ಚಂದ್ರಶೇಖರ ಮನೆಗೆ ಮಾಜಿ ಸಿಎಂ ಯಡಿಯೂರಪ್ಪ ಭೇಟಿ

| Published : Apr 18 2024, 02:20 AM IST

ಸಾರಾಂಶ

ಬಿಜೆಪಿಯ ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಬಿಜೆಪಿ ದಿಗ್ಗಜ ನಾಯಕರು ಜೆಡಿಎಸ್ ಕೋರ್ ಕಮಿಟಿ ರಾಜ್ಯ ಸದಸ್ಯ ಸಿ.ವಿ. ಚಂದ್ರಶೇಖರ ಮನೆಗೆ ಭೇಟಿ ನೀಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

- ಕುತೂಹಲ ಮೂಡಿಸಿದ ಸಿವಿಸಿ ನಡೆ ಕನ್ನಡಪ್ರಭ ವಾರ್ತೆ ಕೊಪ್ಪಳ

ಸಂಸದ ಸಂಗಣ್ಣ ಕರಡಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಸಂದರ್ಭದಲ್ಲಿಯೇ ಬಿಜೆಪಿಯ ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಬಿಜೆಪಿ ದಿಗ್ಗಜ ನಾಯಕರು ಜೆಡಿಎಸ್ ಕೋರ್ ಕಮಿಟಿ ರಾಜ್ಯ ಸದಸ್ಯ ಸಿ.ವಿ. ಚಂದ್ರಶೇಖರ ಮನೆಗೆ ಭೇಟಿ ನೀಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಕರಡಿ ಬಿಜೆಪಿ ತೊರೆಯುತ್ತಿದ್ದಂತೆ ಸಿವಿಸಿ ಬಿಜೆಪಿಗೆ ಬರುತ್ತಾರೆ ಎನ್ನುವ ವದಂತಿ ಜೋರಾಗಿರುವ ಬೆನ್ನಲ್ಲೇ ಬಿಜೆಪಿ ನಾಯಕರು ಸಿವಿಸಿ ಮನೆಗೆ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ.

ಮಾಜಿ ಸಿಎಂ ಯಡಿಯೂರಪ್ಪ ಅವರೇ ಸಿವಿಸಿ ಅವರ ಮನೆಗೆ ಭೇಟಿ ನೀಡುವ ಉತ್ಸುಕತೆ ತೋರಿದ್ದರಿಂದ ಕೊಪ್ಪಳಕ್ಕೆ ಬಂದಿದ್ದ ಬಿಜೆಪಿ ನಾಯಕರೆಲ್ಲ ಸಿವಿಸಿ ಅವರ ಮನೆಗೆ ಭೇಟಿ ನೀಡಿದರು.

ಸುಮಾರು ಅರ್ಧಗಂಟೆಗೂ ಅಧಿಕ ಅವರ ನಿವಾಸದಲ್ಲಿಯೇ ಇದ್ದು, ಸುಮಾರು ಹೊತ್ತು ಕೊಪ್ಪಳ ಜಿಲ್ಲೆಯ ರಾಜಕೀಯ ಬೆಳವಣಿಗೆಯ ಕುರಿತು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.

ಬಿಜೆಪಿಯ ಮಾಜಿ ಸಚಿವ ಸಿ.ಟಿ. ರವಿ, ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ, ಮಾಜಿ ಸಚಿವ ಹಾಲಪ್ಪ ಆಚಾರ್, ಶಾಸಕ ದೊಡ್ಡನಗೌಡ ಪಾಟೀಲ್ ಅವರು ಸೇರಿದಂತೆ ಅನೇಕರಿದ್ದರು.

ಪ್ರತ್ಯೇಕ ಮಾತುಕತೆ:

ಈ ವೇಳೆಯಲ್ಲಿ ಬಿ.ಎಸ್. ಯಡಿಯೂರಪ್ಪ ಸಿವಿಸಿ ಕುಟುಂಬದವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದರು.

ಕಾಕತಾಳಿಯ:

ಕರಡಿ ಬಿಜೆಪಿಗೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರಿದ್ದ ದಿನವೇ ಬಿಜೆಪಿ ನಾಯಕರ ದಂಡು ಸಿ.ವಿ. ಚಂದ್ರಶೇಖರ ಮನೆಗೆ ಭೇಟಿ ನೀಡಿರುವುದು ಕಾಕತಾಳಿಯ.

ಬಿಜೆಪಿ ಟಿಕೆಟ್ ವಂಚಿತವಾಗಿದ್ದರಿಂದ ಸಂಸದ ಸಂಗಣ್ಣ ಕರಡಿ ಅವರ ವಿರುದ್ಧ ಬೇಸರಗೊಂಡು ಬಿಜೆಪಿಯನ್ನು ತೊರೆದಿರುವ ಸಿವಿಸಿ ಈಗ ಜೆಡಿಎಸ್ ಪಕ್ಷದಲ್ಲಿದ್ದಾರೆ. ಆದರೂ ಕೂಡ ಬಿಜೆಪಿ ನಾಯಕರೆಲ್ಲ ಸಿ.ವಿ. ಚಂದ್ರಶೇಖರ ನಿವಾಸಕ್ಕೆ ಭೇಟಿ ನೀಡಿರುವುದು, ಅವರು ಮತ್ತೆ ಬಿಜೆಪಿ ಬರುತ್ತಾರೆ ಎನ್ನುವ ವದಂತಿಗೆ ರೆಕ್ಕೆಪುಕ್ಕ ಬಂದಿದೆ.