ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಾಜಕೀಯ ಜಂಜಾಟ ಮರೆತು ಸಾಹಿತ್ಯದ ಕಡೆ ಮುಖ ಮಾಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ತಿಲಕ್ ನಗರದಲ್ಲಿರುವ ಡಯಾನ ಬುಕ್ ಗ್ಯಾಲರಿಗೆ ಶನಿವಾರ ಭೇಟಿ ನೀಡಿ, ಬುಕ್ ಗ್ಯಾಲರಿಯ ಎಲ್ಲ ವಿಭಾಗಗಳನ್ನು ಸಂದರ್ಶಿಸಿದರು. ಸಾಹಿತಿಗಳ ಕೃತಿಗಳು, ಪತ್ರಕರ್ತರ ಬರಹಗಳು, ಜನಪದ ಕಲೆ ಸಾಹಿತ್ಯ ಮೊದಲಾದ ಪುಸ್ತಕಗಳ ಬಂಡಾರ ವೀಕ್ಷಣೆ ಮಾಡಿದ ಬಿಎಸ್ ವೈ, ಎಸ್. ಎಲ್. ಭೈರಪ್ಪ ನವರ ಪರ್ವ, ಪತ್ರಕರ್ತ ವಿಶ್ವೇಶ್ವರ ಭಟ್ ರವರ ಸಂಪಾದಕರ ಸದ್ಯ ಶೋಧನೆ ಪುಸ್ತಕಗಳನ್ನು ಖರೀದಿಸಿದರು. ಇದೇ ಸಂದರ್ಭದಲ್ಲಿ ಅವರಿಗೆ ಬುಕ್ ಗ್ಯಾಲರಿಯ ಮಾಲೀಕರು ಅಭಿನಂದಿಸಿ, ಎಸ್.ಎಲ್. ಭೈರಪ್ಪ ಅವರ “ಪರ್ವ " ಕಾದಂಬರಿಯನ್ನು ನೀಡಿದರು.ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರಿಗೆ ಸಂಸದ ಬಿ.ವೈ. ರಾಘವೇಂದ್ರ ಮತ್ತು ಕುಟುಂಬಸ್ಥರು ಸಾಥ್ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಶಿವಮೊಗ್ಗ ಒಂದು ಸಾಹಿತ್ಯಿಕ ಜಿಲ್ಲೆಯಾಗಿದ್ದು, ರಾಜ್ಯಕ್ಕೆ ಈ ಬುಕ್ ಗ್ಯಾಲರಿ ಮಾದರಿಯಾಗಿದೆ. ಎಲ್ಲಾ ರೀತಿಯ ಸಾಹಿತ್ಯದ ಪುಸ್ತಕಗಳು ಇಲ್ಲಿ ದೊರೆಯುತ್ತಿದ್ದು, ಅಭೂತಪೂರ್ವ ಪುಸ್ತಕ ಭಂಡಾರವನ್ನು ಇಲ್ಲಿ ತೆರೆದಿದ್ದಾರೆ. ಮಕ್ಕಳು ಮತ್ತು ಎಲ್ಲಾ ವರ್ಗದವರಲ್ಲೂ ಜ್ಞಾನ ಭಂಡಾರವನ್ನು ಹೆಚ್ಚಿಸುವ ಈ ಪುಸ್ತಕ ಗ್ಯಾಲರಿಯನ್ನು ತೆರೆದಿದ್ದಕ್ಕಾಗಿ ಮಾಲೀಕರಾದ ಈಶ್ವರ್ ಮತ್ತು ತಂಡದವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಎಸ್. ಚಂದ್ರಕಾಂತ್ ಅವರನ್ನು ಸನ್ಮಾನಿಸಲಾಯಿತು. ಶಾಸಕ ಡಾ. ಧನಂಜಯ ಸರ್ಜಿ ಮಾತನಾಡಿ, ವಿದ್ಯಾರ್ಥಿಗಳಿಗೆ ಈ ಬುಕ್ ಗ್ಯಾಲರಿಯಿಂದ ತುಂಬಾ ಅನುಕೂಲವಾಗಿದೆ. ವಿದ್ಯಾರ್ಥಿಗಳು ಚೀಲದಲ್ಲಿ ತುಂಬಿದ ಭತ್ತವಾಗಬಾರದು. ಭತ್ತದ ಗದ್ದೆಯೊಳಗಿನ ಭತ್ತವಾಗಬೇಕು. ಇದು ಆಗಬೇಕಾದರೆ ಪುಸ್ತಕ ಓದಬೇಕು, ಜ್ಞಾನಭಂಡಾರ ಹೆಚ್ಚಿಸಿಕೊಳ್ಳಬೇಕು. ಟಿ.ವಿ., ಮೊಬೈಲ್‌ನಿಂದ ವಿದ್ಯಾರ್ಥಿಗಳು ಚೀಲದಲ್ಲಿ ತುಂಬಿದ ಭತ್ತವಾಗುತ್ತಾರೆ ಎಂದರು. ಇಲ್ಲಿ ಎಲ್ಲಾ ಪುಸ್ತಕಗಳು ದೊರೆಯುತ್ತವೆ. ಶಿವಮೊಗ್ಗ ವಾಣಿಜ್ಯ ಮತ್ತು ಆರೋಗ್ಯದ ಹಬ್ ಆಗಿದ್ದು, ಇಲ್ಲಿ ಬುಕ್ ಗ್ಯಾಲರಿಯ ಅಗತ್ಯತೆಯನ್ನು ಈಶ್ವರ್ ಮತ್ತು ಕುಟುಂಬ ಪೂರೈಸಿದ್ದಾರೆ. ಅವರ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು. ಹಾಗೂ ಸಂಪಾದಕ ಚಂದ್ರಕಾಂತ್ ಅವರು ಕಿರಿಯರಿಗೆ ಮತ್ತು ಎಲ್ಲಾ ರಾಜಕಾರಣಿಗಳಿಗೆ ಮಾರ್ಗದರ್ಶಕರಾಗಿದ್ದಾರೆ ಎಂದರು.
ಶಾಸಕ ಡಿ.ಎಸ್. ಅರುಣ್ ಮಾತನಾಡಿ, ಪತ್ರಿಕೋದ್ಯಮದಲ್ಲಿ ಅರ್ಧ ದಶಕದ ಅನುಭವವನ್ನು ಚಂದ್ರಕಾಂತ್ ಅವರು ಹೊಂದಿದ್ದಾರೆ. ಸಂವಿಧಾನದ ನಾಲ್ಕನೇ ಅಂಗ ಎಂದು ಕರೆಯಲ್ಪಡುವ ಪತ್ರಿಕೋದ್ಯಮವನ್ನು ತನ್ನದೇ ಆದ ಸಿದ್ಧಾಂತದೊಂದಿಗೆ ಕಟ್ಟಿಬೆಳೆಸಿ, ಮಾದರಿ ಪತ್ರಕರ್ತರಾಗಿ ಪತ್ರಿಕೆಗಳ ಮಹತ್ವವನ್ನು ಜನರಿಗೆ ತಿಳಿಸಿದ್ದಾರೆ. ನಮ್ಮೆನ್ನೆಲ್ಲಾ ತಿದ್ದಿ ತೀಡಿದ್ದಾರೆ. ಡಯಾನ ಬುಕ್ ಗ್ಯಾಲರಿಯಲ್ಲಿ ಅವರನ್ನು ಸನ್ಮಾನಿಸುತ್ತಿರುವುದು ನನಗೆ ಸಂತೋಷ ತಂದಿದೆ ಎಂದರು.ಈ ಸಂದರ್ಭದಲ್ಲಿ ಮಾಲೀಕರಾದ ಕೆ.ಎಲ್. ಈಶ್ವರ್, ಅವರ ಸಹೋದರ ಶಿವಾನಂದ್, ಹಿರಿಯ ಪತ್ರಕರ್ತ ವೈದ್ಯನಾಥ್, ವಿಶ್ರಾಂತ ಪ್ರಾಚಾರ್‍ಯ ಡಾ. ನಾಗಭೂಷನ್, ಎಸ್.ಎಸ್. ಜ್ಯೋತಿಪ್ರಕಾಶ್, ಬಳ್ಳೇಕೆರೆ ಸಂತೋಷ್, ರಾಜೇಶ್ ಕಾಮತ್, ಹಿತೈಷಿಗಳು ಮತ್ತು ಓದುಗರು ಉಪಸ್ಥಿತರಿದ್ದರು.