ಒಳ ಮೀಸಲಾತಿ ಪ್ರಕಟಿಸಲು ಆ.10ಕ್ಕೆ ಗಡುವು ನೀಡಿದ ಮಾಜಿ ಸಚಿವ ಎ.ನಾರಾಯಣಸ್ವಾಮಿ

| Published : Jul 15 2025, 01:10 AM IST

ಒಳ ಮೀಸಲಾತಿ ಪ್ರಕಟಿಸಲು ಆ.10ಕ್ಕೆ ಗಡುವು ನೀಡಿದ ಮಾಜಿ ಸಚಿವ ಎ.ನಾರಾಯಣಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ 75 ವರ್ಷಗಳ ಸರ್ಕಾರಗಳ ಆಡಳಿತದಲ್ಲಿ ಅನೇಕ ಅಸ್ಪೃಶ್ಯ ಜಾತಿಗಳಿಗೆ ಯಾವುದೇ ರೀತಿಯ ಆರ್ಥಿಕ ಶೈಕ್ಷಣಿಕ ರಾಜಕೀಯ ಸಮಾನತೆ ಸಿಕ್ಕಿಲ್ಲ. ಅವುಗಳಲ್ಲಿ ಒಂದಾದ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿಯನ್ನು ಜಾರಿಗೆ ಮಾಡದೆ ಇನ್ನು ಯಾಕೆ ಮೀನಮೇಷ ಎಣಿಸುತ್ತಿದ್ದಾರೆ ಎಂಬ ದೊಡ್ಡ ಪ್ರಶ್ನೆ ಉದ್ಬವಿಸಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಒಳ ಮೀಸಲಾತಿ ಜಾರಿಗೆ ಸುಪ್ರೀಂ ಕೋರ್ಟ್ ಆಯಾ ರಾಜ್ಯಗಳಿಗೆ ನಿರ್ದೇಶನ ಮಾಡಿ ಆಗಸ್ಟ್ ಒಂದಕ್ಕೆ ಒಂದು ವರ್ಷವಾಗಲಿದೆ. ಆದರೂ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿ ಮಾಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಆರೋಪಿಸಿದರು.

ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಅಧಿಕಾರ ನೀಡಿದ ನಂತರ ಕರ್ನಾಟಕದಲ್ಲಿ ಅನೇಕ ಜಾತಿಗಳ ಹೆಸರುಗಳ ಗೊಂದಲ ಇದ್ದಿದ್ದು ನಿಜ. ಆದರೆ ಸರ್ಕಾರ ಅಧೀನ ಕಾರ್ಯದರ್ಶಿಗಳು ಸ್ಪಷ್ಟ ನಿರ್ದೇಶನವನ್ನು ಅಂದರೆ ಮೂಲ ಜಾತಿಯ ಹೆಸರನ್ನು ಬಹಿರಂಗಪಡಿಸಿ ಎಂದು ಗಣಿತಿದಾರರಿಗೆ ಸೂಚನೆಯನ್ನು ನೀಡಬೇಕಾಗಿತ್ತು ಎಂದರು.

ಮಾದಿಗ ಜನಾಂಗಕ್ಕೆ ಅನ್ಯಾಯ:

ಕಳೆದ 75 ವರ್ಷಗಳ ಸರ್ಕಾರಗಳ ಆಡಳಿತದಲ್ಲಿ ಅನೇಕ ಅಸ್ಪೃಶ್ಯ ಜಾತಿಗಳಿಗೆ ಯಾವುದೇ ರೀತಿಯ ಆರ್ಥಿಕ ಶೈಕ್ಷಣಿಕ ರಾಜಕೀಯ ಸಮಾನತೆ ಸಿಕ್ಕಿಲ್ಲ. ಅವುಗಳಲ್ಲಿ ಒಂದಾದ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿಯನ್ನು ಜಾರಿಗೆ ಮಾಡದೆ ಇನ್ನು ಯಾಕೆ ಮೀನಮೇಷ ಎಣಿಸುತ್ತಿದ್ದಾರೆ ಎಂಬ ದೊಡ್ಡ ಪ್ರಶ್ನೆ ಉದ್ಬವಿಸಿದೆ ಎಂದರು.

ಈಗಾಗಲೇ ಆಂಧ್ರ ಮತ್ತು ತೆಲಂಗಾಣ ಒಳಮೀಸಲಾತಿ ಜಾರಿ ಮಾಡಿವೆ. ಕರ್ನಾಟಕದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾತಿ ಸಮೀಕ್ಷೆ ಶೇ 56ರಷ್ಟು, ಗ್ರಾಮಾಂತರಗಳಲ್ಲಿ ಶೇ 90 ರಷ್ಟು ಮುಗಿದಿದ್ದು, ರಾಜ್ಯದ ಮುಖ್ಯಮಂತ್ರಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಜಾತಿ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುತ್ತಿಲ್ಲ. ವಿಶೇಷವೆಂದರೆ ಪರಿಶಿಷ್ಟ ಜಾತಿಯ ನೂರೊಂದು ಜಾತಿಗಳು ಒಳ ಮೀಸಲಾತಿ ಬಗ್ಗೆ ಹೋರಾಟವನ್ನು ಮಾಡುತ್ತಿಲ್ಲ. ಆದರೆ ಮೀಸಲಾತಿ ಮತ್ತು ಒಳ ಮೀಸಲಾತಿಗಾಗಿ 30 ವರ್ಷಗಳಿಂದ ಹೋರಾಡುರುವುದು ಮಾದಿಗ ಮತ್ತು ಉಪಜಾತಿಗಳು ಮಾತ್ರ ಎಂದರು.

ಆ.10ರೊಳಗೆ ಪ್ರಕಟಿಸಬೇಕು:

ಆದರೂ ಈ ಸರ್ಕಾರ ಆಗಸ್ಟ್ 10ರ ಒಳಗಾಗಿ ಒಳ ಮೀಸಲಾತಿ ಜಾರಿಗೊಳಿಸಬೇಕು, ಇಲ್ಲದಿದ್ದರೆ ಮಾದಿಗ ಸಂಘಟನೆಗಳ ಒಕ್ಕೂಟ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅರಬೆತ್ತಲೆ ಹೋರಾಟ ನಡೆಸಲಾಗುವುದು. ಆಗಸ್ಟ್ 10ರ ಒಳಗೆ ಮೀಸಲಾತಿ ನೀಡದಿದ್ದಲ್ಲಿ ಮುಂದೆ ಎಲ್ಲರೊಂದಿಗೆ ಚರ್ಚಿಸಿ ಕರ್ನಾಟಕ ಬಂದ್ ಮಾಡುತ್ತೇವೆ. ಈ ಹೋರಾಟದಲ್ಲಿ ಸಮುದಾಯವು ಪಕ್ಷಾತೀತವಾಗಿ ಭಾಗವಹಿಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಬಿ.ಎನ್.ಗಂಗಾಧರ್, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ಬಳ್ಳೂರು ರಾಜಣ್ಣ, ತಿರುಮಳಪ್ಪ, ಮುನಿಕೃಷ್ಣಪ್ಪ,ಪಿಳ್ಳ ಆಂಜಿನಪ್ಪ, ವೇಣು, ಆರ್ಕೇಷ್ಟ್ರಾ ಮುನಿರಾಜು, ವಿಜಯಕೃಷ್ಣ ಮತ್ತಿತರರು ಇದ್ದರು.