ಸಾರಾಂಶ
ಕನ್ನಡ ಪ್ರಭ ವಾರ್ತೆ ಮಳವಳ್ಳಿಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಅಭ್ಯರ್ಥಿ ಆಗಬೇಕು ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.
ಪಟ್ಟಣದ ಶಾಂತಿ ಸಮುದಾಯ ಭವನದಲ್ಲಿ ಜೆಡಿಎಸ್ ಪರಿಶಿಷ್ಟ ಜಾತಿ ಘಟಕದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಸದಸ್ಯರು ಮಂಡ್ಯ ಜಿಲ್ಲೆಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಜಿಲ್ಲೆಯ ಜೆಡಿಎಸ್ ನಾಯಕರು ತೀರ್ಮಾನ ಕೈಗೊಂಡು ಅಭಿಪ್ರಾಯ ವ್ಯಕ್ತಪಡಿಸಿದ್ದೇವೆ ಎಂದರು.ಮಂಡ್ಯ ಕ್ಷೇತ್ರದಿಂದ ಕುಮಾರಸ್ವಾಮಿ ಅವರೇ ಅಭ್ಯರ್ಥಿಯಾಗುತ್ತಾರೆಂಬ ವಿಶ್ವಾಸವಿದೆ. ಮಾಜಿ ಪ್ರಧಾನಿ ಎಚ್ .ಡಿ. ದೇವೇಗೌಡರು ತೆಗೆದುಕೊಳ್ಳುವ ತೀರ್ಮಾನಕ್ಕೆ ಪ್ರತಿಯೊಬ್ಬರು ಬದ್ಧರಾಗಿ ಗೆಲುವಿಗೆ ಶ್ರಮಿಸಲಿದ್ದೇವೆ ಎಂದರು.
ಪರಿಶಿಷ್ಟ ಸಮುದಾಯದ ಜನರನ್ನು ಒಗ್ಗೂಡಿಸಿ ಸಂಘಟನೆ ಮಾಡಬೇಕೆಂಬ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯಾಧ್ಯಕ್ಷ ಸ್ಥಾನವನ್ನು ನೀಡಿದ್ದಾರೆ. ಜೆಡಿಎಸ್ ಕಾರ್ಯಕರ್ತರನ್ನು ರಕ್ಷಣೆ ಮಾಡುವುದು ನನ್ನ ಜವಾಬ್ದಾರಿ. ಪಕ್ಷದ ಕಾರ್ಯಕರ್ತರು ಸಹಾಯ ಕೇಳಿಕೊಂಡು ಬೇರೆ ಪಕ್ಷದವರ ಹತ್ತಿರ ಹೋಗಬೇಡಿ. ನಿಮ್ಮ ಕಷ್ಟಗಳಿಗೆ ನಾನು ಸದಾ ಇರುತ್ತೇನೆಂದು ಭರವಸೆ ನೀಡಿದರು.ಜೆಡಿಎಸ್ ನಮ್ಮ ನಿಷ್ಠೆಯನ್ನು ಪರಿಗಣಿಸಿ ಅಧಿಕಾರ ಕೊಟ್ಟಿದೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷಕ್ಕಾಗಿ ದುಡಿಯುತ್ತೇನೆ. ಇಷ್ಟೊಂದು ಪ್ರೀತಿ ವಿಶ್ವಾಸ ತೋರಿಸಿರುವ ಕಾರ್ಯಕರ್ತರ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಾಗದು. ನಮ್ಮನ್ನು ಬೆಳೆಸುವವರು, ಬೈಯುವವರು, ಸನ್ಮಾನಿಸುವವರು ಕಾರ್ಯಕರ್ತರೇ ಆಗಿರುವುದರಿಂದ ಅವರ ಭಾವನೆಗೆ ಧಕ್ಕೆ ತರುವಂತಹ ಕೆಲಸವನ್ನು ಎಂದಿಗೂ ಮಾಡುವುದಿಲ್ಲ ಎಂದರು.
ಜೆಡಿಎಸ್ ಯುವ ಘಟಕ ಜಿಲ್ಲಾಧ್ಯಕ್ಷ ರವಿಕಂಸಾರ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೂ ಜೆಡಿಎಸ್ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದ ಡಾ.ಕೆ.ಅನ್ನದಾನಿ ಅವರು 2 ಬಾರಿ ಶಾಸಕರಾಗಿ ಜನಪರ ಆಡಳಿತವನ್ನು ನೀಡುವುದರ ಜೊತೆಗೆ ಪಕ್ಷನಿಷ್ಠೆಯನ್ನು ಹೊಂದಿದ್ದ ಅವರಿಗೆ ಮತ್ತೊಮ್ಮೆ ಪರಿಶಿಷ್ಟ ವಿಭಾಗದ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿದೆ ಎಂದರು.ಕನಾ೯ಟಕ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟಲು ಡಾ.ಕೆ.ಅನ್ನದಾನಿ ಅವರು ಶ್ರಮ ವಹಿಸಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದರು. ಇದೇ ವೇಳೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಜೆಡಿಎಸ್ ಪರಿಶಿಷ್ಟ ವಿಭಾಗದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಅವರನ್ನು ಅಭಿನಂದಿಸಿ ಗೌರವಿಸಿದರು.
ವೇದಿಕೆಯಲ್ಲಿ ಮುಖಂಡರಾದ ಜಯರಾಮು, ವಿಶ್ವನಾಥ್, ಪುಟ್ಟಸ್ವಾಮಿ, ರಾಧನಾಗರಾಜು, ನಂದಕುಮಾರ್, ಪ್ರಶಾಂತ್, ಮಲ್ಲೇಗೌಡ, ನಾಗೇಶ್, ಯೋಗೇಶ್, ಪುಟ್ಟಬುದ್ದಿ, ಸತೀಶ್, ಪ್ರಭು, ನಾರಾಯಣ್, ನುರುಲ್ಲಾ, ಸಿದ್ದರಾಜು, ಶಿವಮಲ್ಲಪ್ಪ, ಹನುಮಂತು ಸೇರಿದಂತೆ ಇತರರು ಇದ್ದರು.