ಮಾಜಿ ಸಿಎಂ ಅರಸು ಮಹಾನ್‌ ಸಮಾಜ ಸುಧಾರಕ: ಡಾ.ಪ್ರಭಾ

| Published : Aug 21 2024, 12:40 AM IST

ಸಾರಾಂಶ

ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಸಾಮಾಜಿಕ ಪರಿವರ್ತನೆ ಹರಿಕಾರ, ಹಿಂದುಳಿದ ವರ್ಗಗಳ ಧೀಮಂತ ನಾಯಕರಾಗಿದ್ದವರು ಡಿ.ದೇವರಾಜು ಅರಸು. ಅವರು ಉಳುವವನಿಗೆ ಭೂ ಒಡೆತನ ನೀಡುವ ಕಾಯ್ದೆ ಸಮರ್ಪಕ ಜಾರಿಗೊಳಿಸುವಲ್ಲಿ ಶ್ರಮಿಸಿದರು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಡಿ.ದೇವರಾಜ ಅರಸು 109ನೇ ಜನ್ಮ ದಿನಾಚರಣೆ । ಅರಸು ಪ್ರತಿಮೆಗೆ ಮಾಲಾರ್ಪಣೆ, ಗೌರವ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಸಾಮಾಜಿಕ ಪರಿವರ್ತನೆ ಹರಿಕಾರ, ಹಿಂದುಳಿದ ವರ್ಗಗಳ ಧೀಮಂತ ನಾಯಕರಾಗಿದ್ದವರು ಡಿ.ದೇವರಾಜು ಅರಸು. ಅವರು ಉಳುವವನಿಗೆ ಭೂ ಒಡೆತನ ನೀಡುವ ಕಾಯ್ದೆ ಸಮರ್ಪಕ ಜಾರಿಗೊಳಿಸುವಲ್ಲಿ ಶ್ರಮಿಸಿದರು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಮಂಗಳವಾರ ದಾವಣಗೆರೆ-ಹರಿಹರ ರಸ್ತೆಯ ರಾಯಣ್ಣ ಸರ್ಕಲ್ ಬಳಿಯಿರುವ ಡಿ.ದೇವರಾಜು ಅರಸು ಪ್ರತಿಮೆಗೆ ಮಾಲಾರ್ಪಣೆ ಮೂಲಕ ಗೌರವ ನಮನ ಸಲ್ಲಿಸಿ, ಅನಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಆಶ್ರಯದಲ್ಲಿ ಆಯೋಜಿಸಲಾದ ಡಿ.ದೇವರಾಜ ಅರಸು 109ನೇ ಜನ್ಮ ದಿನಾಚರಣೆ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅರಸು ಮುಖ್ಯಮಂತ್ರಿಯಾಗಿ ಅನೇಕ ಸುಧಾರಣಾ ಕಾರ್ಯಕ್ರಮಗಳ ಜೊತೆಗೆ ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ನಿಲಯಗಳ ಪರಿಕಲ್ಪನೆ ರಾಜ್ಯಕ್ಕೆ ಕೊಟ್ಟಿದ್ದಾರೆ. ರಾಜಕೀಯ ವ್ಯವಸ್ಥೆಯಲ್ಲಿ ಆಡಳಿತವನ್ನು ಅತ್ಯುತ್ತಮವಾಗಿ ನಡೆಸುವ ಮೂಲಕ ಬಡವರು, ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ವಿಶೇಷ ಗಮನ ನೀಡಿದ್ದಾರೆ. ಆ ಮೂಲಕ ರಾಜ್ಯದ ಆಡಳಿತವನ್ನು ಮುನ್ನಡೆಸಿ, ಅರಸು ಧ್ವನಿ ಇಲ್ಲದವರ ಧ್ವನಿಯಾದರು ಎಂದು ತಿಳಿಸಿದರು.

ಡಿ.ದೇವರಾಜ ಅರಸು ಮುಖ್ಯಮಂತ್ರಿ ಆದಾಗ ವಿಧಾನಸೌಧದ ಮೆಟ್ಟಿಲು ಹತ್ತದವರನ್ನು ವಿಧಾನಸೌಧಕ್ಕೆ ಬರುವ ಹಾಗೆ ಮಾಡಿದರು. ಹಿಂದುಳಿದ ವರ್ಗದವರಿಗೆ ಮೀಸಲಾತಿ ಜಾರಿ ಮಾಡಿದರು. ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವತಿಯಿಂದ ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಶೈಕ್ಷಣಿಕ ಅರಿವು ಸಾಲ, ಸ್ವಉದ್ಯೋಗಕ್ಕಾಗಿ ಮತ್ತು ಆರ್ಥಿಕ ಸ್ವಾವಲಂಬನೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದರು ಎಂದರು.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ, ಅರಸು ಅವರು ಜಾರಿಗೊಳಿಸಿದ ಯೋಜನೆಗಳಿಂದಾಗಿ ಅವರನ್ನು ಸದಾ ನೆನೆಯುತ್ತೇವೆ. ಆಡಳಿತ ಸಂದರ್ಭದಲ್ಲಿ ಸರ್ವಜನಾಂಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಭೂ ಸುಧಾರಣೆ, ಜೀತ ಪದ್ಧತಿ, ಆರ್ಥಿಕ ಸಮಸಮಾಜಕ್ಕಾಗಿ ಕಾನೂನುಗಳನ್ನು ಜಾರಿಗೆ ತಂದಿದ್ದರು. ಇದರಿಂದ ರಾಜ್ಯದ ಎಲ್ಲ ವರ್ಗದವರಿಗೆ ಅನುಕೂಲವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣ ನಾಯ್ಕ ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಮಲ್ಲಿಕಾರ್ಜುನ್ ಕಲಮರಹಳ್ಳಿ ಉಪನ್ಯಾಸ ನೀಡಿದರು. ಬಿಸಿಎಂ ಅಧಿಕಾರಿ ಗಾಯತ್ರಿ ಕೆ.ಎಚ್. ಪ್ರಾಸ್ತಾವಿಕವಾಗಿ ಮಾತನಾಡಿದರು.

- - -

ಬಾಕ್ಸ್‌ * ದೇವರಾಜ ಅರಸು ದಕ್ಷ ಆಡಳಿತಗಾರ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಡಿ.ದೇವರಾಜು ಅರಸು ದಕ್ಷ ಆಡಳಿತಗಾರರಾಗಿ ಎಸ್.ಸಿ., ಎಸ್.ಟಿ. ಹಾಗೂ ಹಿಂದುಳಿದ ವರ್ಗಗಳ ಏಳಿಗೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದರು. ನಾವುಗಳು ನಮ್ಮ ಅಕ್ಕಪಕ್ಕದ ಮನೆ ಮಕ್ಕಳಿಗೆ ಇಂತಹ ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿಸಿ, ಸಹಾಯ ಮಾಡಿದರೆ ಮುಂದೊಂದಿನ ಪ್ರತಿಯೊಂದು ಮನೆಯಲ್ಲೂ ಒಬ್ಬ ದೇವರಾಜು ಅರಸು, ಡಾ. ಬಿ.ಆರ್. ಅಂಬೇಡ್ಕರ್‌ರಂಥ ಪ್ರತಿಭೆಗಳು, ಮಹಾನ್ ವ್ಯಕ್ತಿಗಳು ಹುಟ್ಟಿಕೊಳ್ಳುತ್ತಾರೆ ಎಂದು ತಿಳಿಸಿದರು.

- - - -20ಕೆಡಿವಿಜಿ40ಃ:

ದಾವಣಗೆರೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಡಿ.ದೇವರಾಜ ಅರಸು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. -20ಕೆಡಿವಿಜಿ41ಃ:

ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ನಡೆದ ಡಿ.ದೇವರಾಜ ಅರಸು ಜನ್ಮದಿನ ಕಾರ್ಯಕ್ರಮವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು.