ಮೇಳೆದಲ್ಲಿ ಮೈಸೂರು, ಬೆಂಗಳೂರಿನಿಂದ 45ಕ್ಕೂ ಅಧಿಕ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸುತ್ತಿವೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಐಟಿಐ, ಡಿಪ್ಲೊಮಾ, ಸ್ನಾತಕೋತ್ತರ ಪದವಿ ಮುಗಿಸಿದ ನಿರುದ್ಯೋಗಿ ಯುವಕ-ಯುವತಿಯರು ಭಾಗವಹಿಸಿ ಉದ್ಯೋಗ ಮೇಳದ ಸದ್ಬಳಕೆ ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ರೈತ ದಿನಾಚರಣೆ ಹಾಗೂ ರೈತ ನಾಯಕ ದಿ.ಕೆ.ಎಸ್.ಪುಟ್ಟಣ್ಣಯ್ಯ ಜನ್ಮ ದಿನಾಚರಣೆ ಅಂಗವಾಗಿ ಪುಟ್ಟಣ್ಣಯ್ಯ ಫೌಂಡೇಷನ್, ರಾಜ್ಯ ರೈತಸಂಘ ಹಾಗೂ ಉದ್ಯೋಗದಾತ ಫೌಂಡೇಷನ್ ವತಿಯಿಂದ ಡಿ.23ರಂದು ಪಟ್ಟಣದ ಟಿಎಪಿಸಿಎಂಎಸ್ ರೈತಸಭಾಂಗಣದಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ರೈತ ನಾಯಕಿ ಸುನೀತ ಪುಟ್ಟಣ್ಣಯ್ಯ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವ ಉದ್ದೇಶದಿಂದ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರು ಪುಟ್ಟಣ್ಣಯ್ಯ ಫೌಂಡೇಷನ್ ವತಿಯಿಂದ ಉದ್ಯೋಗ ಮೇಳ ಹಮ್ಮಿಕೊಂಡಿದ್ದಾರೆ ಎಂದರು.

ಮೇಳೆದಲ್ಲಿ ಮೈಸೂರು, ಬೆಂಗಳೂರಿನಿಂದ 45ಕ್ಕೂ ಅಧಿಕ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸುತ್ತಿವೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಐಟಿಐ, ಡಿಪ್ಲೊಮಾ, ಸ್ನಾತಕೋತ್ತರ ಪದವಿ ಮುಗಿಸಿದ ನಿರುದ್ಯೋಗಿ ಯುವಕ-ಯುವತಿಯರು ಭಾಗವಹಿಸಿ ಉದ್ಯೋಗ ಮೇಳದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಉದ್ಯೋಗದಾತ ಫೌಂಡೇಷನ್ ಅಧ್ಯಕ್ಷ ರುಕ್ಮಾಂಗದ ಮಾತನಾಡಿ, ಉದ್ಯೋಗ ಮೇಳಕ್ಕೆ ಸಂಬಂಧಿಸಿದಂತೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರು ಹಲವು ಖಾಸಗಿ ಕಂಪನಿಗಳೊಂದಿಗೆ ಚರ್ಚಿಸಿ ಕಂಪನಿಗಳು ಉದ್ಯೋಗ ಮೇಳೆದಲ್ಲಿ ಭಾಗವಹಿಸುತ್ತಿದ್ದಾರೆ. ತಾಲೂಕಿನಾದ್ಯಂತ ವ್ಯಾಪಕ ಪ್ರಚಾರ ನಡೆಸಲಾಗಿದೆ. ಸುಮಾರು 5 ಸಾವಿರ ಉದ್ಯೋಗದ ಅವಕಾಶ ದೊರೆಯುವ ಅವಕಾಶವಿದೆ ಎಂದರು.

ಉದ್ಯೋಕಾಂಕ್ಷಿಗಳಿಗೆ 10 ಸ್ವಯಂ ವಿವರದ ಪ್ರತಿ ತರುವಂತೆ ಸೂಚಿಸಲಾಗಿದೆ. ವಿಶೇಷ ವಿಕಲಚೇತನರಿಗೆ ಉದ್ಯೋಗ ನೀಡಲು ವಾಯ್ಸ್ ಆಫ್ ನೀಡಿ ಫೌಂಡೇಷನ್ ಕಂಪನಿಯೂ ಸಹ ಭಾಗವಹಿಸುತ್ತಿದೆ. ಮೇಳಕ್ಕೆ ಬರುವ ಎಲ್ಲಾ ಯುವಕ-ಯುವತಿಯರಿಗೆ ತಿಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಮೇಳದಲ್ಲಿ ಭಾಗವಹಿಸಿ ಉದ್ಯೋಗ ಸಿಗದ ನಿರುದ್ಯೋಗಿಗಳಿಗೆ ಇದೇ ಮೊದಲ ಬಾರಿಗೆ ಸ್ಕಿಲ್‌ಗೆ ಸಂಬಂಧಿಸಿದಂತೆ ತರಬೇತಿ ನೀಡಲು ಶಾಸಕರು ಸಿದ್ಧತೆ ನಡೆಸಿಕೊಂಡಿದ್ದಾರೆ ಎಂದರು.

ಅಲ್ಲದೇ, ಮೇಲುಕೋಟೆಯ ಪು.ತೀ.ನ ಕಲಾ ಮಂದಿರದಲ್ಲಿ ಡಿ.21ರಿಂದ 23ರವರೆಗೆ ರಂಗ ನಮನ ಹೊಂಬಾಳೆ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ. ಡಿ.23ರಂದು ಮೈಸೂರು ಜಿಲ್ಲೆಯ ಇಲವಾಲ ಗ್ರಾಮದಲ್ಲಿ ದಿ.ಕೆ,ಎಸ್.ಪುಟ್ಟಣ್ಣಯ್ಯ ಅವರ ಪ್ರತಿಮೆ ಅನಾವರಣ ಕಾರ್‍ಯಕ್ರಮವಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ರೈತಸಂಘದ ಮಾಜಿ ಅಧ್ಯಕ್ಷ ಚಿಕ್ಕಾಡೆ ಹರೀಶ್, ಮುಖಂಡರಾದ ಕೆ.ಎಸ್.ದಯಾನಂದ್, ಉಮಾಶಂಕರ್, ಪುರಸಭೆ ನಾಮಿನಿ ಸದಸ್ಯರಾದ ಲಕ್ಷ್ಮೀಗೌಡ, ಮುರುಳಿ, ಸ್ವಾಮಿ,ಅನಿಲ್ ಇದ್ದರು.