ಮಂಡ್ಯ ಜಿಲ್ಲೆಯ ಹಿರಿಯ ಚೇತನಗಳಿಗೆ ಮಾಜಿ ಸಿಎಂ ಎಚ್‌ಡಿಕೆ ನಮನ

| Published : Apr 04 2024, 01:02 AM IST

ಸಾರಾಂಶ

ಸುಮಲತಾ ಅಂಬರೀಶ್‌ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಟ್ಟಿರುವುದಕ್ಕೆ ಮೊದಲಿಗೆ ನಾನು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವರು ಬಿಜೆಪಿ ಪಕ್ಷ ಸೇರುವುದಾಗಿ ಘೋಷಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷದ ತೀರ್ಮಾನದಂತೆ ನಡೆದುಕೊಳ್ಳಬೇಕಾಗುತ್ತದೆ. ಎಲ್ಲಾ ಅಭ್ಯರ್ಥಿಗಳ ಪರವಾಗಿ ಮುಂದಿನ ದಿನಗಳಲ್ಲಿ ಕೆಲಸ ಮಾಡಬೇಕಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಬುಧವಾರ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಜಿಲ್ಲೆಯ ಹಿರಿಯ ಚೇತನಗಳಿಗೆ ನಮನ ಸಲ್ಲಿಸಿದರು.

ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿರುವ ಮಾಜಿ ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯನವರ ಸಮಾಧಿಗೆ ಮೊದಲಿಗೆ ಪುಷ್ಪನಮನ ಸಲ್ಲಿಸಿದರು. ಆ ನಂತರ ಹೊಳಲು ಗ್ರಾಮಕ್ಕೆ ತೆರಳಿ ಮಾಜಿ ಶಾಸಕ ಎಚ್.ಡಿ.ಚೌಡಯ್ಯ ಸಮಾಧಿಗೆ ಪೂಜೆ ನೆರವೇರಿಸಿದರು. ಅಲ್ಲಿಂದ ಕೀಲಾರ ಗ್ರಾಮಕ್ಕೆ ಭೇಟಿ ನೀಡಿ ನಿತ್ಯ ಸಚಿವ ಕೆ.ವಿ.ಶಂಕರಗೌಡರ ಸಮಾಧಿಗೆ ಪುಷ್ಪಮಾಲೆ ಸಮರ್ಪಿಸಿದರು.

ಬಳಿಕ ಸೂನಗಹಳ್ಳಿಗೆ ತೆರಳಿದ ಕುಮಾರಸ್ವಾಮಿ ಅವರು ಜನಪ್ರಿಯ ನಾಯಕ ಎಸ್.ಡಿ.ಜಯರಾಂ ಸಮಾಧಿಗೆ ಪೂಜೆ ಸಲ್ಲಿಸಿ, ಅಲ್ಲಿಂದ ಹನುಮಂತನಗರದಲ್ಲಿರುವ ರೈತ ಹೋರಾಟಗಾರ, ಮಾಜಿ ಸಂಸದ ಜಿ.ಮಾದೇಗೌಡರ ಸಮಾಧಿಗೆ ಪೂಜೆ ಸಮರ್ಪಿಸಿದರು. ಕೊನೆಗೆ ನಟ, ಮಾಜಿ ಸಚಿವ ಅಂಬರೀಶ್‌ ಹುಟ್ಟೂರು ದೊಡ್ಡರಸಿನಕೆರೆಗೆ ತೆರಳಿ ಅಂಬರೀಶ್‌ ಸಮಾಧಿಗೆ ಪುಷ್ಪಮಾಲೆ ಅರ್ಪಿಸಿ ಗೌರವ ನಮನ ಸಲ್ಲಿಸಿದರು. ಮಂಡ್ಯ ಹೋರಾಟಗಾರರು, ನಾಯಕರ ಸಮಾಧಿಗಳಿಗೆ ತೆರಳಿ ಪೂಜೆ ಸಲ್ಲಿಸಿರುವ ಮೈತ್ರಿ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಅವರು ಆ ಮೂಲಕ ಮಂಡ್ಯ ಮಹಾನ್ ನಾಯಕರ ಕುಟುಂಬಸ್ಥರ, ಬೆಂಬಲಿಗರ ವಿಶ್ವಾಸ ಗಳಿಸಲು ಪ್ರಯತ್ನಿಸಿದ್ದಾರೆ.

ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು, ಜೆಡಿಎಸ್‌ ಜಿಲ್ಲಾಧ್ಯಕ್ಷ ಡಿ.ರಮೇಶ್‌, ಮುಖಂಡ ಬಿ.ಆರ್‌.ರಾಮಚಂದ್ರು ಮತ್ತಿತರರು ಹಾಜರಿದ್ದರು.ಕ್ಷೇತ್ರ ಬಿಟ್ಟುಕೊಟ್ಟ ಸುಮಲತಾಗೆ ಎಚ್‌ಡಿಕೆ ಕೃತಜ್ಞತೆಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಟ್ಟ ಸಂಸದೆ ಸುಮಲತಾ ಅಂಬರೀಶ್‌ ಅವರಿಗೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಕೃತಜ್ಞತೆ ಸಲ್ಲಿಸಿದರು.

ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ ಮಾಜಿ ಶಾಸಕ ಕೆ.ಎಸ್‌. ಪುಟ್ಟಣ್ಣಯ್ಯನವರ ಸಮಾಧಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಸುಮಲತಾ ಅಂಬರೀಶ್‌ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಟ್ಟಿರುವುದಕ್ಕೆ ಮೊದಲಿಗೆ ನಾನು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವರು ಬಿಜೆಪಿ ಪಕ್ಷ ಸೇರುವುದಾಗಿ ಘೋಷಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷದ ತೀರ್ಮಾನದಂತೆ ನಡೆದುಕೊಳ್ಳಬೇಕಾಗುತ್ತದೆ. ಎಲ್ಲಾ ಅಭ್ಯರ್ಥಿಗಳ ಪರವಾಗಿ ಮುಂದಿನ ದಿನಗಳಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು.ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಗುರುವಾರ ಉಮೇದುವಾರಿಕೆ ಸಲ್ಲಿಸುತ್ತಿದ್ದೇನೆ. ನಾಮಪತ್ರ ಸಲ್ಲಿಕೆಗೂ ಮೊದಲು ಹಿರಿಯ ಹೋರಾಟಗಾರರಿಗೆ ಪುಷ್ಷ ನಮನ ಸಲ್ಲಿಸುತ್ತಿದ್ದೇನೆ. ಗುರುವಾರ ಬೆಳಗ್ಗೆ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ನಾಮಪತ್ರ ಸಲ್ಲಿಸಲಿದ್ದೇನೆ. ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ರೋಡ್ ಶೋ ಮಾಡದೆ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಲಿದ್ದೇನೆ. ನಾಮಪತ್ರ ಸಲ್ಲಿಸಿದ ಬಳಿಕ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ನುಡಿದರು.