ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ನಿಧನ

| Published : Mar 24 2024, 01:41 AM IST

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ನಿಧನ
Share this Article
  • FB
  • TW
  • Linkdin
  • Email

ಸಾರಾಂಶ

ಶಿರಾ ಕ್ಷೇತ್ರದ ಮಾಜಿ ಶಾಸಕರು, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾಜಿ ಸಂಸದರು, ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರೂ ಆದ ಸಿ.ಪಿ.ಮೂಡಲಗಿರಿಯಪ್ಪ (87) ಅವರು ತೀವ್ರ ಉಸಿರಾಟ ಸಮಸ್ಯೆಯಿಂದ ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ ನಿಧನ ಹೊಂದಿದ್ದಾರೆ.

ಕನ್ನಡಪ್ರಭ ವಾರ್ತೆ ಶಿರಾ

ಶಿರಾ ಕ್ಷೇತ್ರದ ಮಾಜಿ ಶಾಸಕರು, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾಜಿ ಸಂಸದರು, ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರೂ ಆದ ಸಿ.ಪಿ.ಮೂಡಲಗಿರಿಯಪ್ಪ (87) ಅವರು ತೀವ್ರ ಉಸಿರಾಟ ಸಮಸ್ಯೆಯಿಂದ ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ ನಿಧನ ಹೊಂದಿದ್ದಾರೆ.

ಶಿರಾ ತಾಲೂಕಿನ ಆಂಧ್ರ ಗಡಿಭಾಗ ಹುಲಿಕುಂಟೆ ಹೋಬಳಿಯ ಚಿರತಹಳ್ಳಿ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ 1937ರಲ್ಲಿ ಪಟೇಲ್ ಪಾಪೇಗೌಡ ಅವರ ೪ನೇ ಮಗನಾಗಿ ಹುಟ್ಟಿ ಬಿಎ, ಎಲ್.ಎಲ್.ಬಿ ಪದವಿ ಪಡೆದು ವಕೀಲ ವೃತ್ತಿಯನ್ನು ಮಾಡುತ್ತಲೇ ರಾಜಕೀಯ ಪ್ರವೇಶ ಮಾಡಿದ ಸಿ.ಪಿ.ಮೂಡಲಗಿರಿಯಪ್ಪ ಅವರು ಶಿರಾ ಕ್ಷೇತ್ರದ ಶಾಸಕರಾಗಿ ಹಾಗೂ ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಸತತ ಮೂರು ಬಾರಿ ಗೆಲುವು ಸಾಧಿಸಿ ೧೫ ವರ್ಷಗಳ ಕಾಲ ಸಂಸದರಾಗಿದ್ದರು.

ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಮಾಜಿ ಸಂಸದರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿರವರ ಕುಟುಂಬದಲ್ಲಿ ಹೆಚ್ಚು ಒಡನಾಟ ಹೊಂದಿದ್ದರು. ಬಾಲಯೋಗಿ ಅವರ ನೇತೃತ್ವದ ಭಾರತೀಯ ಸಂಸದೀಯ ನಿಯೋಗದ ಸದಸ್ಯರಾಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಹುದ್ದೆಗಳನ್ನು ನಿಭಾಯಿಸಿದ್ದರು. ಇಂದಿರಾ ಗಾಂಧಿ ಕಾಲದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ, ಡಿಸಿಸಿ (ಐ), ಕರ್ನಾಟಕ ಪ್ರಧಾನ ಕಾರ್ಯದರ್ಶಿ, ಕರ್ನಾಟಕದಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ (ಇಂದಿರಾ) ಪಿಸಿಸಿ (ಐ) ಕಾನೂನು ಕೋಶದ ಅಧ್ಯಕ್ಷರಾಗಿ, ಅಧೀನ ಶಾಸನ ಸಮಿತಿಯ ಸದಸ್ಯರಾಗಿ, ಅಂದಾಜು ಸಮಿತಿಯ ಸದಸ್ಯರಾಗಿ, ಸಾರ್ವಜನಿಕ ಉದ್ಯಮಗಳ ಸಮಿತಿಯ ಸದಸ್ಯರಾಗಿ, ಕಾನೂನು ಮತ್ತು ನ್ಯಾಯ ಸಚಿವಾಲಯದ ಸಲಹಾ ಸಮಿತಿಯ ಸದಸ್ಯರಾಗಿ, ಅಂದಾಜು ಸಮಿತಿಯ ಸದಸ್ಯರಾಗಿ, ಪೆಟ್ರೋಲಿಯಂ ಮತ್ತು ರಾಸಾಯನಿಕಗಳ ಸಮಿತಿಯ ಸದಸ್ಯರಾಗಿ, ನಗರಾಭಿವೃದ್ಧಿ ಸಚಿವಾಲಯದ ಸಲಹಾ ಸಮಿತಿಯ ಸದಸ್ಯರಾಗಿ, ಆಹಾರ, ನಾಗರಿಕ ಸರಬರಾಜು ಮತ್ತು ಸಾರ್ವಜನಿಕ ವಿತರಣಾ ಸಮಿತಿಯ ಸದಸ್ಯ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪಸಮಿತಿ, ಸದನದ ಸಭೆಗಳಿಗೆ ಸದಸ್ಯರ ಗೈರುಹಾಜರಿ ಸಮಿತಿಯ ಸದಸ್ಯರಾಗಿ, ಕಾರ್ಮಿಕ ಸಚಿವಾಲಯದ ಸಲಹಾ ಸಮಿತಿಯ ಸದಸ್ಯರಾಗಿ ಹಲವು ಹುದ್ದೆಗಳನ್ನು ನಿಭಾಯಿಸಿ ಸೈ ಎನಿಸಿಕೊಂಡಿದ್ದರು.

ಸಿ.ಪಿ.ಮೂಡಲಗಿರಿಯಪ್ಪ ಅವರ ಸುಪುತ್ರರಾದ ಡಾ.ಸಿ.ಎಂ.ರಾಜೇಶ್ ಗೌಡ ಅವರು ಶಿರಾ ಕ್ಷೇತ್ರದ ವಿಧಾನಸಭಾ ಸದಸ್ಯರಾಗಿ ಸೇವೆ ಸಲ್ಲಿಸಿ ದ್ದಾರೆ. ಸಿ.ಪಿ.ಮೂಡಲಗಿರಿಯಪ್ಪ ಅವರು ಪತ್ನಿ ಲಕ್ಷ್ಮೀದೇವಿ, ಮಗ ಡಾ.ಸಿ.ಎಂ.ರಾಜೇಶ್ ಗೌಡ, ಸೊಸೆ ಡಾ.ತೇಜಸ್ವಿನಿ, ಹಾಗೂ ಮಗಳು ಕವಿತ, ಅಳಿಯ ಡಾ. ಗೋಪಾಲ್ ಹಾಗೂ ಸಾವಿರಾರು ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ. ಮೃತರ ಅಂತಿಮ ಸಂಸ್ಕಾರವನ್ನು ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ತಾಲೂಕಿನ ಚಿರತಹಳ್ಳಿ ತೋಟದ ಮನೆ ಗಣೇಶ ಗುಡಿ ಎಸ್ಟೇಟ್‌ನಲ್ಲಿ ನೆರವೇರುವುದು.

ಸಂತಾಪ:

ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ಅವರ ನಿಧನಕ್ಕೆ ಶಾಸಕ ಟಿ.ಬಿ.ಜಯಚಂದ್ರ, ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ, ಕೆ.ಎ.ತಿಪ್ಪೇಸ್ವಾಮಿ, ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಎಸ್.ಆರ್.ಗೌಡ, ತೆಂಗು ನಿಗಮದ ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ತಾಲೂಕು ಕುಂಚಿಟಿಗರ ಸಂಘದ ಅಧ್ಯಕ್ಷ ಪಿ.ಎಸ್.ತ್ಯಾಗರಾಜಪ್ಪ, ಕಾರ್ಯದರ್ಶಿ ಗುಳಿಗೇನಹಳ್ಳಿ ನಾಗರಾಜು, ರಾಜ್ಯ ಜೆಡಿಎಸ್ ಮುಖಂಡ ಆರ್.ಉಗ್ರೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಸತ್ಯಪ್ರಕಾಶ್, ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.