ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಿವೃತ್ತಿ ಹಣ ನೀಡದಿರುವುದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದ ಮೈಷುಗರ್ ಮಾಜಿ ನೌಕರನೊಬ್ಬ ಬುಧವಾರ ವಿಷ ಸೇವನೆ ಮಾಡಿದ್ದಾನೆ. ಕೂಡಲೇ ಕುಟುಂಬದವರು ಆತನನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.ಮಂಡ್ಯ ತಾಲೂಕಿನ ಹುಲಿವಾನ ಗ್ರಾಮದ ನಿವಾಸಿ ಎಚ್.ಎನ್.ಮಹದೇವಸ್ವಾಮಿ ಆತ್ಮಹತ್ಯೆ ಯತ್ನಿಸಿದ ವ್ಯಕ್ತಿ. ಸ್ವಯಂ ನಿವೃತ್ತಿ ಹಣ ಬಿಡುಗಡೆಗೊಳಿಸದೆ ಅನ್ಯಾಯ ಮಾಡುತ್ತಿರುವುದಾಗಿ ಆರೋಪಿಸಿ ಎಚ್.ಎನ್.ಮಹದೇವಸ್ವಾಮಿ ಆತ್ಮಹತ್ಯೆ ಬೆದರಿಕೆಯ ವಿಡಿಯೋವೊಂದನ್ನು ಆ.29 ರಂದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದನು.
ಕಾರ್ಖಾನೆ ಆಡಳಿತ ಮಂಡಳಿಯಿಂದ ಆಗುತ್ತಿರುವ ವಂಚನೆ ವಿರುದ್ಧ ದಯಾಮರಣ ನೀಡುವಂತೆ ಕೋರಿ ಮಾಜಿ ನೌಕರ ಎಚ್.ಎನ್.ಮಹದೇವಸ್ಥಾಮಿ ಅವರು ಆ.13ರಂದೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಈವರೆಗೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ ಸೋಮವಾರದವರೆಗೆ ಅವರಿಗೆ ಗಡುವು ನೀಡುತ್ತಿದ್ದು, ಅಷ್ಟರೊಳಗೆ ನನಗೆ ಸ್ವಯಂ ನಿವೃತ್ತಿ ಹಣವನ್ನು ಬಿಡುಗಡೆಗೊಳಿಸದಿದ್ದರೆ ಆತ್ಮಹತ್ಯೆಗೆ ಶರಣಾಗುತ್ತೇನೆ ಎಂದು ವಿಡಿಯೋದಲ್ಲಿ ತಿಳಿಸಿದ್ದರು.ಮೈಷುಗರ್ ಕಾರ್ಖಾನೆಯಲ್ಲಿ ಮಹದೇವಸ್ಥಾಮಿ ಅವರು 14 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಅನಧಿಕೃತ ಗೈರು ಹಾಜರಿ ಎಂಬ ಆರೋಪದಡಿ ಕಂಪನಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಬಳಿಕ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಆ ಬಳಿಕ ನ್ಯಾಯಾಲಯದಿಂದ ಪ್ರಕರಣವನ್ನು ಹಿಂಪಡೆದು ದಾಖಲೆಯನ್ನು ಸಲ್ಲಿಸಿದಲ್ಲಿ ಆಡಳಿತ ಮಂಡಳಿ ಮುಂದಿನ ಕ್ರಮ ವಹಿಸುವ ತಿಳಿವಳಿಕೆ ಪತ್ರ ನೀಡಿತ್ತು. ಅದರಂತೆ ಪ್ರಕರಣ ಹಿಂಪಡೆದಿದ್ದರು. ವಜಾಗೊಂಡ ನೌಕರರಿಗೆ ಕಾನೂನು ಸಲಹೆ ಪಡೆದು ಯಾವ ಯಾವ ನೌಕರರಿಗೆ ಪರಿಹಾರ ನೀಡಬೇಕೆಂದು ವಕೀಲರು ಅಭಿಪ್ರಾಯ ವ್ಯಕ್ತಪಡಿಸಿರುವರೋ ಅವರಿಗೆ ಪರಿಹಾರ ನೀಡಲು ನ್ಯಾಯಾಲಯ ವ್ಯವಸ್ಥಾಪಕ ನಿರ್ದೇಶಕರಿಗೆ ಅಧಿಕಾರ ನೀಡಲಾಗಿತ್ತು.
ಆ ನಂತರ ಬಂದ ಮೂವರು ವ್ಯವಸ್ಥಾಪಕ ನಿರ್ದೇಶಕರು ಸ್ವಯಂ ನಿವೃತ್ತಿ ಹಣವನ್ನು ಕೊಡಲಿಲ್ಲ. ಇಲ್ಲಿಯ ತನಕ ನನಗೆ ಆಡಳಿತ ಮಂಡಳಿ ಹಣವನ್ನು ನೀಡಿಲ್ಲ. ಇದರಿಂದ ಜೀವನ ನಡೆಸುವುದು ಕಷ್ಟಕರವಾಗಿದೆ. ಹಾಗಾಗಿ ಬೇರೆ ದಾರಿ ಇಲ್ಲದೆ ವಿಷ ಸೇವನೆ ಮಾಡಿರುವುದಾಗಿ ತಿಳಿಸಿದ್ದಾರೆ. ದುಡುಕಿನ ನಿರ್ಧಾರ ಬೇಡ: ಸಿ.ಡಿ.ಗಂಗಾಧರ್ಮೈಷುಗರ್ ಮಾಜಿ ನೌಕರ ಎಚ್.ಎನ್.ಮಹದೇವಸ್ವಾಮಿ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ ಹಿನ್ನೆಲೆಯಲ್ಲಿ ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಈ ಸಮಯದಲ್ಲಿ ಅಧ್ಯಕ್ಷರ ಎದುರು ಮಹದೇವಸ್ವಾಮಿ ಪತ್ನಿ ಜ್ಯೋತಿ, ಪುತ್ರಿ ಯೋಗಿತಾ ಕಣ್ಣೀರು ಹಾಕಿ ಅಧ್ಯಕ್ಷರ ಕಾಲಿಗೆ ಬಿದ್ದು ಗೋಳಿಟ್ಟರು. ನೊಂದ ಕುಟುಂಬಕ್ಕೆ ಸಮಾಧಾನ ಹೇಳಿದ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಇಂತಹ ಘಟನೆ ನಡೆಯಬಾರದಿತ್ತು. ವಜಾಗೊಂಡ ನೌಕರರು ಇಂತಹ ದುಡುಕಿನ ಪ್ರಯತ್ನ ಮಾಡಬಾರದು. ಹಿಂದಿನ ಆಡಳಿತ ಮಂಡಳಿಯಲ್ಲಿ ಕೆಲವರು ಪ್ರಭಾವ ಬೀರಿ ಪರಿಹಾರ ಪಡೆದುಕೊಂಡಿದ್ದಾರೆ ಎಂದರು.ನಾವು ಅಧಿಕಾರಕ್ಕೆ ಬಂದ ನಂತರದಲ್ಲಿ ಯಾರೊಬ್ಬರಿಗೂ ಪರಿಹಾರ ಹಣ ಕೊಟ್ಟಿಲ್ಲ. ಸ್ವಯಂ ನಿವೃತ್ತಿ ಪಡೆದವರಿಗೆ ಹಣ ನೀಡಲಾಗಿದೆ. ವಜಾಗೊಂಡ ನೌಕರರಿಗೆ ಪರಿಹಾರ ನೀಡಲು ಕಾನೂನಾತ್ಮಕ ಸಮಸ್ಯೆ ಇರುವುದಾಗಿ ಹೇಳಲಾಗುತ್ತಿದೆ. ಇನ್ನು ಎರಡು-ಮೂರು ದಿನಗಳೊಗೆ ಕಾರ್ಖಾನೆಯ ಕಾನೂನು ಸಲಹೆಗಾರರೊಂದಿಗೆ ಚರ್ಚಿಸಿ ನ್ಯಾಯ ದೊರಕಿಸಲಾಗುವುದು ಎಂದರು.
ಯಾರೂ ಸಹ ಆತಂಕಪಡುವುದು ಬೇಡ. ಕಾರ್ಖಾನೆ ನೌಕರರ ಪರವಾಗಿದೆ. ಆರ್ಥಿಕ ಸಮಸ್ಯೆಯೂ ಇಲ್ಲ. ಸರ್ಕಾರದೊಂದಿಗೆ ಚರ್ಚಿಸಿ ನೌಕರರಿಗೆ ಪರಿಹಾರ ದೊರಕಿಸಿ ಕೊಡಲು ಶ್ರಮಿಸುವುದಾಗಿ ಹೇಳಿದರು.