ತಾಲೂಕು ಪಂಚಾಯಿತಿಯಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ ಅಧ್ಯಕ್ಷತೆಯ ಸಭೆ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಪಟ್ಟಣದಲ್ಲಿ ಸರ್ಕಾರಿ ಐಟಿಐ ಕಾಲೇಜಿನ ಪ್ರವೇಶ ಆರಂಭ ಕುರಿತು ಪಪಂ. ಮುಂಭಾಗದ ಬಸ್ ತಂಗುದಾಣದ ಸಮೀಪ ಹಾಕಿದ್ದ ಜಾಹೀರಾತಿನಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ ಅವರ ಭಾವಚಿತ್ರವಿರುವ ಬ್ಯಾನರ್ ಹಾಕಿದ್ದ ಕಾಲೇಜಿನ ಪ್ರಾಂಶುಪಾಲರನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆಯಿತು.
ತಾ.ಪಂ. ಸಾಮರ್ಥ್ಯಸೌಧದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಿತಿ ಸದಸ್ಯರು ವಿಷಯ ಪ್ರಸ್ತಾಪಿಸಿ, ಕಳೆದ 4-5 ದಿನಗಳ ಹಿಂದೆ ಪಟ್ಟಣದಲ್ಲಿ ಮಾಜಿ ಸಿಎಂ ಹಾಗೂ ಮಾಜಿ ಡಿಸಿಎಂ ಭಾವಚಿತ್ರವಿರುವ ಬ್ಯಾನರ್ ಹಾಕಿರುವ ಬಗ್ಗೆ ಚಿಕ್ಕಮಗಳೂರು ಜಿಲ್ಲಾ ಉದ್ಯೋಗಾಧಿಕಾರಿ ಖಲಂದರ್‌ಖಾನ್ ಅವರನ್ನು ಪ್ರಶ್ನಿಸಿದರು. ಆದರೆ, ಈ ಬಗ್ಗೆ ನನಗೆ ಯಾವುದೇ ಮಾಹಿತಿ, ದೂರಾಗಲಿ ಬಂದಿಲ್ಲ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಖಲಂದರ್ ಖಾನ್ ಉತ್ತರಿಸಿದರು.ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಟಾನ ಸಮಿತಿ ಸದಸ್ಯ ಇಂದಿರಾನಗರ ರಘು ಸಂಬಂಧಪಟ್ಟ ಕಾಲೇಜಿನ ಪ್ರಾಂಶು ಪಾಲರನ್ನು ಸಭೆಗೆ ಕರೆಸುವಂತೆ ಪಟ್ಟು ಹಿಡಿದರು. ತಕ್ಷಣ ಜಿಲ್ಲಾ ಉದ್ಯೋಗಾಧಿಕಾರಿ ದೂರವಾಣಿ ಕರೆ ಮಾಡಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಮಂಜುನಾಥ್ ರನ್ನು ಸಭೆಗೆ ಕರೆಸಿದರು.
ಈ ಸಂದರ್ಭದಲ್ಲಿ ಸದಸ್ಯ ಇಂದಿರಾನಗರ ರಘು ಮಾತನಾಡಿ, ನೀವು ಮಕ್ಕಳಿಗೆ ಶಿಕ್ಷಣ, ತರಬೇತಿ ನೀಡುವವರು ನಿಮಗೆ ಈಗ ಯಾರು ಸಿಎಂ, ಯಾರು ಡಿಸಿಎಂ ಎಂದು ತಿಳಿದಿಲ್ಲವೇ. ಮಾಜಿ ಸಿಎಂ. ಹಾಗೂ ಮಾಜಿ ಡಿಸಿಎಂ ಭಾವಚಿತ್ರವಿರುವ ಪ್ರವೇಶಾತಿ ಪ್ರಾರಂಭದ ಬ್ಯಾನರ್ ಹಾಕಿದ್ದೀರಲ್ಲಾ? ಎಂದು ತರಾಟೆಗೆ ತೆಗೆದುಕೊಂಡರು. ಪ್ರಾಂಶುಪಾಲ ಮಂಜುನಾಥ್ ನಾನು ಈ ಸಂಸ್ಥೆಗೆ ಬಂದು ಕೇವಲ 5 ತಿಂಗಳಾಗಿದೆ. ಸಂಸ್ಥೆ ಕೆಲವು ಸಿಬ್ಬಂದಿ ಸೆನ್ಸಸ್ ಕರ್ತವ್ಯಕ್ಕೆ ತೆಗೆದುಕೊಳ್ಳಲಾಗಿದೆ. ಪ್ರವೇಶಾತಿ ಪ್ರಾರಂಭದ ಬ್ಯಾನರ್ ಅಳವಡಿಸಲು ಅತಿಥಿ ಶಿಕ್ಷಕರಿಗೆ ಜವಾಬ್ದಾರಿ ವಹಿಸಿದ್ದೆ. ಅವರು ಹೊಸ ಬ್ಯಾನರ್ ಜೊತೆಯಲ್ಲಿ ಒಂದು ಹಳೆ ಬ್ಯಾನರ್‌ನ್ನು ಕೊಟ್ಟು ಬ್ಯಾನರ್ ಅಳವಡಿಸಿದ್ದಾರೆ. ಕಣ್ತಪ್ಪಿನಿಂದಾಗಿ ಹೀಗೆ ಆಗಿದೆ ಎಂದರು. ಇದಕ್ಕೆ ಸುಮ್ಮನಾಗದ ಸದಸ್ಯರು ಈ ಉತ್ತರ ಸಮಂಜಸವಲ್ಲ. ನೀವು ಜವಾಬ್ದಾರಿಯುತ ಸ್ಥಾನದಲ್ಲಿರುವವರು. ಮೂರು ವರ್ಷದಿಂದ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ. ಈಗಿನ ಮುಖ್ಯಮಂತ್ರಿಯಾರೆಂದು ತಿಳಿದಿಲ್ಲವೇ . ಬ್ಯಾನರ್ ಅಳವಡಿಸುವಾಗ ಭಾವಚಿತ್ರ ನೋಡಿರಲಿಲ್ಲವೇ ಎಂದು ರೇಗಿದರು.
ಇಂದಿರಾನಗರ ರಘು ಪ್ರಾಂಶುಪಾಲರ ಮೇಲೆ ಏನು ಕ್ರಮ ಕೈಗೊಳ್ಳುತ್ತೀರಾ ಎಂದು ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಉದೋಗಾಧಿಕಾರಿಗಳಿಗೆ ಪ್ರಶ್ನಿಸಿದರು. ಇಲ್ಲವಾದಲ್ಲಿ ಬ್ಯಾನರ್ ಅಳವಡಿಸಲು ಜವಾಬ್ದಾರಿ ತೆಗೆದುಕೊಂಡ ಅತಿಥಿ ಶಿಕ್ಷಕರ ಮೇಲೆ ಕ್ರಮವಾಗಬೇಕೆಂದು ಸರ್ವ ಸದಸ್ಯರು ಪಟ್ಟು ಹಿಡಿದರು. ಪ್ರಾಂಶುಪಾಲ ಮಂಜುನಾಥ್ ಮಾಜಿ ಸಿಎಂ, ಮಾಜಿ ಡಿಸಿಎಂ ಅವರ ಭಾವಚಿತ್ರವಿರುವ ಬ್ಯಾನರ್ ಅಳವಡಿಸಿದ್ದು ತಪ್ಪು. ಸಂಬಂಧಪಟ್ಟ ಅತಿಥಿ ಶಿಕ್ಷಕರಿಗೆ ಈ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಬ್ಯಾನರ್ ಅಳವಡಿಸಿದ ದಿನದ ರಾತ್ರಿಯೇ ಬ್ಯಾನರ್‌ನ್ನು ತೆರವುಗೊಳಿಸಲಾಗಿದೆ. ಇನ್ನು ಮುಂದೆ ಈ ರೀತಿಯಾಗದಂತೆ ಎಚ್ಚರವಹಿಸಲಾಗುವುದು ಎಂದು ಸಭೆಯಲ್ಲಿ ಕ್ಷಮಾಪಣೆ ಕೋರಿ, ಚರ್ಚೆಗೆ ತೆರೆ ಎಳೆದರು.
ಸಭೆ ಅಧ್ಯಕ್ಷತೆಯನ್ನು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ ವಹಿಸಿದ್ದರು. ತಾಲೂಕು ಪಂಚಾಯಿತಿ ಇ.ಓ. ನವೀನ್ ಕುಮಾರ್, ಸದಸ್ಯರಾದ ಇಂದಿರಾ ನಗರ ರಘು, ನಿತ್ಯಾನಂದ, ಅಪೂರ್ವ, ಹೂವಮ್ಮ, ಸೈಯದ್ ಶಫೀರ್ ಅಹಮ್ಮದ್, ಬೇಸಿಲ್, ದೇವರಾಜ್, ನಾಗರಾಜ್, ಅನುಷ್ಠಾನ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.-- ಬಾಕ್ಸ್ --
ಸಾಮಾಜಿಕ ಜಾಲ ತಾಣದಲ್ಲಿ ವೈರಲ್ಮೇ 18ರಂದು ಬ್ಯಾನರ್ ಅಳವಟಿಸಲಾಗಿತ್ತು. ಅದರಲ್ಲಿ ಮಾಜಿ ಸಿಎಂ, ಮಾಜಿ ಡಿಸಿಎಂ ಭಾವಚಿತ್ರ ಇದ್ದದ್ದನ್ನ್ ಗಮನಿಸಲದೇ ಅಳವಡಿಸಲಾಗಿತ್ತು. ಅದನ್ನುಕಂಡ ಸಾರ್ವಜನಿಕರು ಅದರ ಫೋಟೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆದಾಗ ಐಟಿಐ ಪ್ರಾಂಶುಪಾಲರಿಗೆ ವಿಷಯ ತಿಳಿದು ತಡರಾತ್ರಿ ಬ್ಯಾನರ್ ತೆಗೆಸಲಾಗಿತ್ತು.
-- ಬಾಕ್ಸ್ --ಶಿವಮೊಗ್ಗದಿಂದ ಧರ್ಮಸ್ಥಳದ ಬಸ್ಸು ಗೆ ಆಗ್ರಹ ಸದಸ್ಯರಾದ ಇಂದಿರಾನಗರ ರಘು ಹಾಗೂ ನಿತ್ಯಾನಂದ ಮಾತನಾಡಿ, ಶಿವಮೊಗ್ಗದಿಂದ ಧರ್ಮಸ್ಥಳಕ್ಕೆ ಈ ಹಿಂದೆ ಸುಮಾರು ವರ್ಷಗಳಿಂದ ಸರ್ಕಾರಿ ಬಸ್ಸು ಸಂಚರಿಸುತ್ತಿತ್ತು. ಕಾಲಕ್ರಮೇಣ ಸಂಚಾರ ನಿಂತು ಹೋಗಿದೆ. ಶಕ್ತಿ ಯೋಜನೆ ಯಿಂದ ಮಹಿಳಾ ಪ್ರಯಾಣಿಕರಿಗೆ ಧಾರ್ಮಿಕ ಕ್ಷೇತ್ರಕ್ಕೆ ಹೋಗಿ ಬರಲು ಅನುಕೂಲವಾಗಲಿದೆ. ಆದ್ದರಿಂದ ಈ ಹಿಂದೆ ಇದ್ದಂತೆ ಶಿವಮೊಗ್ಗ, ಎನ್.ಆರ್.ಪುರ,ಕೊಪ್ಪ, ಶೃಂಗೇರಿ, ಉಜಿರೆ ಮಾರ್ಗವಾಗಿ ಧರ್ಮಸ್ಥಳಕ್ಕೆ ಬಸ್ಸು ಬಿಡಬೇಕೆಂದು ಒತ್ತಾಯಿಸಿದರು.