ಸಾರಾಂಶ
ಬೆಂಗಳೂರು : ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಹಾಗೂ ಹಾಲಿ ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಮಂಗಳವಾರ ಮೈಸೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಶ್ರೀನಿವಾಸ ಪ್ರಸಾದ್ ಅವರು ಭಾನುವಾರ ಮಧ್ಯರಾತ್ರಿ 1.20ರ ಸುಮಾರಿಗೆ ನಿಧನರಾಗಿದ್ದಾರೆ. ಪತ್ನಿ ಭಾಗ್ಯಲಕ್ಷ್ಮಿ ಪ್ರಸಾದ್, ಪುತ್ರಿಯರಾದ ಪ್ರತಿಮಾ ಪ್ರಸಾದ್, ಪೂರ್ಣಿಮಾ ಪ್ರಸಾದ್, ಪೂನಂ ಪ್ರಸಾದ್ ಹಾಗೂ ಅಪಾರ ಬಂಧು-ಮಿತ್ರರು, ಅಭಿಮಾನಿಗಳನ್ನು ಅವರು ಅಗಲಿದ್ದಾರೆ.
ಸೋಂಕು ಮತ್ತು ತೀವ್ರ ಅಸ್ವಾಸ್ಥ್ಯದ ಕಾರಣ ಅವರು ಕೆಲ ದಿನಗಳ ಹಿಂದೆ ನಗರದ ಹಳೆ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದರು. ಆರೋಗ್ಯ ಸುಧಾರಿಸಿದ ಹಿನ್ನೆಲೆಯಲ್ಲಿ ಮನೆಗೆ ತೆರಳಿದ್ದರು. ಆದರೆ, ಭಾನುವಾರ ತಡರಾತ್ರಿ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದರಿಂದ ಮತ್ತೆ ಆಸ್ಪತ್ರೆಗೆ ಕರೆದೊಯ್ದು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಇತ್ತೀಚೆಗೆ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದರು. ಮೈಸೂರು, ಚಾಮರಾಜನಗರ ಭಾಗದ ಪ್ರಭಾವಿ ದಲಿತ ಮುಖಂಡರಾಗಿದ್ದರು. ಸ್ವಾಭಿಮಾನಿ ರಾಜಕಾರಣಿ ಎಂದೇ ಹೆಸರಾಗಿದ್ದರು. ಮೂಲತಃ ಮೈಸೂರಿನ ಅಶೋಕಪುರಂನವರಾದ ಶ್ರೀನಿವಾಸ ಪ್ರಸಾದ್ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಎರಡು ಬಾರಿ ನಂಜನಗೂಡು ಕ್ಷೇತ್ರದಿಂದ ಶಾಸಕರಾಗಿದ್ದರು. ಕೇಂದ್ರ ಮತ್ತು ರಾಜ್ಯದಲ್ಲಿಯೂ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಶ್ರೀನಿವಾಸ ಪ್ರಸಾದ್ ನಿಧನ ಸಂಬಂಧ ಅವರ ಪುತ್ರಿ ಪ್ರತಿಮಾ ಪ್ರಸಾದ್ ಮಾತನಾಡಿ, ಇತ್ತೀಚಿನ ದಿನದಲ್ಲಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ವೈದ್ಯರು ಗುಣಪಡಿಸಲು ಶ್ರಮಿಸಿದರೂ ಪ್ರಯತ್ನ ಫಲಕಾರಿಯಾಗದೆ ನಮ್ಮನ್ನು ಅಗಲಿದ್ದಾರೆ. ಕಳೆದ ಸೋಮವಾರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆರೋಗ್ಯ ಸುಧಾರಣೆ ಕಂಡ ಹಿನ್ನೆಲೆಯಲ್ಲಿ ಮನೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ, ಭಾನುವಾರ ಮತ್ತೆ ಏರುಪೇರಾಗಿದ್ದ ಕಾರಣ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ ಎಂದರು.
ಮಣಿಪಾಲ್ ಆಸ್ಪತ್ರೆಯ ಡಾ.ಸುದರ್ಶನ್ ಬಲ್ಲಾಳ್ ಮತ್ತವರ ತಂಡ ತಂದೆಯವರನ್ನು ಉಳಿಸಲು ಸಾಕಷ್ಟು ಪ್ರಯತ್ನ ಮಾಡಿತು. ಯಾವಾಗಲೂ ತಂದೆಯವರು ನನ್ನನ್ನು ನಗುತ್ತಾ ಬೀಳ್ಕೊಡಿ ಎಂದು ಕೇಳುತ್ತಿದ್ದರು. ಅದನ್ನು ನಿಭಾಯಿಸುತ್ತೇವೆ ಎಂದು ಹೇಳಿದರು.
ಶ್ರೀನಿವಾಸ ಪ್ರಸಾದ್ ಅಳಿಯ ಹರ್ಷವರ್ಧನ್ ಮಾತನಾಡಿ, ಭಾನುವಾರ ಮಧ್ಯರಾತ್ರಿ 1.20ರ ಸುಮಾರಿಗೆ ಮಾವನವರು ನಿಧನರಾಗಿದ್ದು, ಇಡೀ ದಲಿತ ಸಮುದಾಯಕ್ಕೆ ತುಂಬಲಾರದ ನಷ್ಟ. ನನಗೆ ರಾಜಕೀಯಕ್ಕೆ ಜನ್ಮ ಕೊಟ್ಟಿದ್ದು, ರಾಜಕೀಯದಲ್ಲಿ ಏಕಾಂಗಿಯಾಗಿ ಹೋರಾಟ ಮಾಡುವುದಕ್ಕೆ ಬಿಟ್ಟು ಹೋಗಿದ್ದಾರೆ ಎಂದು ಭಾವುಕರಾದರು.