ಹೊಸದುರ್ಗದಲ್ಲಿ ಮತ್ತೆ ಗಾಳಿ-ಗೂಳಿ ಗುದ್ದಾಟ ತಾರಕಕ್ಕೆ!

| Published : Jan 17 2024, 01:45 AM IST

ಸಾರಾಂಶ

ಇಬ್ಬರು ನಾಯಕರಾದ ಮಾಜಿ ಶಾಸಕ ಗೂಳೀಹಟ್ಟಿ ಶೇಖರ್‌ ಹಾಗೂ ಹಾಲಿ ಶಾಸಕ ಬಿ.ಜಿ.ಗೋವಿಂದಪ್ಪಮಧ್ಯೆ ಇದೀಗ ಪರಸ್ಪರ ಆರೋಪ-ಪ್ರತ್ಯಾರೋಪ ಮತ್ತೆ ತಾರಕಕ್ಕೇರಿದ್ದು, ಪರಸ್ಪರ ಅಕ್ರಮಗಳ ಪಟ್ಟಿಯನ್ನು ಬಿಚ್ಚಿಡಲೂ ಮುಂದಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಸದುರ್ಗ

ತಾಲೂಕಿನಲ್ಲಿ ಚುನಾವಣೆಯ ನಂತರ ತಣ್ಣಗಾಗಿದ್ದ ಗಾಳಿ-ಗೂಳಿ ಗುದ್ದಾಟ ಸಂಕ್ರಾಂತಿಯ ನಂತರ ತಾರಕಕ್ಕೇರಿದೆ. ಈ ಇಬ್ಬರೂ ನಾಯಕರು ತಮ್ಮ ಅಕ್ರಮಗಳ ಪಟ್ಟಿಯನ್ನು ಬಿಚ್ಚಿಡುವ ಮೂಲಕ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.ಸಂಕ್ರಾಂತಿ ಹಬ್ಬದಂದು ಮಾಜಿ ಶಾಸಕ ಗುಳೀಹಟ್ಟಿ ಶೇಖರ್‌ ತಾಲೂಕಿನಲ್ಲಿ ಶಾಸಕರ ಸಂಬಂಧಿಕರು ಹಾಗೂ ಬೆಂಬಲಿಗರು ಅಕ್ರಮವಾಗಿ ಸರ್ಕಾರಿ ಭೂಮಿ ಗಳನ್ನು ಒತ್ತುವರಿ ಮಾಡಿಕೊಂಡು ಬಡಾವಣೆಗಳನ್ನು ನಿರ್ಮಿಸುತ್ತಿದ್ದಾರೆ. ಅಲ್ಲದೆ, ತಮ್ಮ ಬೆಂಬಲಿಗರಿಗೆ ಅನುಕೂಲವಾಗುವಂತೆ ಕಾವಲು ಪ್ರದೇಶಗಳಲ್ಲಿ ಅಕ್ರಮ ವಾಗಿ ಮಣ್ಣು ಮತ್ತು ಮರಳನ್ನು ತುಂಬಲು ಅನುಕೂಲಮಾಡಿಕೊಟ್ಟಿದ್ದಾರೆ. ನಮ್ಮ ಅವಧಿಯಲ್ಲಿ ಅಮಾಯಕರು ಒಂದೆರೆಡು ಲೋಡ್‌ ಮಣ್ಣು ತುಂಬಿದರೂ ಕೇಸ್‌ ಹಾಕುತ್ತಿದ್ದ ಅಧಿಕಾರಿಗಳು ಈಗೇಕೆ ಸುಮ್ಮನ್ನಿದ್ದೀರಾ ? ಎಂದು ಪ್ರಶ್ನಿಸಿ ಆಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದರು.ನೇರವಾಗಿ ಮಾತನಾಡಲಿ: ಆಡಿಯೋ ಮಾಡಿ ಬಿಡುವುದು ಯಾವ ಗಟ್ಟಿತನ ನೇರವಾಗಿ ಬಂದು ಮಾತನಾಡಲಿ. ಗೂಳಿಹಟ್ಟಿ ಶೇಖರ್ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ. ಎಲ್ಲವೂ ಸುಳ್ಳು. ನಾವು ಅವರ ಆರೋಪವನ್ನು ಅಲ್ಲಗಳೆಯುತ್ತೇವೆ. ದಂಧೆಗಳು ಇದ್ದಿದ್ದೆಲ್ಲಾ ಅವರ ಕಾಲದಲ್ಲಿ. ನಮ್ಮ ಕಾಲದಲ್ಲಿ ಅಂಥದ್ದೇನೂ ನಡೆದಿಲ್ಲ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಸೋಮವಾರ ಚಿತ್ರದುರ್ಗದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.ನಾವು ಯಾವ ದಂಧೆಯನ್ನೂ ಮಾಡಿಸಿಲ್ಲ. ಅವರಿದ್ದಾಗ ಮರಳು ಹೊಡೆಸುತ್ತಿದ್ದರು. ಇಸ್ಪೀಟ್ ಆಡಿಸುತ್ತಿದ್ದರು. ಎಲ್ಲಾ ರೀತಿಯ ಕೆಟ್ಟದಂಧೆಗಳು ನಡೆದವು. ನಮ್ಮ ಅವಧಿಯಲ್ಲಿ ಅಂತಹ ಯಾವ ಚಟುವಟಿಕೆಗಳೂ ನಡೆದಿಲ್ಲ. ಕೆಸರಿನ ಮೇಲೆ ಕಲ್ಲು ಹಾಕಿ ಸಿಡಿಸಿಕೊಳ್ಳಲು ಹೋಗಲ್ಲ. ತಾಕತ್ತಿದ್ದರೆ ನೇರವಾಗಿ ಬಂದು ಮಾತನಾಡಲಿ ಮಾಧ್ಯಮದವರೂ ಇರಿ. ನಾನು ಉತ್ತರ ಕೊಡುತ್ತೇನೆ. ಎಲ್ಲವನ್ನೂ ಎದುರಿನಲ್ಲೇ ಹೇಳುತ್ತೇನೆ ಎಂದು ಸವಾಲು ಹಾಕಿದ ಶಾಸಕರು, ನಾವು ತಪ್ಪು ಮಾಡಿದ್ದರೆ ಕ್ಷಮಾಪಣೆ ಕೇಳುತ್ತೇವೆ. ಅದರಲ್ಲಿ ಎರಡು ಮಾತಿಲ್ಲ ಎಂದೂ ಖಚಿತವಾಗಿ ಹೇಳಿದರು.ಈಗ ಒಂದೇ ಒಂದು ದಂಧೆ ತೋರಿಸಿದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಮನೆಗೆ ಹೋಗುತ್ತೇನೆ. ನಾವು ಸ್ವಚ್ಛ ರಾಜಕಾರಣ ಮಾಡಿಕೊಂಡು ಬಂದವರು. ಹಿಂದೆ ಪೊಲೀಸ್ ಠಾಣೆ ಗೂಳಿಹಟ್ಟಿ ಕಚೇರಿ ಆಗಿತ್ತು. ಅವರಿಗೆ ಮತ ಹಾಕಿದವರಿಗೂ ಹೊಡೆಸಿದ್ದಾರೆ ಎಂದರು.

ಇನ್ನು, ಶಾಸಕ ಬಿಜಿ ಗೋವಿಂದಪ್ಪ ಅವರ ಉತ್ತರಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌, ನಿಮ್ಮ ಅಕ್ರಮಗಳನ್ನು ಸಾಬೀತು ಮಾಡಲು ನನಗೆ ಸಾಧ್ಯವಿಲ್ಲ. ಸತ್ಯ ಹರಿಶ್ಚಂದ್ರ ತುಂಡುಗಳು ನೀವು. ಪಟ್ಟಣದ ಸರ್ಕಾರಿ ಆಸ್ಪತ್ರೆಯ ಪಕ್ಕದಲ್ಲಿ ಸುಮಾರು 5 ಕೋಟಿ ರು. ಬೆಲೆ ಬಾಳುವ ಸರ್ಕಾರಿ ಭೂಮಿಗೆ ತಾಲೂಕಿನ ಧಣಿಗಳ ಭಾಮೈದ ಇ-ಸ್ವತ್ತು ಪಡೆದಿದ್ದಾರೆ. ಹೊಸಹಳ್ಳಿ ಬಳಿ ತಮ್ಮ ಬೆಂಬಲಿಗರಾದ ಅನಂತ್‌, ದಳವಾಯಿ ವೆಂಕಟೇಶ್, ಯತೀಶ್‌ ತಲಾ 5 ಎಕರೆ ಡೀಮ್ಡ್‌ ಫಾರೆಸ್ಟ್‌ ಭೂಮಿಯನ್ನು ಲೀಸ್‌ ಹಾಕಿಸಿಕೊಂಡಿದ್ದಾರೆ. ಇದೆಲ್ಲಾ ಸುಳ್ಳಾ ? ಇದೆಲ್ಲಾ ಸಕ್ರಮನಾ? ನಾನು ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಮಣ್ಣು ತುಂಬಿರುವುದನ್ನು ಪ್ರಶ್ನಿಸಿದ್ದೇನೆ ಅಷ್ಟೆ. ಯಜಮಾನರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದಿದ್ದಾರೆ.ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?: ಗೂಳಿಹಟ್ಟಿ

ಹೊಸದುರ್ಗ ಪಟ್ಟಣದ ಗೋರವಿನಕಲ್ಲು, ಕೆಲ್ಲೋಡು, ಸಾರ್ವಜನಿಕ ಆಸ್ಪತ್ರೆಯ ಪಕ್ಕದ ಸರ್ಕಾರಿ ಜಾಗ, ಸದ್ಗುರು ಆಶ್ರಮದ ಬಳಿಯ ಸರ್ಕಾರಿ ಜಾಗದಲ್ಲಿ ಲೇಔಟ್‌ ಮಾಡಿರುವುದು ಯಾರು ಸ್ವಾಮಿ? ಅವರೇನು ನನ್ನ ಸಂಬಂಧಿಕರ, ನನ್ನ ಬೆಂಬಲಿಗರ ಎಂದು ಪ್ರಶ್ನಿಸಿ ಅಂಗೈ ಹಣ್ಣಿಗೆ ಕನ್ನಡಿ ಬೇಕೆ? ಎಂದು ಮಾಜಿ ಶಾಸಕ ಗೂಳೀಹಟ್ಟಿ ಶೇಖರ್‌ ಪ್ರಶ್ನಿಸಿರುವ ವಿಡಿಯೋವೊಂದನ್ನು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರ

ಇ-ಸ್ವತ್ತಿಗಾಗಿ ₹ 50 ಲಕ್ಷ ಲಂಚ ನೀಡಿದ್ದೆ!: ಶಾಸಕ

ಅವರ ಕಾಲದಲ್ಲೂ ಬಹಳಷ್ಟು ರಿಯಲ್ ಎಸ್ಟೇಟ್ ದಂಧೆ ನಡೆಯುತ್ತಿತ್ತು. ಅವರ ಪಕ್ಷದವರೇ ಪುರಸಭೆ ಅಧ್ಯಕ್ಷರಿದ್ದಾಗ ನಮಗೆ ಬೇಕಾದ ಒಬ್ಬರ ಕಡೆಯಿಂದ ನಾನೇ ಇ-ಸ್ವತ್ತು ಮಾಡಿಕೊಡಲು 50 ಲಕ್ಷ ರು.ಲಂಚ ಕೊಡಿಸಿದ್ದೇನೆ. ಕೊಟ್ಟಿರುವುದು ಗ್ಯಾರಂಟಿ, ಪಡೆದುಕೊಂಡಿರುವುದು, ತಿಂದಿರುವುದೂ ಗ್ಯಾರಂಟಿ. ಇದರಲ್ಲಿ ಗೂಳಿಹಟ್ಟಿ ಪಾಲಿದೆಯೋ ಇಲ್ಲವೋ ಎನ್ನುವುದನ್ನು ಅವರು ಎದುರಿಗೆ ಬಂದರೆ ಬಹಿರಂಗವಾಗಿಯೇ ಹೇಳುತ್ತೇನೆ. ಲಂಚ ಕೊಡುವುದು ತಪ್ಪು. ಆದರೆ, 25 ಕೋಟಿ ಬಂಡವಾಳ ಹಾಕಿದ್ದಾರೆ. 6 ತಿಂಗಳು ಸತಾಯಿಸಿದ ಕಾರಣ ಕೊಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.