ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡು
ನಗರಸಭೆ ಪಟ್ಟಣದ ಹಳೇ ಟೌನ್ ವ್ಯಾಪ್ತಿಯ ಮನೆಗಳಿಗೆ ಸಾವಿರಾರು ರುಪಾಯಿ ಮೊತ್ತದ ನೀರಿನ ಬಿಲ್ ನೀಡುತ್ತಿದ್ದು, ನಿವಾಸಿಗಳು ನೀರಿನ ಬಿಲ್ ಕಟ್ಟಬೇಡಿ ಎಂದು ಮಾಜಿ ಶಾಸಕ ಬಿ. ಹರ್ಷವರ್ಧನ್ ಹೇಳಿದರು.ಪಟ್ಟಣದ ನಗರಸಭೆ ಮುಂಭಾಗ ಗುರುವಾರ ತಾಲೂಕು ಬಿಜೆಪಿ ಕಾರ್ಯಕರ್ತರು ನಗರಸಭೆ ವಿರುದ್ದ ನಡೆಸಿದ ಪ್ರತಿಭಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಟ್ಟಣದ ಹಳೇ ಟೌನ್ ವ್ಯಾಪ್ತಿಯ 1 ರಿಂದ 10ನೇ ವಾರ್ಡ್ನಿವಾಸಿಗಳಿಗೆ ನಗರಸಭೆ ಮಾಸಿಕ ಸಾವಿರಾರು ರು. ಮೊತ್ತದ ನೀರಿನ ಬಿಲ್ ನೀಡಿದ್ದಾರೆ, 4 ಮಂದಿಯ ಸಾಮಾನ್ಯ ಕುಟುಂಬಕ್ಕೆ 63 ಸಾವಿರ ನೀರಿನ ಬಿಲ್ ನೀಡಿದ್ದಾರೆ, ಪಟ್ಟಣದ ನಿವಾಸಿಗಳು ನಿರಂತರ ನೀರು ಸರಬರಾಜು ಯೋಜನೆ ಜಾರಿಗೆ ಬಂದ ನಂತರ ನಗರಸಭೆ ನೀಡುತ್ತಿರುವ ನೀರಿನ ಬಳಕೆಯ ಬಿಲ್ನೋಡಿ ಗಾಬರಿಯಾಗಿದ್ದಾರೆ, ಕೆಲವು ಮನೆಗಳಿಗೆ 6 ತಿಂಗಳಿಗೆ ಎಂಬತ್ತು ಸಾವಿರಕ್ಕೂ ಅಧಿಕ ಮೊತ್ತದ ಬಿಲ್ನೀಡಲಾಗಿದೆ, ನಗರಸಭೆ ಅಳವಡಿಸಿರುವ ನೀರಿನ ಮೀಟರ್ ನ್ನು ಪರಿಶೀಲಿಸಿ ಉಂಟಾಗಿರುವ ತೊಂದರೆಯನ್ನು ನಿವಾರಿಸಬೇಕು, ಸಾರ್ವಜನಿಕರು ನೀರಿನ ಬಿಲ್ ಕಟ್ಟಬೇಡಿ ಎಂದು ಹೇಳಿದರು.ನಗರಸಭೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ, ಅಂಬೇಡ್ಕರ್ವೃತ್ತ, ಅಶೋಕಪುರಂಗಳಲ್ಲಿ ಅಕ್ರಮ ಬಡಾವಣೆಗಳಿಗೆ ಪರವಾನಗಿ ನೀಡಲಾಗುತ್ತಿದೆ, ಅಂಬೇಡ್ಕರ್ ಪುತ್ಥಳಿ ಸಮೀಪ ಚಾಮರಾಜನಗರ ಬೈಪಾಸ್ ರಸ್ತೆಯಲ್ಲಿ ಚಾಮಲಾಪುರದ ಹುಂಡಿ ಬಡಾವಣೆಗಾಗಿ ಮೀಸಲಿರಿಸಿದ್ದ ಮೂರು ಎಕರೆ ಜಾಗವನ್ನು ಬದಲಿ ನಿವೇಶನ ನೀಡದೆ ಅತಿಕ್ರಮನ ಮಾಡಿ ನಿಯಮಬಾಹಿರವಾಗಿ ಖಾಸಗಿಯವರಿಗೆ ಕಟ್ಟಡ ನಿರ್ಮಾಣ ಮಾಡಲು ಪರವಾನಗಿ ನೀಡಲಾಗಿದೆ, ಒಂದೂವರೆ ವರ್ಷದ ಹಿಂದೆ ಅಧಿಕಾರಕ್ಕೆ ಬಂದ ಶಾಸಕರು ನಗರಸಭೆಯಲ್ಲಿ ಭ್ರಷ್ಠಾಚಾರ ರಹಿತ ಆಡಳಿತ ನೀಡುವುದಾಗಿ ಹೇಳಿದ್ದರು, ಕೇವಲ ಒಂದು ವರ್ಷದಲ್ಲಿ ನಗರಸಭೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ, ನಗರಸಭೆ ಅಧಿಕಾರಿಗಳು ಅಕ್ರಮಗಳನ್ನು ಸರಿಪಡಿಸಿಕೊಳ್ಳದಿದ್ದರೆ ನಗರಸಭೆಗೆ ಬೀಗ ಜಡಿದು ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಗರಸಭೆ ಸದಸ್ಯೆ ಕಪಿಲೇಶ್ ಮಾತನಾಡಿ, 8 ಸಾವಿರ ಲೀಟರ್ ವರೆಗೆ ನೀರಿನ ಬಿಲ್ ಉಚಿತ ಎಂದು ಹೇಳಲಾಗುತ್ತದೆ, ಅದೆಲ್ಲ ಸುಳ್ಳು, ಅತಿ ಹೆಚ್ಚು ನೀರಿನ ಬಿಲ್ ನೀಡಲಾಗುತ್ತಿದೆ. ಅಳವಡಿಸುವ ಎಲ್ಲ ನೀರಿನ ಮೀಟರ್ ಗಳು ದೋಷಪೂರಿತವಾಗಿದ್ದು. ಹೆಂಚಿನ ಮನೆಗಳಿಗೂ ಕೂಡ 10 ರಿಂದ 15 ಸಾವಿರ ಬಿಲ್ ಬರುತ್ತಿದೆ. ಕನಿಷ್ಠ ಒಂದುವರೆ ಸಾವಿರದವರೆಗೆ ನೀರಿನ ಬಿಲ್ ನೀಡಲಾಗುತ್ತಿದೆ. ಅಲ್ಲದೆ ಕಳೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಆಡಳಿತಾಧಿಕಾರಿಗಳ ಅವಧಿಯಲ್ಲಿ ನಗರಸಭೆಯಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣಗಳನ್ನು ಲೋಕಾಯುಕ್ತ ತನಿಖೆಗೆ ವಹಿಸಲಾಗುವುದು ಎಂದು ನಿರ್ಣಯ ಕೈಗೊಳ್ಳಲಾಗಿತ್ತು, ಆದರೆ ನಗರಸಭೆ ಅಧ್ಯಕ್ಷ ಹಾಗೂ ಆಯುಕ್ತರು ಭಷ್ಟ ಅಧಿಕಾರಿಗಳೊಂದಿಗೆ ಶಾಮೀಲಾಗಿ ಪ್ರಕರಣಗಳನ್ನು ಲೋಕಯುಕ್ತರಿಗೆ ವಹಿಸದೆ ತಿಪ್ಪೆ ಸಾರಿಸುವ ಕೆಲಸ ಮಾಡುತ್ತಿದ್ದಾರೆ, ನಗರಸಭೆ ಅಧಿಕಾರಿಗಳು ಮಧ್ಯವರ್ತಿಗಳನ್ನು ನೇಮಿಸಿಕೊಂಡು ಸಾರ್ವಜನಿಕರನ್ನು ಸುಲಿಯುತ್ತಿದ್ದಾರೆ, ನಗರಸಭೆ ಜನರ ಪಾಲಿಗೆ ನರಕಸಭೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಜಿಪಂ ಮಾಜಿ ಸದಸ್ಯ ಚಿಕ್ಕರಂಗನಾಯಕ, ನಗರಸಭೆ ಸದಸ್ಯರಾದ ಸಿದ್ದರಾಜು, ಮಹೇಶ್ಅತ್ತಿಖಾನೆ, ಮಹದೇವಮ್ಮ, ಮಹದೇವಪ್ರಸಾದ್, ನಾಗಮಣಿ ಶಂಕರಪ್ಪ, ಖಾಲೀದ್ಅಹಮ್ಮದ್, ಬಾಲಚಂದ್ರ, ಶಂಕರಪ್ಪ, ಸಂಜಯ್ ಶರ್ಮ, ರೈತ ಸಂಘದ ಹಾಡ್ಯ ರವಿ, ಕಸುವಿನಹಳ್ಳಿ ಮಂಜೇಶ್ಕುಮಾರ್, ಶಿವಣ್ಣ, ಮಹದೇವಸ್ವಾಮಿ, ಗಾಯಿತ್ರಿ, ಉಮೇಶ್ ಇದ್ದರು.