ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ
ಪೋಲೇನಹಳ್ಳಿ ದಲಿತ ಯುವಕ ಆನಂದನ ಕೊಲೆ ವಿಚಾರವಾಗಿ ಯಾರೇ ಅಪರಾಧಿಗಳಾಗಿದ್ದರೂ ಅವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸುವಂತೆ ಮಾಜಿ ಸಚಿವ ಎನ್.ಮಹೇಶ್ ಒತ್ತಾಯಿಸಿದರು.ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ಪೋಲೇನಹಳ್ಳಿ ಯುವಕನ ಹತ್ಯೆ ವಿಚಾರವಾಗಿ ಸೂಕ್ತ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟಿಸಿ ಎಸಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಅವರು, ಇಲ್ಲಿ ತೊಂದರೆ ಕೊಡುವ ಪೊಲೀಸ್ ಅಧಿಕಾರಿಗಳನ್ನು ಹೊರಗೆ ಹಾಕಿಸಿ, ಇದು ಪಾಳೇಗಾರರ ಆಡಳಿತವಲ್ಲ, ಪ್ರಜಾಪ್ರಭುತ್ವವಾಗಿದೆ. ಬಾಬಾಸಾಹೇಬರ ಕಾನೂನಿನ ಮೇಲೆ ನಡೆಯುತ್ತಿರುವ ಆಡಳಿತ, ನೀವು ಜಾತಿಗೋಸ್ಕರ ಕೆಲಸ ಮಾಡುವುದಾದರೆ ಅವರ ಮನೆಗೆ ಹೋಗಿ ಜೀತ ಮಾಡಿ, ನಮ್ಮದೇನೂ ತಕರಾರಿಲ್ಲ, ನೀವು ಹೊರಗೆ ಬಂದು ಯೂನಿಫಾರಂ ಹಾಕಿಕೊಂಡರೆ ಕಾನೂನು ಪ್ರಕಾರ ಕೆಲಸ ಮಾಡಿ, ಇಲ್ಲಿ ಯಾರನ್ನೂ ತಪ್ಪಿಸಿಕೊಳ್ಳೋಕೆ ಬಿಡಬಾರದು, ಆನಂದನ ಮರಣೋತ್ತರ ಪರೀಕ್ಷೆ ಮಾಡಿಸಿ ಶವ ಸಂಸ್ಕಾರ ಮಾಡಿಸಿ ಎಂದರು.ಮೃತನ ಕಟುಂಬಕ್ಕೆ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಸಕಾಲಕ್ಕೆ ದೊರಕಿಸಿ ಕೊಡಬೇಕು. ಮೃತನ ಪತ್ನಿಗೆ ಸರ್ಕಾರದಿಂದ ಉದ್ಯೋಗ ನೀಡಬೇಕು. ಈ ಪ್ರಕರಣದಲ್ಲಿ ಕೆಲವರ ಹೆಸರು ಬಿಟ್ಟು ಹೋಗಿದ್ದು, ಅವರನ್ನು ಈ ಕೂಡಲೇ ಸೇರಿಸಬೇಕೆಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ರೂಪಿಸಿರುವ ದೌರ್ಜನ್ಯ ಕಾಯ್ದೆಯಡಿ ಎಸ್ಸಿ, ಎಸ್‌ಟಿ ಸಮುದಾಯಗಳಲ್ಲಿನ ಸ್ಪರ್ಶಿಯರ ವಿರುದ್ಧವೂ ಅಟ್ರಾಸಿಟಿ ಪ್ರಕರಣ ದಾಖಲಿಸುವಂತಹ ಕಾಯ್ದೆಗಳನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಲ್ ಕಲೆಕ್ಟರ್ ರಾಮಕೃಷ್ಣ ಮತ್ತು ಪತ್ನಿ ನಾಗಮಣಿಯನ್ನು ಸೇರಿಸಿ ಬಂಧಿಸಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಸಂಚಾಲಕ ದೊಡ್ಡೇರಿ ಕಣಿಮಯ್ಯ ಮಾತನಾಡಿ, ಮಧುಗಿರಿ ವೃತ್ತ ನಿರೀಕ್ಷಕರನ್ನು ತನಿಖಾಧಿಕಾರಿಯನ್ನಾಗಿ ನೇಮಿಸದೆ ಬೇರೆ ತನಿಖಾಧಿಕಾರಿ ನೇಮಿಸಬೇಕು. ವೃತ್ತ ನಿರೀಕ್ಷಕ ಮತ್ತು ಕೊಡಿಗೇನಹಳ್ಳಿ ಉಪ ನಿರೀಕ್ಷಕರನ್ನು ಕರ್ತವ್ಯ ಲೋಪದ ಮೇರೆಗೆ ಅಮಾನತ್ತುಗೊಳಿಸಬೇಕು. ಇಲ್ಲಿವರೆಗೂ ಸಹ ಶವ ಸಂಸ್ಕಾರ ನ್ಯಾಯಯುತವಾಗಿ ನಡೆಸಿರುವುದಿಲ್ಲ, ಕಾನೂನಾತ್ಮಕವಾಗಿ ದಲಿತ ಸಂಘಟನೆ ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಶವ ಸಂಸ್ಕಾರ ನಡೆಸಬೇಕು.ಇಲ್ಲದಿದ್ದಲ್ಲಿ ಸಂಘಟನೆಯಿಂದ ಉಗ್ರ ಹೋರಾಟ ಹಮ್ಮಿ ಕೊಳ್ಳುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಜಿಪಂ ಸದಸ್ಯ ಎಸ್.ಡಿ.ಕೃಷ್ಣಪ್ಪ,ವಕೀಲ ನರಸಿಂಹಮೂರ್ತಿ,ತೊಂಡೋಟಿ ರಾಮಾಂಜಿ, ರಾಧಕೃಷ್ಣ, ಎಂ.ವೈ.ಶಿವಕುಮಾರ್, ಕದುರಪ್ಪ, ರಂಗನಾಥ್, ನರಸೀಯಪ್ಪ,ಕೊರಟಗೆರೆ ನಾಗರಾಜು ಹಾಗೂ ಡಿಎಸ್‌ಎಸ್ ಪದಾಧಿಕಾರಿಗಳು ಇತರರಿದ್ದರು.