ಕೊಪ್ಪಳ ಜಿಪಂ ಮಾಜಿ ಅಧ್ಯಕ್ಷ ಜನಾರ್ದನ ನಿಧನ

| Published : Nov 18 2024, 12:02 AM IST

ಸಾರಾಂಶ

ಕೊಪ್ಪಳ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ. ಜನಾರ್ದನ (66) ಭಾನುವಾರ ಬೆಳಗಿನ ಜಾವ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.

ಜಿಲ್ಲೆಯ ಶೌಚಾಲಯ ಕ್ರಾಂತಿಯ ಹರಿಕಾರ । ದೇಶದ ಜನರೇ ಕೊಪ್ಪಳದತ್ತ ಮುಖ ನೋಡುವಂತೆ ಮಾಡಿದ್ದರುಕನ್ನಡಪ್ರಭ ವಾರ್ತೆ ಮುನಿರಾಬಾದ್

ಕೊಪ್ಪಳ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ. ಜನಾರ್ದನ (66) ಭಾನುವಾರ ಬೆಳಗಿನ ಜಾವ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.

ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ.

ಜಿಲ್ಲೆಯ ಶೌಚಾಲಯ ಕ್ರಾಂತಿಯ ಹರಿಕಾರ:

ಟಿ. ಜನಾರ್ದನ ಕೊಪ್ಪಳ ಜಿಪಂ ಅಧ್ಯಕ್ಷರಾದಾಗ ಜಿಲ್ಲೆಯಲ್ಲಿ ಬಯಲು ಶೌಚಾಲಯ ವ್ಯಾಪಕವಾಗಿತ್ತು. ಇದನ್ನು ಗಮನಿಸಿದ ಜನಾರ್ದನ ಇದನ್ನು ಒಂದು ಸವಾಲಾಗಿ ಸ್ವೀಕರಿಸಿ, ಜಿಲ್ಲೆಯಲ್ಲಿ ಶೌಚಾಲಯ ಕ್ರಾಂತಿ ಪ್ರಾರಂಭಿಸಿದರು. ಇದು ಎಷ್ಟರ ಮಟ್ಟಿಗೆ ಜನಪ್ರಿಯವಾಯಿತು ಎಂದರೆ ಇಡೀ ರಾಷ್ಟ್ರದಲ್ಲಿ ಶೌಚಾಲಯ ನಿರ್ಮಿಸುವಲ್ಲಿ ಜಿಲ್ಲೆಯು ರಾಷ್ಟ್ರಕ್ಕೆ ಪ್ರಥಮ ಸ್ಥಾನ ಪಡೆಯಿತು. ಆತ್ಯಂತ ಹಿಂದುಳಿದ ಜಿಲ್ಲೆ ಎಂದು ಹೆಸರುವಾಸಿಯಾಗಿದ್ದ ಜಿಲ್ಲೆಯನ್ನು ಶೌಚಾಲಯ ಕ್ರಾಂತಿ ಮೂಲಕ ರಾಷ್ಟ್ರದ ಭೂಪಟದಲ್ಲಿ ನಿಲ್ಲಿಸಿ ದೇಶದ ಜನರೇ ಕೊಪ್ಪಳದತ್ತ ಮುಖ ನೋಡುವಂತೆ ಮಾಡಿದ ಕೀರ್ತಿ ಇವರದ್ದಾಗಿದೆ.

ವಿಶ್ವ ಶೌಚಾಲಯ ದಿನ:

ಸಾಮಾನ್ಯವಾಗಿ ವಿಶ್ವ ಶೌಚಾಲಯ ದಿನವನ್ನು ರಾಜ್ಯದ ರಾಜಧಾನಿಯಲ್ಲಿ ಆಯೋಜಿಸಲ್ಪಡುತ್ತಿದ್ದು, ಟಿ. ಜನಾರ್ದನ ಕೊಪ್ಪಳ ಜಿಪಂ ಅಧ್ಯಕ್ಷರಾದ ಮೇಲೆ ವಿಶ್ವ ಶೌಚಾಲಯ ದಿನಾಚರಣೆಯನ್ನು ಗ್ರಾಮೀಣ ಪ್ರದೇಶದಲ್ಲಿ ಆಚರಿಸಬೇಕೆಂದು ಆಗ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ಎಚ್.ಕೆ. ಪಾಟೀಲ್ ಮನವೊಲಿಸಿ ಹುಲಿಗಿ ಗ್ರಾಮದಲ್ಲಿ ರಾಜ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ವಿಶ್ವ ಶೌಚಾಲಯ ದಿನ ಆಚರಣೆ ಮಾಡುವಲ್ಲಿ ಯಶಸ್ವಿಯಾದರು. ಗ್ರಾಮೀಣ ಪ್ರದೇಶದಲ್ಲಿ ಈ ರೀತಿ ಕಾರ್ಯಕ್ರಮ ಮಾಡುವುದರಿಂದ ಶೌಚಾಲಯದ ಬಗ್ಗೆ ಅರಿವು ಮೂಡಿಸುವುದು ತುಂಬಾ ಪರಿಣಾಮಕಾರಿಯಾಗುತ್ತದೆ ಎಂಬುದು ಅವರ ಅನಿಸಿಕೆಯಾಗಿತ್ತು.

ಸೀಟಿ ಹೊಡೆಯುವ ಆಂದೋಲನ ಪ್ರಾರಂಭ:

ಕೊಪ್ಪಳ ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಾಕ್ಷರತಾ ಪ್ರಮಾಣ ತೀರಾ ಕಡಿಮೆ. ಇದು ಶೌಚಾಲಯ ಕ್ರಾಂತಿಗೆ ಕೊಂಚ ಅಡ್ಡಿ ಉಂಟು ಮಾಡಲು ಪ್ರಾರಂಭಿಸಿತು. ಜಿಪಂ ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ಗ್ರಾಮ ಸಭೆ ಮಾಡಿ ಗ್ರಾಮೀಣ ಪ್ರದೇಶದ ಜನರಲ್ಲಿ ಶೌಚಾಲಯ ಬಳಸುವುದರಿಂದ ಆಗುವ ಉಪಯೋಗಗಳ ಬಗ್ಗೆ ಹಾಗೂ ಬಯಲು ಶೌಚಾಲಯ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳನ್ನು ವಿವರಿಸಿದರೂ ಗ್ರಾಮೀಣ ಭಾಗದ ಜನರು ಬಯಲು ಶೌಚಾಲಯದ ಕಡೆಗೆ ಮುಖ ಮಾಡತೊಡಗಿದ್ದರು. ಇದನ್ನು ಅರಿತ ಜಿಪಂ ಅಧ್ಯಕ್ಷರಾಗಿದ್ದ ಟಿ. ಜನಾರ್ದನ ಖುದ್ದು ಅಖಾಡಕ್ಕೆ ಇಳಿದರು. ಪ್ರತಿದಿನ ಬೆಳಗ್ಗೆ 5ರಿಂದ ಗ್ರಾಮಗಳಿಗೆ ತೆರಳಿ ಬಯಲು ಶೌಚಾಲಯ ಮಾಡುತ್ತಿದ್ದ ಜನರನ್ನು ನೋಡಿ ಸೀಟಿ ಹೊಡೆದರು. ಇದರಿಂದ ಕಕ್ಕಾಬಿಕ್ಕಿಯಾದ ಜನರು ಅಲ್ಲಿಂದ ಓಡಿ ಹೋಗುತ್ತಿದ್ದರು. ಇನ್ನೂ ಮಹಿಳೆಯರನ್ನು ಕಂಡರೆ, ತಾಯಿ ಸರ್ಕಾರದಿಂದ ನಿಮ್ಮ ಮನೆಯಲ್ಲಿ ಶೌಚಾಲಯ ನಿರ್ಮಿಸಿ ಕೊಡುತ್ತೇನೆ. ಅದನ್ನು ಬಳಸಿ, ಬಯಲು ಶೌಚಕ್ಕೆ ಹೋಗಬೇಡಿ ಎಂದು ಕಾಲಿಗೆ ಬಿದ್ದು ಮನವಿ ಮಾಡುತ್ತಿದ್ದರು. ಹಳ್ಳಿ ಜನರಿಗೆ ಹಳ್ಳಿ ಭಾಷೆಯಲ್ಲಿ ತಿಳಿಸಿ ಹೇಳಿದ ಜನಾರ್ದನ ಕಾರ್ಯತಂತ್ರ ಫಲಪ್ರದವಾಯಿತು.

ಅಂತಿಮ ದರ್ಶನ ಪಡೆದ ಗಣ್ಯರು:

ಟಿ. ಜನಾರ್ದನ ಸಾವಿನ ಸುದ್ದಿ ತಿಳಿಯತ್ತಿದ್ದಂತೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಶಾಸಕರಾದ ಬಸವರಾಜ ಹಿಟ್ನಾಳ, ಅಮರೇಗೌಡ ಬಯ್ಯಾಪುರ, ಜಿಪಂ ಮಾಜಿ ಅಧ್ಯಕ್ಷ ನಗರಳ್ಳಿ, ವಿಧಾನಪರಿಷತ್ ಸದಸ್ಯ ಬಿ.ಆರ್. ಪಾಟೀಲ, ಉದ್ಯಮಿ ವೀರನಗೌಡ ಪಾಟೀಲ ಅಂತಿಮ ದರ್ಶನ ಪಡೆದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಜನಾರ್ದನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಭಾನುವಾರ ಸಂಜೆ ಟಿ. ಜನಾರ್ದನ ಅಂತಿಮ ಸಂಸ್ಕಾರವು ಮಟ್ಟಿ ಮುದ್ಲಾಪುರ ಪಕ್ಕದಲ್ಲಿರುವ ತುಂಗಭದ್ರಾ ನದಿಯ ಪಕ್ಕದಲ್ಲಿ ನಡೆಯಿತು.