ಡಿವೈಡರ್ ನಿರ್ಮಿಸದಕ್ಕೆ ಗುತ್ತಿಗೆದಾರನಿಗೆ ಮಾಜಿ ಶಾಸಕಿ ರೂಪಾಲಿ ನಾಯ್ಕ ತರಾಟೆ

| Published : Feb 13 2024, 12:48 AM IST

ಸಾರಾಂಶ

ಗುತ್ತಿಗೆದಾರರು ಡಿವೈಡರ್‌ಗಾಗಿ ಬಿಟ್ಟ ಜಾಗವನ್ನು ಕಾಂಕ್ರೀಟಿಕರಣ ಮಾಡಿದ್ದೀರಿ. ಯಾರು ನಿಮಗೆ ಅನುಮತಿ ನೀಡಿದ್ದಾರೆ? ಕೋಡಿಬಾಗ ರಸ್ತೆ, ಸಾಯಿಮಂದಿರ ರಸ್ತೆ, ಸದಾಶಿವಗಡದಲ್ಲಿ ಡಿವೈಡರ್ ಮಾಡಲಾಗಿದೆ.

ಕಾರವಾರ:ಇಲ್ಲಿನ ಗೀತಾಂಜಲಿ ಸರ್ಕಲ್‌ನಿಂದ ಎಪಿಎಂಸಿ ವರೆಗಿನ ಹಬ್ಬುವಾಡ ರಸ್ತೆ ಕಾಮಗಾರಿ ಅರೆಬರೆ ಹಾಗೂ ಡಿವೈಡರ್ ಅಳವಡಿಸದೇ ಇರುವುದಕ್ಕೆ ಮಾಜಿ ಶಾಸಕಿ ರೂಪಾಲಿ ನಾಯ್ಕ ಅಸಮಾಧಾನ ಹೊರಹಾಕಿದ್ದಾರೆ.ಹಬ್ಬುವಾಡ ರಸ್ತೆ ಕಾಮಗಾರಿ ವೀಕ್ಷಣೆಗೆ ಸೋಮವಾರ ತೆರಳಿದ ಅವರು, ಈ ಹಿಂದೆ ನಿರ್ಧಾರವಾದಂತೆ ರಸ್ತೆ ಮಧ್ಯೆ ಡಿವೈಡರ್ ಅಳವಡಿಸಬೇಕಿತ್ತು. ಆದರೆ ಅಧಿಕಾರಿಗಳು, ಗುತ್ತಿಗೆದಾರರು ಡಿವೈಡರ್‌ಗಾಗಿ ಬಿಟ್ಟ ಜಾಗವನ್ನು ಕಾಂಕ್ರೀಟಿಕರಣ ಮಾಡಿದ್ದೀರಿ. ಯಾರು ನಿಮಗೆ ಅನುಮತಿ ನೀಡಿದ್ದಾರೆ? ಕೋಡಿಬಾಗ ರಸ್ತೆ, ಸಾಯಿಮಂದಿರ ರಸ್ತೆ, ಸದಾಶಿವಗಡದಲ್ಲಿ ಡಿವೈಡರ್ ಮಾಡಲಾಗಿದೆ. ಇಲ್ಲಿ ಏಕೆ ಮಾಡಲು ಆಗುವುದಿಲ್ಲ ಎಂದು ಸ್ಥಳದಲ್ಲಿದ್ದ ಗುತ್ತಿಗೆದಾರರಿಗೆ ಪ್ರಶ್ನಿಸಿದರು.

ಹಾಲಿ ಶಾಸಕರು ರಾಜಕೀಯ ಮಾಡುತ್ತಿದ್ದಾರೆ. ತಾವು ಮಂಜೂರಾತಿ ಮಾಡಿಸಿದ ಕೆಲಸವೆಂದು ಪೂರ್ವನಿರ್ಧರಿತ ಡಿವೈಡರ್ ಹಾಕಲು ಕೊಡುತ್ತಿಲ್ಲ. ಮಾಲಾದೇವಿ ಕ್ರೀಡಾಂಗಣದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೂ ತಡೆಯೊಡ್ಡಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಈ ರೀತಿ ರಾಜಕೀಯ ಮಾಡುವುದು ಸರಿಯಲ್ಲ. ಇದರಿಂದ ಜನರಿಗೆ ತೊಂದರೆ ಆಗುತ್ತದೆ ಎಂದು ಕಿಡಿಕಾರಿದ ರೂಪಾಲಿ, ಡಿವೈಡರ್ ಮಾಡದೇ ಅಪಘಾತವಾದರೆ ನಿಮ್ಮನ್ನೆ ಹೊಣೆಗಾರರನ್ನಾಗಿ ಮಾಡುತ್ತೇವೆ. ಈ ರಸ್ತೆ ಪಕ್ಕದ ಚರಂಡಿಯಲ್ಲಿ ಮಳೆಗಾಲದ ಅವಧಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹೋಗುತ್ತದೆ. ಚರಂಡಿ ತುಂಬಿ ರಸ್ತೆಯ ಮೇಲೆ ನೀರು ಹರಿಯುತ್ತದೆ. ಅದಕ್ಕಾಗಿಯೇ ಕಾಲುವೆ ಎತ್ತರಿಸಿ, ತಡೆಗೋಡೆ ನಿರ್ಮಿಸಲು ನೀಲನಕ್ಷೆ ರೂಪಿಸಲಾಗಿತ್ತು. ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಇಲ್ಲಿಂದಲೇ ಶಾಲೆಗೆ ತೆರಳುತ್ತಾರೆ. ಚರಂಡಿಯಲ್ಲಿ ನೀರು ತುಂಬಿ ಹರಿಯುವಾಗ ಮಕ್ಕಳು ಆಯತಪ್ಪಿ ಬಿದ್ದರೆ ಮೃತಪಡುವ ಸಾಧ್ಯತೆಯೂ ಇದೆ. ಅನಾಹುತವಾದರೆ ನೀವೆ ಹೊಣೆಗಾರರಾಗುತ್ತೀರಿ ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.ನಗರಾಧ್ಯಕ್ಷ ನಾಗೇಶ ಕುರ್ಡೇಕರ, ನಗರಸಭೆ ಸದಸ್ಯೆ ಮಾಲಾ ಹುಲಸ್ವಾರ, ಪ್ರದೀಪ ಗುನಗಿ, ಸಂಜಯ ಸಾಳುಂಕೆ ಇದ್ದರು.