ಸಾರಾಂಶ
ಕೆ.ಆರ್.ಪೇಟೆ : ಹುಟ್ಟೂರು, ತಾಲೂಕಿನ ಬೂಕನಕೆರೆ ಗ್ರಾಮಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಶ್ರೀಕೈವಲ್ಯೇಶ್ವರ ದೇವಾಲಯದ ಕಲ್ಯಾಣ ಮಂಟಪದ ಕಾಮಗಾರಿ ವೀಕ್ಷಣೆ ಮಾಡಿದರು.
ಯಾರ ಸಹಾಯವನ್ನೂ ಪಡೆಯದೇ ಮೆಟ್ಟಿಲು ಹತ್ತಿ ಕಾಮಗಾರಿ ವೀಕ್ಷಣೆ ಮಾಡಿದ ಯಡಿಯೂರಪ್ಪನವರು, ಗುಣ ಮಟ್ಟದ ಕೆಲಸ ನಡೆಸಿ ಆದಷ್ಟು ಜಾಗ್ರತೆಯಿಂದ ಕಲ್ಯಾಣ ಮಂಟಪ ಲೋಕಾರ್ಪಣೆಗೆ ಸಜ್ಜುಗೊಳಿಸುವಂತೆ ಸೂಚನೆ ನೀಡಿದರು.
ಗ್ರಾಮದಲ್ಲಿ ವಾಸವಿರುವ ತಮ್ಮ ಸಹೋದರಿ ಅನಾರೋಗ್ಯ ಪೀಡಿತರಾಗಿದ್ದ ಹಿನ್ನೆಲೆಯಲ್ಲಿ ಪುಟ್ಟಾಮಣಿಯಮ್ಮ ಅವರ ಆರೋಗ್ಯ ವಿಚಾರಿಸಿದರು. ನಂತರ ಮನೆ ದೇವರು ಪವಾಡ ಪುರುಷ ಕಾಪನಹಳ್ಳಿ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಲೋಕಕಲ್ಯಾಣಕ್ಕಾಗಿ ಪ್ರಾರ್ಥನೆ ಮಾಡಿದ ಯಡಿಯೂರಪ್ಪ ಅವರನ್ನು ಶ್ರೀ ಸ್ವತಂತ್ರ ಚನ್ನವೀರಯ್ಯ ಸ್ವಾಮೀಜಿ ಹೃದಯ ಸ್ಪರ್ಶಿಯಾಗಿ ಬರಮಾಡಿಕೊಂಡರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ, ನಾನು ಮನೆ ದೇವರ ಪೂಜೆಗೆ ಬಂದಿದ್ದೇನೆ. ರಾಜಕಾರಣದ ಬಗ್ಗೆ ಮಾತನಾಡಲ್ಲ. ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಒಳ ಜಗಳ, ಗುಂಪುಗಾರಿಕೆ, ಭಿನ್ನಮತವೆಲ್ಲವೂ ತಾನೇ ತಾನಾಗಿಯೇ ಸರಿಯಾಗುತ್ತದೆ. ಕಾದು ನೋಡಿ ಎಂದಷ್ಟೆ ಉತ್ತರ ನೀಡಿದರು.
ಇದಕ್ಕೂ ಮುನ್ನ ಕಾಪನಹಳ್ಳಿ ಗವಿಮಠ ಸುಕ್ಷೇತ್ರಕ್ಕೆ ಆಗಮಿಸಿದ ಯಡಿಯೂರಪ್ಪ ಅವರನ್ನು ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ತೋಟಪ್ಪಶೆಟ್ಟಿ, ವೀರಶೈವ ಸಮಾಜದ ಮುಖಂಡ ಬ್ಯಾಂಕ್ ಪರಮೇಶ್ವರ್, ಬೂಕನಕೆರೆ ಮಧುಸೂದನ್, ಪುಟ್ಟರಾಜು, ಬೂಕನಕೆರೆ ಗ್ರಾಪಂ ಅಧ್ಯಕ್ಷ ಶ್ಯಾಮ್ ಪ್ರಸಾದ್, ಮಾಜಿ ಸಚಿವ ನಾರಾಯಣ ಗೌಡರ ಆಪ್ತ ಸಹಾಯಕ ದಯಾನಂದ, ಸಿಂದಘಟ್ಟ ಅರವಿಂದ್, ಎಸ್. ಸಿ.ಅಶೋಕ್, ಪ್ರಮೀಳಾ ವಾರದರಾಜೇಗೌಡ, ಚಂದ್ರಕಲಾ ರಮೇಶ್ ಸೇರಿದಂತೆ ಗವಿಮಠದ ಭಕ್ತರು ಹಾಗೂ ನೂರಾರು ಬಿಜೆಪಿ ಕಾರ್ಯಕರ್ತರು ಬರಮಾಡಿಕೊಂಡರು.
;Resize=(128,128))
;Resize=(128,128))
;Resize=(128,128))