ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಕರುಣಾಮಯಿ: ಎಚ್.ಎ.ವೆಂಕಟೇಶ್ ಬಣ್ಣನೆ

| Published : Aug 21 2024, 12:35 AM IST

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಕರುಣಾಮಯಿ: ಎಚ್.ಎ.ವೆಂಕಟೇಶ್ ಬಣ್ಣನೆ
Share this Article
  • FB
  • TW
  • Linkdin
  • Email

ಸಾರಾಂಶ

ದೇವರಾಜ ಅರಸು ಅವರ ಆಡಳಿತ ಅಂತಃಕರಣದಿಂದ ಕೂಡಿತ್ತು. ವಿಧವೆಯರು, ವೃದ್ಧರು, ಅಂಗವಿಕಲರಿಗೆ ಭತ್ಯೆಗಳು, ಉಳುವವರಿಗೆ ಭೂಮಿ ಹಾಗೂ ನಿರಾಶ್ರಿತರಿಗೆ ವಸತಿಯಂತಹ ಯೋಜನೆಗಳನ್ನು ಜಾರಿಗೊಳಿಸಿ ಬಡವರನ್ನು ಬಡಿದೆಚ್ಚರಿಸುವ ಕಾರ್‍ಯಕ್ರಮಗಳನ್ನು ಜಾರಿಗೊಳಿಸಿ ಕರ್ನಾಟಕದ ಇತಿಹಾಸದಲ್ಲಿ ಚಿರಸ್ತಾಯಿಯಾಗಿ ಉಳಿದಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಾನವೀಯತೆ ಆಧಾರದ ಮೇಲೆ ಬಡವರು, ಅಸಹಾಯಕರು ಮತ್ತು ಧ್ವನಿ ಇಲ್ಲದವರಿಗೆ ವಿಶೇಷ ಕಾರ್‍ಯಕ್ರಮಗಳನ್ನು ನೀಡಿದ ಡಿ.ದೇವರಾಜ ಅರಸು ಕರುಣಾಮಯಿ ಎಂದು ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಎಚ್.ಎ.ವೆಂಕಟೇಶ್ ಬಣ್ಣಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ಸಾಮಾಜಿಕ ಪರಿವರ್ತನೆ ಹರಿಕಾರ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು 109ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.

ದೇವರಾಜ ಅರಸು ಅವರ ಆಡಳಿತ ಅಂತಃಕರಣದಿಂದ ಕೂಡಿತ್ತು. ವಿಧವೆಯರು, ವೃದ್ಧರು, ಅಂಗವಿಕಲರಿಗೆ ಭತ್ಯೆಗಳು, ಉಳುವವರಿಗೆ ಭೂಮಿ ಹಾಗೂ ನಿರಾಶ್ರಿತರಿಗೆ ವಸತಿಯಂತಹ ಯೋಜನೆಗಳನ್ನು ಜಾರಿಗೊಳಿಸಿ ಬಡವರನ್ನು ಬಡಿದೆಚ್ಚರಿಸುವ ಕಾರ್‍ಯಕ್ರಮಗಳನ್ನು ಜಾರಿಗೊಳಿಸಿ ಕರ್ನಾಟಕದ ಇತಿಹಾಸದಲ್ಲಿ ಚಿರಸ್ತಾಯಿಯಾಗಿ ಉಳಿದಿದ್ದಾರೆ ಎಂದು ಶ್ಲಾಘಿಸಿದರು.

ಅರಸು ಶೋಷಣೆ ಮತ್ತು ಬಡತನದ ವಿರುದ್ಧ ಹೋರಾಡಿ ರಾಜ್ಯದಲ್ಲಿ ಅಸಂಘಟಿತ ಸಮುದಾಯಗಳನ್ನು ಪುನರ್ ಸಂಘಟಿಸಿ ಹೊಸ ರಾಜಕೀಯ ಮನ್ವಂತರಕ್ಕೆ ನಾಂದಿ ಹಾಡಿದರು. ಕೃಷಿಕರ ಬದುಕಿಗೆ ವಿಶೇಷ ಆದ್ಯತೆ, ಹಿಂದುಳಿದವರು, ದಲಿತರು ಮತ್ತು ಅಲ್ಪಸಂಖ್ಯಾತರ ಬದುಕಿನ ಭದ್ರತೆಯಲ್ಲಿ ಬದ್ಧತೆ ಪ್ರದರ್ಶಿಸಿದ ಮಹಾನ್ ಚೇತನ ಎಂದರು.

ಹಿಂದುಳಿದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವ ಉದ್ದೇಶದಿಂದ ಎಲ್.ಜೆ.ಹಾವನೂರು ಆಯೋಗವನ್ನು ರಚಿಸಿ, ಅದರ ವರದಿ ಅನುಷ್ಠಾನಕ್ಕೆ ತಂದರು. ಸಾಮಾಜಿಕ ನ್ಯಾಯ ಅನುಷ್ಠಾನಗೊಳಿಸುವಲ್ಲಿ ಅರಸು ಅವರ ಬದ್ಧತೆ ಮೆಚ್ಚುವಂತಹುದ್ದು. ರಾಜಕೀಯ ಕಾಲಮಾನದಲ್ಲಿ ಧ್ವನಿ ಇಲ್ಲದ ಸಮುದಾಯಗಳಿಗೆ ರಾಜಕೀಯ ಬಲ ತುಂಬುವ ಕೆಲಸವನ್ನು ಮಾಡಿದರು. ಭೂ ಸುಧಾರಣೆಯಂತಹ ಕ್ರಾಂತಿಕಾರಿ ಬದಲಾವಣೆಗಳನ್ನು ತುಂಬಾ ಚಾಣಾಕ್ಷತನದಿಂದ ನಡೆಸಿದರು ಎಂದರು.

ಸಮಾರಂಭ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಸಾಮಾಜಿಕ ಪರಿವರ್ತನೆಯ ಹರಿಕಾರ ಡಿ. ದೇವರಾಜು ಅರಸು ಅವರು ಕೇವಲ ಒಬ್ಬ ರಾಜಕಾರಣಿ ಅಲ್ಲ, ಆದರ್ಶ ವ್ಯಕ್ತಿತ್ವವುಳ್ಳವರು. ಅವರ ಚಿಂತನೆಯಲ್ಲಿ, ಸಮಾಜವಾದಿ ತತ್ವ, ಅಭಿವೃದ್ಧಿಪರ ಕಾಳಜಿ, ಸಾಮಾಜಿಕ ನ್ಯಾಯ ಹಾಗೂ ಸಾಮಾಜಿಕ ಸುಧಾರಣೆಯಂತಹ ದೃಷ್ಟಿಕೋನವನ್ನು ಇಟ್ಟುಕೊಂಡಿದ್ದವರು. ಅವರನ್ನು ಒಬ್ಬ ಮಹಾನ್ ಧೀಮಂತ ನಾಯಕ ಎಂದು ಕರೆಯಬಹುದು ಎಂದರು.

ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಹಿಂದುಳಿದ ವರ್ಗಗಳ ವಸತಿ ನಿಲಯದ ವಿದ್ಯಾರ್ಥಿಗಳಾದ ಮೋಹನ್ ವಿ, ಕಾವ್ಯ ಅವರನ್ನು ಸನ್ಮಾನಿಸಲಾಯಿತು. ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಹಿಂದುಳಿದ ವರ್ಗಗಳ ವಸತಿ ನಿಲಯದ ವಿದ್ಯಾರ್ಥಿಗಳಾದ ನಿತಿನ್ ಎ, ಶ್ರೇಯಸ್ ಗೌಡ ಅವರನ್ನು ಸನ್ಮಾನಿಸಲಾಯಿತು.

ವಿವಿಧ ರೀತಿಯ ಕ್ರೀಡಾಕೂಟದಲ್ಲಿ ವಿಜೇತರಾದ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಾದ ಪ್ರೀತಮ್ ಗೌಡ, ಮನೀಶ್ ಗೌಡ, ಪುಣ್ಯಶ್ರೀ, ಸೌಮ್ಯ, ಯಶಸ್ವಿನಿ, ಭೂಮಿಕಾ, ಮಧುಸೂದನ ವಿ, ಸ್ಪಂದನ ಅವರುಗಳನ್ನು ಅಭಿನಂದಿಸಲಾಯಿತು.

ಸಮಾರಂಭದಲ್ಲಿ ಜಿಪಂ ಸಿಇಓ ಶೇಖ್ ತನ್ವೀರ್ ಆಸೀಫ್, ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್. ಸಂದೇಶ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಂ.ಎನ್ ಸುರೇಶ್, ಮುಡಾ ಸದಸ್ಯ ಎನ್. ದೊಡ್ಡಯ್ಯ, ಮುಖಂಡರಾದ ವಿ. ಆಂಜನಪ್ಪ, ಎಚ್.ಪಿ. ಸತೀಶ್, ಎಂ.ಎಸ್. ರಾಜಣ್ಣ, ಸಿದ್ದಶೆಟ್ಟಿ, ಎಂ. ಕೃಷ್ಣ, ಸಂತೆಕಸಲಗೆರೆ ಬಸವರಾಜು, ಸಾತನೂರು ರಾಜು, ಅಮ್ಜದ್‌ಪಾಷ, ರಾಜು ಗೋಂದೂಳಿ, ನಾಗರತ್ನ ಉಪ್ಪಾರ್, ರಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.