ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಪಟ್ಟಣದ ಚನ್ನಪ್ಪ ಕುನ್ನೂರ ಪ.ಪೂ .ಕಾಲೇಜಿನಲ್ಲಿ ದತ್ತಿ ಉಪನ್ಯಾಸ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
ಶಿಗ್ಗಾಂವಿ: ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಪಟ್ಟಣದ ಚನ್ನಪ್ಪ ಕುನ್ನೂರ ಪ.ಪೂ .ಕಾಲೇಜಿನಲ್ಲಿ ದತ್ತಿ ಉಪನ್ಯಾಸ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
ಸಮಾಜಸೇವೆ, ಶಿಕ್ಷಣ, ಸಾಹಿತ್ಯ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಮಾಜಿ ಸಂಸದ ಮಂಜುನಾಥ ಕುನ್ನೂರ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ಅವರಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡದ ಕಟ್ಟಾಳು ಬಿರುದು ನೀಡಿ ಗೌರವಿಸಲಾಯಿತು.ಸಾನಿಧ್ಯ ವಹಿಸಿದ್ದ ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಮಾತನಾಡಿ, ನಾಡು-ನುಡಿಯ ಏಳಿಗೆಯಲ್ಲಿ ಕನ್ನಡಪರ ಸಂಘಟನೆಗಳ ಪಾತ್ರ ಮಹತ್ವದ್ದಾಗಿದೆ. ಇದರಿಂದ ನಾಡಿನ ಸುಭದ್ರತೆ ಹಾಗೂ ಭಾಷೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ, ಸಂಘಟನೆಗಳು ಸಮಾಜಮುಖಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಚನ್ನಪ್ಪ ಕುನ್ನೂರ ಪ್ರೌಢಶಾಲೆಯ ಶಿಕ್ಷಕ ಕೆ.ಜಿ. ಮಲ್ಲೂರು ಅವರು ‘ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು’ ವಿಷಯ ಕುರಿತು ದತ್ತಿ ಉಪನ್ಯಾಸ ನೀಡಿದರು.ಮಾಜಿ ಸಂಸದ ಮಂಜುನಾಥ ಕುನ್ನೂರ, ದಾಸಶ್ರೇಷ್ಠ ಕನಕದಾಸ ಸೇವಾ ಸಮಿತಿ ಅಧ್ಯಕ್ಷ ಮಲ್ಲಪ್ಪ ರಾಮುಗೇರಿ (ದಿ. ಚನ್ನಬಸಮ್ಮ ರಾಮುಗೇರಿ ಸ್ಮರಣಾರ್ಥ), ಶಿಕ್ಷಕ ಬಸವರಾಜ ಬಸರಿಕಟ್ಟಿ (ದಿ. ಶಿವಪ್ಪ ಫಕೀರಪ್ಪ ಬಸರಿಕಟ್ಟಿ ಸ್ಮರಣಾರ್ಥ) ಹಾಗೂ ಶಶಿಕಾಂತ ವಸಂತ ಹಿತ್ತಲಕೇರಿ (ದಿ. ವಸಂತ ಕಲ್ಲಪ್ಪ ಹಿತ್ತಲಕೇರಿ ಸ್ಮರಣಾರ್ಥ) ಅವರ ದತ್ತಿ ನಿಧಿಗಳ ನೆರವಿನಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ತಾಲೂಕು ಕಸಾಪ ಅಧ್ಯಕ್ಷ ನಾಗಪ್ಪ ಬೆಂತೂರ, ಕಾಲೇಜಿನ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ, ಬಸವರಾಜ ಹೆಸರೂರ, ವೀರಣ್ಣ ಬಡ್ಡಿ, ಎಸ್.ಎನ್. ಮುಗಳಿ, ಎಂ.ಬಿ. ಹಳೆಮನಿ, ಶಿವಪುತ್ರಪ್ಪ ಜಕ್ಕಣ್ಣನವರ, ಎಸ್.ಕೆ. ಹೂಗಾರ, ಗಂಗಣ್ಣ ಕಲ್ಯಾಣಿ, ಕೆ.ಎನ್. ಕೋಡಿಹಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.