- ನಿವೃತ್ತ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಯಶವಂತ ರಾವ್ ಒತ್ತಾಯ । ಸಿರಾಜ್ ಪರಿಚಯವೇ ಇಲ್ಲ: ಟಿ.ಶ್ರೀನಿವಾಸ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ವೇಳೆ ಮಾಜಿ ಸಚಿವ ಜಮೀರ್ ಅಹಮ್ಮದ್ ಹಾಗೂ ಕಾಂಗ್ರೆಸ್ ಮುಖಂಡ ಮಹಮ್ಮದ್ ಸಿರಾಜ್ ಮಾತುಕತೆಯ ಆಡಿಯೋ ವೈರಲ್ ಆಗಿದ್ದು, ಅದನ್ನು ರೆಕಾರ್ಡ್ ಮಾಡಿಕೊಂಡು, ಸುದ್ದಿವಾಹಿನಿಗಳಿಗೆ ನೀಡಿರುವುದರ ಹಿಂದೆ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಕುತಂತ್ರ ಇದೆ ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ಆರೋಪಿಸಿದ್ದಾರೆ.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಟಿಕಲ್ ಸೆಕ್ಷನ್ 21ರ ಪ್ರಕಾರ ಇಬ್ಬರು ವ್ಯಕ್ತಿಗಳ ಮೊಬೈಲ್ ಸಂಭಾಷಣೆ ರೆಕಾರ್ಡ್ ಮಾಡುವುದು ಮಹಾ ಅಪರಾಧ. ರಾಜ್ಯ ಸರ್ಕಾರದ ಒಬ್ಬ ಪ್ರಭಾವಿ ಮಂತ್ರಿ ಮತ್ತೊಬ್ಬ ಪ್ರಭಾವಿ ಮಂತ್ರಿಯು ಬೇರೊಬ್ಬರ ಜೊತೆ ಮಾತನಾಡುವ ಸಂಭಾಷಣೆ ರೆಕಾರ್ಡ್ ಮಾಡಿಸುವುದು ಸಾಮಾನ್ಯ ವ್ಯಕ್ತಿಗಳಿಂದ ಸಾಧ್ಯವಿಲ್ಲ. ಪೊಲೀಸ್ ಇಲಾಖೆ ಸಹಕಾರವಿಲ್ಲದೇ ಇದು ಅಸಾಧ್ಯ ಎಂದರು.
ಯಾವುದೇ ಕರೆಗಳನ್ನು ರೆಕಾರ್ಡ್ ಮಾಡುವ ವ್ಯವಸ್ಥೆ ಇರುವುದು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ. ಹಾಗಾಗಿ, ಜನಸಾಮಾನ್ಯರ ಕೈಯಿಂದ ಇದೆಲ್ಲಾ ಸಾಧ್ಯವಿಲ್ಲದ ಮಾತು. ಹಿಂದಿನ ಜಿಲ್ಲಾ ಸಚಿವರೇ ಇದೆಲ್ಲದರ ಮೂಲ ಸೂತ್ರದಾರರಾಗಿದ್ದು, ಇಡೀ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ನೂತನ ಮುಖ್ಯಮಂತ್ರಿ ಹಾಗೂ ನೂತನ ಸಚಿವರ ಪದಗ್ರಹಣದಲ್ಲೂ ಇಂತಹವರನ್ನು ಪರಿಗಣಿಸಬಾರದು ಎಂದು ಆಗ್ರಹಿಸಿದರು.
ಬೆನ್ನಿಗೆ ಚೂರಿ ಹಾಕುವ ಗುಣ ಕಾಂಗ್ರೆಸ್ ನಾಯಕರ ರಕ್ತದಲ್ಲೇ ಬಳುವಳಿಯಾಗಿದೆ ಬಂದಿದೆ. 1996ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನಯ್ಯ ಒಡೆಯರ್ ಬೆನ್ನಿಗೆ ಯಾವ ರೀತಿ ಚೂರಿ ಹಾಕಿದ್ದೀರಿ ಎಂಬುದನ್ನು ನೆನಪಿಸಿಕೊಳ್ಳಿ. ಅದೇ ರೀತಿ ಫೋನ್ ಕದ್ದಾಲಿಕೆ ಪ್ರಕರಣದಿಂದಲೇ ರಾಮಕೃಷ್ಣ ಹಗಡೆ ನೇತೃತ್ವದ ಜನತಾದಳ ಸರ್ಕಾರ ಪತನವಾಗಿದ್ದುದೂ ಇದೆ. ನಾವು, ನೀವು ಇದನ್ನೆಲ್ಲಾ ನೋಡಿದ್ದೇವೆ. ಅದೇ ರೀತಿ ಇಬ್ಬರು ವ್ಯಕ್ತಿಗಳ ಸಂಭಾಷಣೆಯನ್ನು ಕದ್ದಾಲಿಸುವುದು, ರೆಕಾರ್ಡ್ ಮಾಡಿಸುವುದೂ ಅಪರಾಧ ಎಂದು ತಿಳಿಸಿದರು.
ಎಸ್.ಎಸ್. ಮಲ್ಲಿಕಾರ್ಜುನ, ಸಮರ್ಥ ಶಾಮನೂರು ವಿಧಾನಸಭೆ ಸದಸ್ಯತ್ವವನ್ನು ಅಮಾನತ್ತಿನಲ್ಲಿಟ್ಟು, ತನಿಖೆ ಮಾಡಿಸಬೇಕು. ಒಂದುವೇಳೆ ತಪ್ಪಿತಸ್ಥರೆಂದು ಕಂಡುಬಂದರೆ ಶಾಸಕ ಸ್ಥಾನದಿಂದ ಮತ್ತು ಪಕ್ಷದಿಂದಲೇ ವಜಾ ಮಾಡಬೇಕು. ತಕ್ಷಣವೇ ನೂತನ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುವವರು, ವಿಪಕ್ಷ ನಾಯಕರು ಹಾಗೂ ರಾಜ್ಯಪಾಲರಿಗೆ ಆಡಿಯೋ ವಿಚಾರವಾಗಿ ನಿವೃತ್ತ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ಮಾಡಿಸುವಂತೆ ಪತ್ರ ಬರೆದು, ಒತ್ತಾಯಿಸುತ್ತೇವೆ ಎಂದು ಯಶವಂತ ರಾವ್ ಜಾಧವ್ ಹೇಳಿದರು.ದಕ್ಷಿಣ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ. ದಾಸಕರಿಯಪ್ಪ ಮಾತನಾಡಿ, ಬಿಜೆಪಿಯವರು ಬೆನ್ನಿಗೆ ಚೂರಿ ಹಾಕಿದ್ದಾರೆಂದು ದಕ್ಷಿಣದ ನೂತನ ಶಾಸಕರು ಹೇಳಿದ್ದಾರೆ. ನಾನೊಂದು ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಚುನಾವಣೆ ಮಾಡಿದ್ದೇನೆ. ನಾನು ಚೂರಿ ಹಾಕುವ ಕೆಲಸ ಮಾಡಿಲ್ಲ. ಮಹಮ್ಮದ್ ಸಿರಾಜ್ ಆಗಲೀ ಅಥವಾ ಜಮೀರ್ ಅಹಮ್ಮದ್ ಆಗಲಿ ನನಗೆ ಕಾಲ್ ಮಾಡಿಲ್ಲ. ಚುನಾವಣೆ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡ ಮಹಮ್ಮದ್ ಸಿರಾಜ್ ಭೇಟಿಯೇ ಆಗಿಲ್ಲ. ನನಗೆ ಸಿರಾಜ್ ಪರಿಚಯಸ್ಥರೂ ಅಲ್ಲ. ಒಂದು ವರ್ಷದ ಹಿಂದೆ ಕಾರ್ಯಕ್ರಮವೊಂದರಲ್ಲಿ ನಾನು, ಸಿರಾಜ್ ಹಾಗೂ ಅಯೂಬ್ ಪೈಲ್ವಾನ್ ಅತಿಥಿಗಳಾಗಿ ಭಾಗಿಯಾಗಿದ್ದೆವಷ್ಟೇ ಎಂದರು.
ಮಹಮ್ಮದ್ ಸಿರಾಜ್ ಭೇಟಿಯೇ ಆಗಿಲ್ಲವೆಂದಾಗ ನಾನು ಹೇಗೆ ಕಾಲಿಗೆ ಬೀಳಲಿ? ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಹಣ, ಹೆಂಡ ಹಂಚಿ ಚುನಾವಣೆ ಗೆದ್ದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸಿದ್ಧಾಂತದ ಆಧಾರದಲ್ಲಿ ನಾವು ಚುನಾವಣೆ ಮಾಡಿದ್ದೇವೆ. ಕ್ಷೇತ್ರದ 64 ಸಾವಿರ ಮತದಾರರು ಯಾವುದೇ ಹಿನ್ನೆಲೆ ಇಲ್ಲದ, ಸಾಮಾನ್ಯ ಕಾರ್ಯಕರ್ತನಿಗೆ ಆಶೀರ್ವದಿಸಿದ್ದಾರೆ. ನನ್ನ ಮೊದಲ ಚುನಾವಣೆಯಲ್ಲಿಯೇ ಇಷ್ಟೊಂದು ಮತದಾರರು ಆಶೀರ್ವದಿಸಿದ್ದಾರೆ ಎಂದು ಹೇಳಿದರು.ಒಂದು ವೇಳೆ ನಾವು ಒಪ್ಪಂದ ಮಾಡಿಕೊಂಡಿದ್ದರೆ ಗೆಲ್ಲುತ್ತಿದ್ದೆವೋ ಏನೋ? ಆದರೆ, ನಮ್ಮ ಪಕ್ಷ, ನಮ್ಮ ನಾಯಕರು, ನಮ್ಮ ಹೆತ್ತವರು ನನಗೆ ನೀತಿಗೆಟ್ಟ ರಾಜಕಾರಣ ಮಾಡುವುದನ್ನು ಕಲಿಸಿಲ್ಲ. ನೀತಿಗೆಟ್ಟ ರಾಜಕಾರಣ ಮಾಡಿದವರು ಅನುಭವಿಸಲಿ ಎಂಬುದಾಗಿ ಸ್ವತಃ ಕಾಂಗ್ರೆಸ್ಸಿನ ಹ್ಯಾರೀಸ್ ಹೇಳಿಕೆ ನೀಡಿದ್ದಾರೆ. ಮುಸ್ಲಿಮರು ಟಿಕೆಟ್ ಕೇಳಿದ್ದರು. ಸಾಮಾಜಿಕ ನ್ಯಾಯದಡಿ ಮುಸ್ಲಿಮರು 81 ಸಾವಿರ ಮತದಾರರಿದ್ದು, ಟಿಕೆಟ್ ಕೇಳಿದ್ದರಲ್ಲಿ ತಪ್ಪಿಲ್ಲ. ಬಡವರ ಮಗ ನಾನು ಇಲ್ಲಿ ಚುನಾವಣೆ ಮಾಡಿದ್ದೇನೆ. ಪ್ರಜಾಪ್ರಭುತ್ವದಲ್ಲಿ ಜನಾಶೀರ್ವಾದ ಮಾಡಿ, 64 ಸಾವಿರ ಮತ ನೀಡಿ, ಬೆಂಬಲಿಸಿದ್ದಾರೆ ಎಂದು ಅವರು ತಿಳಿಸಿದರು.
ಪಕ್ಷದ ಮುಖಂಡರಾದ ಎಂ.ಹಾಲೇಶ, ಬಿ.ರಮೇಶ ನಾಯ್ಕ, ಟಿಂಕರ್ ಮಂಜಣ್ಣ, ರಾಜು ನೀಲಗುಂದ, ಶಂಕರಗೌಡ ಬಿರಾದಾರ್, ಶಿವನಗೌಡ ಟಿ.ಪಾಟೀಲ, ಕಿಶೋರಕುಮಾರ, ಎರ್ರಿಸ್ವಾಮಿ, ಶ್ರೀನಿವಾಸ ಇತರರು ಇದ್ದರು.- - -
(ಬಾಕ್ಸ್) * ಜಮೀರ್‌ಗೆ ಸಚಿವ ಸ್ಥಾನ ತಪ್ಪಿಸಲು ಎಸ್‌ಎಸ್‌ಎಂ, ಡಿಕೆಶಿ ಷಡ್ಯಂತ್ರ ಜಮೀರ್ ಅಹ್ಮದ್ ಮತ್ತು ಮಹಮ್ಮದ್ ಸಿರಾಜ್ ನಡುವಿನ ಸಂಭಾಷಣೆ ರೆಕಾರ್ಡ್ ಮಾಡಿದವರು ಯಾರು? ಮಾಧ್ಯಮಗಳಿಗೆ ಬಿಡುಗಡೆ ಮಾಡಿಸಿದವರು ಯಾರು? ಈ ಷಡ್ಯಂತ್ರದ ಬಗ್ಗೆ ಮೊದಲೇ ಗೊತ್ತಿದ್ದರೆ ಉಪ ಚುನಾವಣೆ ವೇಳೆಯೇ ಆಡಿಯೋ ಹೊರ ಬಿಡಬಹುದಿತ್ತು. ಹೊಸ ಸಂಪುಟ ರಚನೆ ವೇಳೆಯೇ ಆಡಿಯೋ ಹೊರ ಬಂದಿದ್ದು ಹೇಗೆ ಎಂಬೆಲ್ಲಾ ವಿಚಾರಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಜಮೀರ್‌ಗೆ ಸಚಿವ ಸ್ಥಾನ ತಪ್ಪಿಸಲೆಂದೇ ಎಸ್.ಎಸ್. ಮಲ್ಲಿಕಾರ್ಜುನ, ನಿಯೋಜಿತ ಸಿಎಂ ಡಿ.ಕೆ.ಶಿವಕುಮಾರ ಸೇರಿ ಮಾಡಿದ ಷಡ್ಯಂತ್ರ ಇದು. ಹಣ ಬಲ, ಸೀರೆ, ಕುಕ್ಕರ್ ಹಂಚಿ ದಕ್ಷಿಣದಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ಸಿನ ಯೋಗ್ಯತೆ ಎಲ್ಲರಿಗೂ ಗೊತ್ತಾಗಿದೆ. ಇವರೆಲ್ಲಾ ಒಡೆದಾಳುವ ಬ್ರಿಟಿಷರ ವಂಶದವರು. ತಾವು ಪ್ರಾಮಾಣಿಕರಾಗಿದ್ದರೆ ಅಪ್ಪ-ಮಗ ಇಬ್ಬರೂ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನಕ್ಕೆ ಬಂದು ಗಂಟೆ ಹೊಡೆಯಲಿ ಎಂದು ಯಶವಂತ ರಾವ್ ಜಾಧವ್ ಸವಾಲೆಸೆದರು.- - -
-2ಕೆಡಿವಿಜಿ2: ದಾವಣಗೆರೆಯಲ್ಲಿ ಮಂಗಳವಾರ ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್, ದಕ್ಷಿಣ ಕ್ಷೇತ್ರದ ಪರಾಜಿತ ಅಭ್ಯರ್ಥಿ ಶ್ರೀನಿವಾಸ ಟಿ. ದಾಸಕರಿಯಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.