ಶಿಕ್ಷಕರ ಕುಂದು ಕೊರತೆ ಆಲಿಸಿದ ಮಾಜಿ ಎಂಎಲ್‌ಸಿ ನಾರಾಯಣಸ್ವಾಮಿ

| Published : Oct 21 2025, 01:00 AM IST

ಸಾರಾಂಶ

ಶಿಕ್ಷಕರು ಮತ್ತು ಉಪನ್ಯಾಸಕರು ದೂರವಾಣಿಯ ಮೂಲಕ ಒಂದಿಲ್ಲೊಂದು ಸಮಸ್ಯೆಗಳನ್ನು ನನ್ನೊಂದಿಗೆ ಚರ್ಚಿಸುತ್ತಾ ನಿರಂತರವಾಗಿ ಸಂಪರ್ಕದಲ್ಲಿರುವ ನಿಮ್ಮ ಅಭಿಮಾನಕ್ಕೆ ನಾನು ಸದಾ ಸೇವಕನಂತೆ ಸೇವೆ ಸಲ್ಲಿಸುತಿದ್ದೇನೆ.

ಕನ್ನಡಪ್ರಭ ವಾರ್ತೆ ತಿಪಟೂರು

ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಆದ್ಯತಾ ಕ್ಷೇತ್ರವನ್ನಾಗಿಸಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ನೌಕರರಿಗೆ ಸೇವಾ ಸೌಲಭ್ಯ ನೀಡಬೇಕಿದ್ದು, ಈ ನಿಟ್ಟಿನಲ್ಲಿ ನಾನು ನನ್ನ ಕ್ಷೇತ್ರದ ಎಲ್ಲಾ ತಾಲೂಕು, ಹೋಬಳಿ ಕೇಂದ್ರಗಳಿಗೆ ಭೇಟಿ ನೀಡಿ ನೌಕರರ ಕುಂದುಕೊರತೆ ಆಲಿಸಿ ಅವರಿಗೆ ನೈತಿಕ ಬೆಂಬಲ ಹಾಗೂ ಸೇವಾ ಸೌಲಭ್ಯ ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ತಾಲೂಕು ಶಿಕ್ಷಕರ ಸಮಾಲೋಚನಾ ಸಭೆಯಲ್ಲಿ ಶಿಕ್ಷಕರಿಂದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಓಪಿಎಸ್ ಮತ್ತು ಎನ್‌ಪಿಎಸ್ ಸೇರಿದಂತೆ ಅಧಿಕಾರಿಗಳ ಒತ್ತಡದ ಬಗ್ಗೆ ಶಿಕ್ಷಕರು ಮತ್ತು ಉಪನ್ಯಾಸಕರು ದೂರವಾಣಿಯ ಮೂಲಕ ಒಂದಿಲ್ಲೊಂದು ಸಮಸ್ಯೆಗಳನ್ನು ನನ್ನೊಂದಿಗೆ ಚರ್ಚಿಸುತ್ತಾ ನಿರಂತರವಾಗಿ ಸಂಪರ್ಕದಲ್ಲಿರುವ ನಿಮ್ಮ ಅಭಿಮಾನಕ್ಕೆ ನಾನು ಸದಾ ಸೇವಕನಂತೆ ಸೇವೆ ಸಲ್ಲಿಸುತಿದ್ದೇನೆ ಎಂದರು.

ನಂತರ ಅನಾರೋಗ್ಯದಿಂದ ವಿಶ್ರಾಂತಿ ಪಡೆಯುತ್ತಿರುವ ಮತ್ತು ಅಕಾಲಿಕ ಮರಣ ಹೊಂದಿದ ಕೆಲವು ಶಿಕ್ಷಕರ ಹಾಗೂ ಶಿಕ್ಷಕಿಯರ ಮನೆಗಳಿಗೆ ಭೇಟಿ ನೀಡಿ ಕುಟುಂಬದವರವರಿಗೆ ಸಾಂತ್ವನ ಹೇಳಿದರು. ವೃತ್ತಿನಿರತ ಶಿಕ್ಷಕರಿಗೆ ನಿರಂತರವಾಗಿ ಸಂಪರ್ಕ ಮತ್ತು ಉತ್ತಮ ಸೇವೆ ನೀಡುವ ಭರವಸೆಯೊಂದಿಗೆ ಕಾಲೇಜು ಉಪನ್ಯಾಸಕರ, ಪ್ರೌಢಶಾಲಾ ಸಹ ಶಿಕ್ಷಕರ ಬಡ್ತಿ, ಮುಖ್ಯ ಶಿಕ್ಷಕರ ಬಡ್ತಿ, ಪ್ರೌಢಶಾಲಾ ಸಹ ಶಿಕ್ಷಕರ ವೇತನ ತಾರತಮ್ಯ, ಪದವೀಧರರ ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆ, ನಿರ್ದಿಷ್ಟ ಪಡಿಸಿದ ಹುದ್ದೆಗಳ ಸ್ಥಳ ನಿಯೋಜನೆ ಸಮಸ್ಯೆ, ವಿಷಯವಾರು ಶಿಕ್ಷಕರ ಸಮಸ್ಯೆ, ಪ್ರೌಢಶಾಲಾ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದ ಒತ್ತಡ ಮತ್ತು ಜವಾಬ್ದಾರಿ ಸಮಸ್ಯೆ, ವರ್ಗಾವಣೆ, ವೈದ್ಯಕೀಯ ಸೌಲಭ್ಯಗಳ ಸಮಸ್ಯೆ ಮತ್ತು ಪರಿಹಾರದ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಹಲವಾರು ಶಿಕ್ಷಕರು ಅವರ ಅಭಿಮಾನಿಗಳು ಅವರನ್ನು ಭೇಟಿ ಮಾಡಿ ತಮ್ಮ ಸೇವಾ ಸಮಸ್ಯೆಗಳು ಮತ್ತು ಇತ್ತಿಚಿನ ದಿನಮಾನಗಳಲ್ಲಿ ಖಾಸಗಿ ಅನುದಾನಿತ ಮತ್ತು ಸರ್ಕಾರಿ ಕಾಲೇಜು ಮತ್ತು ಪ್ರೌಢಶಾಲಾ ಶಿಕ್ಷಕರ ಶೈಕ್ಷಣಿಕ, ಆಡಳಿತಾತ್ಮಕ ವಿಚಾರಗಳ ಬಗ್ಗೆ ಮನವಿ ಸಲ್ಲಿಸಿದರು. ಈ ವೇಳೆ ಶಿಕ್ಷಕರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.ಫೋಟೋ 20-ಟಿಪಿಟಿ3ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ : ಶಿಕ್ಷಕರ ಸಮಾಲೋಚನಾ ಸಭೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಡಾ. ವೈ.ಎ.ನಾರಾಯಣಸ್ವಾಮಿ ಅವರನ್ನು ಗೌರವಿಸಲಾಯಿತು.