ಕನ್ನಡಪ್ರಭವಾರ್ತೆ ತಿಪಟೂರು
ಹಿಂದೆ ನಾನು ಶಾಸಕನಾಗಿದ್ದಾಗ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಿ ನಾನು ಚಾಲನೆ ನೀಡಿದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ನಂತರ ಶಾಸಕರಾಗಿ ಬಂದವರು ಅಡ್ಡಗಾಲು ಹಾಕಿ ಕೆಲಸಗಳನ್ನು ನಿಲ್ಲಿಸಿದ್ದರು. ಈಗ ತಿಪಟೂರು ಅಭಿವೃದ್ಧಿಗೋಸ್ಕರ ಅದೇ ಕೆಲಸಗಳಿಗೆ ಅಂದಿಗಿಂತ ಹೆಚ್ಚು ಹಣ ಬಿಡುಗಡೆ ಮಾಡಿಸಿ ಚಾಲನೆ ನೀಡುತ್ತಿದ್ದೇನೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.ಎಸ್‌ಟಿಪಿ ಘಟಕವನ್ನು ವಿಸ್ತರಿಸುವ ೧೮.೯ ಕೋಟಿ ರುಗಳ ಯೋಜನೆಗೆ ಶಾಸಕ ಕೆ.ಷಡಕ್ಷರಿ ಚಾಲನೆ ನೀಡಿ ಮಾತನಾಡಿದ ಅವರು, ತಿಪಟೂರು ನಗರ ಮತ್ತು ತಾಲೂಕಿನ ಅಭಿವೃದ್ಧಿ ವೇಗವಾಗಿ ಸಾಗುತ್ತಿದ್ದು ಮೂರು ತಿಂಗಳಲ್ಲಿ ೩೦೦ಕೋಟಿ ರುಗಳಿಗೂ ಹೆಚ್ಚು ವೆಚ್ಚದ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಲಿದ್ದು ಈಗಾಗಲೇ ೧೦೦ ಕೋಟಿ ರೂಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ತಿಪಟೂರು ಅಭಿವೃದ್ಧಿಯಾಗುತ್ತಿಲ್ಲ ಎಂದು ಎಲ್ಲಿಯೋ ಕುಳಿತು ಹೇಳಿಕೆ ನೀಡುವವರು ಆಸಕ್ತಿಯಿಂದ ಬಂದು ಅಭಿವೃದ್ಧಿ ಕೆಲಸಗಳನ್ನು ನೋಡಿ ಅರಿವು ಮೂಡಿಸಿಕೊಳ್ಳಲಿ ಎಂದು ಕುಟುಕಿದರು.
ತಿಪಟೂರು ನಗರ ಅತಿ ವೇಗವಾಗಿ ಬೆಳೆಯುತ್ತಿದ್ದು, ನಗರ ಬೆಳೆದಂತೆಲ್ಲಾ ಅದಕ್ಕೆ ತಕ್ಕಂತೆ ಸಾರ್ವಜನಿಕರಿಗೆ ಅಗತ್ಯವಾಗಿರುವ ಮೂಲಭೂತ ಸೌಕರ್ಯಗಳನ್ನೂ ಒದಗಿಸುವ ದೃಷ್ಠಿಯಿಂದ ಇಂದು ನಗರದ ಹಲವಾರು ಕಡೆ ೨೩ಕೋಟಿ ರೂಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ನಗರದ ಕಲ್ಲೇಗೌಡನಪಾಳ್ಯ ಬಳಿ ಇರುವ ಎಸ್‌ಟಿಪಿ ಘಟಕವನ್ನು ೬೦೦೦ಎಂಎಲ್‌ಡಿ ಸಾಮರ್ಥ್ಯದಿಂದ ೯೦೦೦ಎಂಎಲ್‌ಡಿ ಸಾಮರ್ಥ್ಯಕ್ಕೆ ವಿಸ್ತರಿಸುವ ೧೮.೯ ಕೋಟಿ ರೂಗಳ ಯೋಜನೆಗೆ ಚಾಲನೆ ನೀಡುತ್ತಿದ್ದೇನೆ. ಇದು ಇಂದಿನ ಅವಶ್ಯಕತೆ. ಆದರೆ ಮುಂದಿನ ಅವಶ್ಯಕತೆಯನ್ನೂ ಗಮನದಲ್ಲಿರಿಸಿಕೊಂಡು ಎಸ್‌ಟಿಪಿ ಘಟಕವನ್ನು ೧೨೦೦೦ಎಂಎಲ್‌ಡಿ ಸಾಮರ್ಥ್ಯಕ್ಕೆ ವಿಸ್ತರಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು. ಮಾಜಿ ನಗರಸಭಾ ಅಧ್ಯಕ್ಷೆ ಯಮುನಾ ಧರಣೇಶ್, ಸದಸ್ಯೆ ಅಶ್ವಿನಿ ದೇವರಾಜು, ನಗರಸಭೆ ಆಯುಕ್ತ ವಿಶ್ವೇಶ್ವರ ಬದರಗಡೆ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.