಲದೇ, ಸಂಸದ ಜಿ.ಎಂ. ಸಿದ್ದೇಶ್ವರರ ಏಕಸ್ವಾಮ್ಯದ ಆಡಳಿತದಿಂದ ಬೇಸತ್ತು ನಾವೆಲ್ಲರೂ ಪಕ್ಷವನ್ನು ತೊರೆದಿದ್ದೇವೆ ಎಂದು ತಿಳಿಸಿದರು.
ಒಬ್ಬ ಸಮರ್ಥ ಆಡಳಿತಗಾರ, ದೂರದೃಷ್ಟಿ ಇರುವಂತಹ ನಾಯಕ ಎಸ್.ಎಸ್.ಮಲ್ಲಿಕಾರ್ಜುನ ಅವರಂಥವರು ಸಿಕ್ಕಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಡಾ.ಪ್ರಭಾ ಮಲ್ಲಿಕಾರ್ಜುನ ವಿದ್ಯಾವಂತರಾಗಿದ್ದು, ಇಂತಹವರು ದಾವಣಗೆರೆ ಕ್ಷೇತ್ರವನ್ನು ಲೋಕಸಭೆಯಲ್ಲಿ ಪ್ರತಿನಿಧಿಸಿದರೆ ಕ್ಷೇತ್ರಕ್ಕೆ, ಕ್ಷೇತ್ರದ ಅಭಿವೃದ್ಧಿಗೆ, ಜನರಿಗೂ ಒಳ್ಳೆಯದಾಗುತ್ತದೆ ಎಂದು ಪ್ರತಿಕ್ರಿಯಿಸಿದರು.ಕಾಂಗ್ರೆಸ್ಸಿನ ಹಿರಿಯ ಮುಖಂಡರಾದ ಮೆದಗಿನಕೆರೆ ಗೌಡರ ವೀರೇಂದ್ರ ಪಾಟೀಲ, ಯುವ ಮುಖಂಡ ಅರ್ಜುನ ಗೌಡ ಇತರರು ಇದ್ದರು.
- - -(* ಒಂದೇ ಫೋಟೋ ಮಾತ್ರ ಬಳಸಿ) -12ಕೆಡಿವಿಜಿ14, 15:
ದಾವಣಗೆರೆಯಲ್ಲಿ ಜಗಳೂರು ಮಾಜಿ ಶಾಸಕ, ಬಿಜೆಪಿ ಹಿರಿಯ ಮುಖಂಡ ಟಿ.ಗುರುಸಿದ್ದನಗೌಡ ಇತರರು ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸಮ್ಮುಖ ಕಾಂಗ್ರೆಸ್ಸಿಗೆ ಸೇರ್ಪಡೆಯಾದರು.