ಜಗತ್ತಿಗೆ ಹಿಂದೂ ಧರ್ಮ ಏಕೈಕ ಆಶಾಕಿರಣ

| Published : Feb 09 2024, 01:49 AM IST

ಜಗತ್ತಿಗೆ ಹಿಂದೂ ಧರ್ಮ ಏಕೈಕ ಆಶಾಕಿರಣ
Share this Article
  • FB
  • TW
  • Linkdin
  • Email

ಸಾರಾಂಶ

ಧಾರ್ಮಿಕ ಕಾರ್ಯಕ್ರಮ ಹಾಗೂ ಜಾತ್ರೆಗಳು ದೇಶದ ಸಾಂಸ್ಕೃತಿಕ ರಾಯಭಾರಿಗಳಾಗಿವೆ. ಅಧ್ಯಾತ್ಮಿಕತೆಯನ್ನು ಅರ್ಥ ಮಾಡಿಕೊಳ್ಳದ ಪಾಶ್ಚಾತ್ಯರು ಹಾವಾಡಿಗರ ದೇಶವೆಂದು ಅಪಹಾಸ್ಯ ಮಾಡುತ್ತಿದ್ದರು. ಪರಕೀಯರ ದಾಳಿಗೆ ಒಳಗಾಗಿ ವಿಶ್ವದ ನೂರಾರು ನಾಗರಿಕತೆ ನಾಶವಾಗಿದ್ದರೂ, ಸನಾತನ ಹಿಂದೂ ಧರ್ಮ ಹಾಗೂ ಭಾರತವು ಉಳಿದಿದೆ

- ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಭಿಮತ---

ಕನ್ನಡಪ್ರಭ ವಾರ್ತೆ ಮೈಸೂರು

ಜಗತ್ತು ನಮ್ಮ ದೇಶದ ಅಧ್ಯಾತ್ಮಿಕತೆ ಹಾಗೂ ಧಾರ್ಮಿಕ ವಿಚಾರಗಳ ಬಗ್ಗೆ ಆಕರ್ಷಿತವಾಗಿವೆ. ಜಗತ್ತಿಗೆ ಹಿಂದೂ ಧರ್ಮ ಏಕೈಕ ಆಶಾಕಿರಣವಾಗಿ ಕಾಣುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ಶ್ರೀಮತ್ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಗುರುವಾರ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಧಾರ್ಮಿಕ ಕಾರ್ಯಕ್ರಮ ಹಾಗೂ ಜಾತ್ರೆಗಳು ದೇಶದ ಸಾಂಸ್ಕೃತಿಕ ರಾಯಭಾರಿಗಳಾಗಿವೆ. ಅಧ್ಯಾತ್ಮಿಕತೆಯನ್ನು ಅರ್ಥ ಮಾಡಿಕೊಳ್ಳದ ಪಾಶ್ಚಾತ್ಯರು ಹಾವಾಡಿಗರ ದೇಶವೆಂದು ಅಪಹಾಸ್ಯ ಮಾಡುತ್ತಿದ್ದರು. ಪರಕೀಯರ ದಾಳಿಗೆ ಒಳಗಾಗಿ ವಿಶ್ವದ ನೂರಾರು ನಾಗರಿಕತೆ ನಾಶವಾಗಿದ್ದರೂ, ಸನಾತನ ಹಿಂದೂ ಧರ್ಮ ಹಾಗೂ ಭಾರತವು ಉಳಿದಿದೆ ಎಂದು ಅವರು ಹೇಳಿದರು.

ಸುತ್ತೂರು ಜಾತ್ರೆ ಪ್ರತಿ ವರ್ಷ ಹೊಸತನದಿಂದ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ. ಜಾತಿ ಭೇದವಿಲ್ಲದೆ ಹಬ್ಬವಾಗಿ ಆಚರಿಸುತ್ತಿದ್ದಾರೆ. ಜಾತ್ರೆ ಕೇವಲ ಧಾರ್ಮಿಕ ಉತ್ಸವ ಅಲ್ಲ. ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಅವರು ಶ್ಲಾಘಿಸಿದರು.

ಎಷ್ಟೇ ಟೀಕೆ ಟಿಪ್ಪಣಿ ಕೇಳಿ ಬಂದರೂ ನಾನು ಮುಖ್ಯಮಂತ್ರಿ ಆಗಿದ್ದಾಗ ಮಠ ಮಾನ್ಯಗಳಿಗೆ ನೆರವು ನೀಡಿದ್ದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎನ್ನದೆ ಎಲ್ಲರಿಗೂ ನೆರವು ನೀಡಿದ್ದೆ ಎಂದರು.

ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ನನಗೆ 81 ವರ್ಷ ಆಗಿದ್ದರೂ ಮತ್ತೊಮ್ಮೆ ರಾಜ್ಯ ಪ್ರವಾಸ ಮಾಡುತ್ತೇನೆ ಎಂದು ಅವರು ತಿಳಿಸಿದರು.

----

ಬಾಕ್ಸ್...

ಮತ್ತೆ ರೈತರಿಗೆ ಪ್ರೋತ್ಸಾಹಧನ ನೀಡಲು ಆಗ್ರಹ

ಪಿಎಂ ಕೃಷಿ ಸಮ್ಮಾನ್ ಯೋಜನೆಯಲ್ಲಿ ಕೃಷಿಕರಿಗೆ ಪ್ರೋತ್ಸಾಹಧನವಾಗಿ 10000 ರೂ. ಕೊಡುತ್ತಿದ್ದೇವು. ಕೇಂದ್ರ ಸರ್ಕಾರವು 6 ಸಾವಿರ, ರಾಜ್ಯದಿಂದ 4 ಸಾವಿರ ಸೇರಿಸಿ 10 ಸಾವಿರ ನೀಡಲಾಗುತ್ತಿತ್ತು. ಆದರೆ, ಈಗಿನ ಸರ್ಕಾರ ಅದನ್ನು ನಿಲ್ಲಿಸಿದೆ. ಮತ್ತೆ ರೈತರಿಗೆ ಪ್ರೋತ್ಸಾಹಧನ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಗ್ರಹಿಸಿದರು.

ರಾಜ್ಯದಲ್ಲಿ ಭೀಕರ ಬರಗಾಲವಿದೆ. ಕೆರೆ ಕಟ್ಟೆ ಬರಿದಾಗಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಲಿದೆ. ಈಗಲೇ ಬಿಸಿಲಿನ ಬೇಗೆ ಜಾಸ್ತಿ ಆಗಿದೆ. ರೈತ ಶೇ.25 ರಷ್ಟು ಬೆಳೆಯನ್ನೂ ಬೆಳೆದಿಲ್ಲ. ಪರಸ್ಪರ ಸಹಕಾರದಿಂದ ಪರಿಸ್ಥಿತಿ ಸುಧಾರಿಸಲು ಕೈಜೋಡಿಸಬೇಕಿದೆ ಎಂದರು.