ಕುಂದಾಪುರ ಕ್ಷೇತ್ರದ ಮಾಜಿ ಶಾಸಕ, ಧಾರ್ಮಿಕ ಹಾಗೂ ಸಾಮಾಜಿಕ ಮುಂದಾಳು ಬಿ. ಅಪ್ಪಣ್ಣ ಹೆಗ್ಡೆ (91) ಶನಿವಾರ ಬೆಳಗ್ಗೆ ನಿಧನರಾದರು. ಅವರು ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಕುಂದಾಪುರ: ಕುಂದಾಪುರ ಕ್ಷೇತ್ರದ ಮಾಜಿ ಶಾಸಕ, ಧಾರ್ಮಿಕ ಹಾಗೂ ಸಾಮಾಜಿಕ ಮುಂದಾಳು ಬಿ. ಅಪ್ಪಣ್ಣ ಹೆಗ್ಡೆ (91) ಶನಿವಾರ ಬೆಳಗ್ಗೆ ನಿಧನರಾದರು. ಅವರು ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ರಾಜಕೀಯದಲ್ಲಿ ತನ್ನದೇ ಛಾಪು ಮೂಡಿಸಿದ್ದ ಅಪ್ಪಣ್ಣ ಹೆಗ್ಡೆ 1960-83ರವರೆಗೆ ಸುದೀರ್ಘ ಕಾಲ ಮಂಡಲ-ಗ್ರಾಮ ಪಂಚಾಯಿತಿ ಸದಸ್ಯರಾಗಿ, ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ ತಾಲೂಕು ಅಭಿವೃದ್ಧಿ ಬೋರ್ಡಿನ ಸದಸ್ಯರಾಗಿದ್ದ ಅವರು 1983 -1994ರವರೆಗೆ ಜನತಾ ದಳದಿಂದ ಶಾಸಕರಾಗಿ ಕೂಡ ಸೇವೆ ಸಲ್ಲಿಸಿದ್ದರು.

ಸಾಮಾಜಿಕ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದ ಅವರು ತಾಲೂಕು ಕೋ ಆಪರೇಟಿವ್ ಮಾರಾಟ ಸೊಸೈಟಿ ಹಾಗೂ ಭೂ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷರಾಗಿ, ಬಸ್ರೂರು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ, ಬಸ್ರೂರು ಶ್ರೀ ಮಹಾಲಿಂಗೇಶ್ವಾರ ದೇವಸ್ಥಾನದ ಮುಖ್ಯಸ್ಥರಾಗಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.ಅವರ ನಿಧನಕ್ಕೆ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಶ್ರೀಪಾದರು, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಹೆಗ್ಗಡೆ ಸಂತಾಪ: ಬೈಂದೂರಿನ ಹಿರಿಯ ರಾಜಕೀಯ ಮುತ್ಸದ್ದಿ ಬಿ. ಅಪ್ಪಣ್ಣ ಹೆಗ್ಡೆ ನಿಧನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸಂತಾಪ ಸೂಚಿಸಿದ್ದಾರೆ. ಸಮಾಜದಲ್ಲಿ ಯಾವುದೇ ಸಮಸ್ಯೆಗಳು ಉಂಟಾದಾಗ ಮಾತುಕತೆ ಮೂಲಕ ಸೌಹಾರ್ದಯುತವಾಗಿ ಪರಿಹರಿಸುವ ಚಾಕಚಕ್ಯತೆ ಅವರಲ್ಲಿತ್ತು. ಧರ್ಮಸ್ಥಳದ ಅಭಿಮಾನಿಯೂ, ಭಕ್ತರೂ ಆಗಿದ್ದ ಅವರು ನಮ್ಮ ಎಲ್ಲಾ ಕಾರ್ಯಕ್ರಮಗಳಿಗೆ ಸಕ್ರಿಯ ಸಹಕಾರ ನೀಡುತ್ತಿದ್ದರು. ಆ ಭಾಗದಲ್ಲಿ ನಮ್ಮ ಯಾವುದೇ ಯೋಜನೆ ಹಾಗೂ ಕಾರ್ಯಕ್ರಮವನ್ನು ಸಂಘಟಿಸಿ ಯಶಸ್ವಿಗೊಳಿಸುವಲ್ಲಿ ಅವರು ನೇತೃತ್ವ ವಹಿಸಿ ಬೆಂಬಲಿಸುತ್ತಿದ್ದರು. ವಿಶೇಷವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನಜಾಗೃತಿ ವೇದಿಕೆಯ ಚಟುವಟಿಕೆಗಳಿಗೆ ಉತ್ತಮ ಸಹಕಾರ ನೀಡಿ ಪ್ರೋತ್ಸಾಹಿಸಿದ್ದಾರೆ ಎಂದು ಡಾ. ಹೆಗ್ಗಡೆ ಸ್ಮರಿಸಿದ್ದಾರೆ.