ಸಾರಾಂಶ
- ಕಾಂಗ್ರೆಸ್ ನೀಡಿದ ಪರಮಾಧಿಕಾರದಿಂದ ಭೂ ಕಬಳಿಕೆಗೆ ಯತ್ನ: ಛಲವಾದಿ ನಾರಾಯಣ ಸ್ವಾಮಿ ಆಕ್ರೋಶ
- - - ಕನ್ನಡಪ್ರಭ ವಾರ್ತೆ ದಾವಣಗೆರೆವಕ್ಫ್ ಗೊಂದಲ, ಗದ್ದಲಗಳಿಗೆಲ್ಲಾ ಕಾಂಗ್ರೆಸ್ಸೇ ನೇರ ಹೊಣೆಯಾಗಿದೆ. ಅವರ ಸರ್ಕಾರ ನೀಡಿದ ಪರಮಾಧಿಕಾರದಿಂದಲೇ ವಕ್ಫ್ ಬೋರ್ಡ್ ರಾಜ್ಯದಲ್ಲಿ ಸರ್ವಾಧಿಕಾರಿಯಂತೆ ಜನಸಾಮಾನ್ಯರು, ರೈತರು, ಅಮಾಯಕರು, ಮಠ- ಮಂದಿರಗಳ ಆಸ್ತಿ, ನಿವೇಶನ, ಜಮೀನುಗಳನ್ನು ಕಬಳಿಸುತ್ತಿದೆ ಎಂದು ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಆರೋಪಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1954ರಲ್ಲಿ ವಕ್ಫ್ ಜಾರಿಗೆ ತಂದ ಜವಾಹರ ಲಾಲ್ ನೆಹರೂ, ಈ ಎಲ್ಲ ಗೊಂದಲಗಳ ಮೂಲ ಪಿತಾಮಹ. 1969-70ರಲ್ಲಿ ವಕ್ಫ್ ಆಸ್ತಿಗಳ ಸರ್ವೇಗೆ ಆದೇಶಿಸಲಾಗಿತ್ತು. ಆಗಿನ ಮೌಲ್ವಿಗಳು, ದರ್ಗಾದವರು ಆಧಾರ ರಹಿತವಾಗಿ ನೀಡಿದ ಮಾಹಿತಿಯಂತೆ 1974ರಲ್ಲಿ ಗೆಜೆಟ್ ನೋಟಿಫಿಕೇಷನ್ ಹೊರಡಿಸಲಾಗಿದೆ ಎಂದರು.ಪಿ.ವಿ. ನರಸಿಂಹ ರಾವ್ ಸರ್ಕಾರವು 1994ರಲ್ಲಿ ವಕ್ಫ್ ಬೋರ್ಡ್ ಅಧಿಕಾರ ಹೆಚ್ಚಿಸಿತು. 2013ರಲ್ಲಿ ಡಾ. ಮನಮೋಹನ ಸಿಂಗ್ ಸರ್ಕಾರ ವಕ್ಫ್‌ಗೆ ಪರಮಾಧಿಕಾರ ಕೊಟ್ಟಿತು. ಇದರಿಂದಾಗಿ ದಲಿತರು, ಹಿಂದುಳಿದವರು, ಮುಸ್ಲಿಮರೂ ಸೇರಿದಂತೆ ಅಮಾಯಕರ ಆಸ್ತಿ ಕಬಳಿಸಲು ವಕ್ಫ್ ಮಂಡಳಿಗೆ ಸರ್ವಾಧಿಕಾರ ಸಿಕ್ಕಂತಾಗಿದೆ ಎಂದು ದೂರಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶದ ಮೇರೆಗೆ ವಕ್ಫ್ ಸಚಿವ ಜಮೀರ್ ಅಹಮ್ಮದ್ ಎಲ್ಲ ಜಿಲ್ಲೆಗಳಲ್ಲೂ ವಕ್ಫ್ ಅದಾಲತ್ ನಡೆಸಿ, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರಿಂದ ನಾಲ್ಕಾರು ತಲೆಮಾರುಗಳಿಂದ ಉಳುಮೆ ಮಾಡಿಕೊಂಡು ಬಂದ ಜಮೀನನ್ನು ಕಳೆದುಕೊಳ್ಳುವ ಆತಂಕದಲ್ಲಿ ರೈತರು, ಅಮಾಯಕರಿದ್ದಾರೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆದೇಶದಂತೆ ಮೂರು ತಂಡಗಳಾಗಿ ಬಿಜೆಪಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದೆ. ವಕ್ಫ್ ಭೂ ಕಬಳಿಕೆಗೆ ಸಂಬಂಧಿಸಿದಂತೆ ಜನರಿಂದ ನೇರವಾಗಿ ಅಭಿಪ್ರಾಯ ಸಂಗ್ರಹಿಸಿ, ವಸ್ತುಸ್ಥಿತಿ ಅಧ್ಯಯನ ಮಾಡಲಾಗುತ್ತಿದೆ. ರೈತರಿಂದ ಅಹವಾಲು ಸ್ವೀಕರಿಸಿ, ಮುಂದೆ ಪಕ್ಷ ಮಾಡಬೇಕಾದ ಕೆಲಸಗಳ ಬಗ್ಗೆ ಚರ್ಚಿಸಲಾಗುತ್ತಿದೆ. ಮೂರೂ ತಂಡಗಳ ವರದಿ ಕ್ರೋಢೀಕರಿಸಿ, ಜಂಟಿ ಸದನ ಸಮಿತಿಗೆ ಸಲ್ಲಿಸಲಾಗುವುದು. ರಾಜ್ಯ ಸರ್ಕಾರಕ್ಕೂ ಮಾಹಿತಿ ನೀಡಿ, ಕ್ರಮಕ್ಕೆ ಒತ್ತಾಯಿಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ ಸುನಿಲಕುಮಾರ, ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ, ಬಿ.ಸಿ.ಪಾಟೀಲ, ಮಾಜಿ ಸಂಸದ ಮುನಿಸ್ವಾಮಿ, ವಿಪ ಮಾಜಿ ಸದಸ್ಯ ವೈ.ಎ. ನಾರಾಯಣಸ್ವಾಮಿ, ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ, ಜಿಲ್ಲಾಧ್ಯಕ್ಷ ಎನ್. ರಾಜಶೇಖರ ನಾಗಪ್ಪ, ಮಾಡಾಳ ಮಲ್ಲಿಕಾರ್ಜುನ, ಚಂದ್ರಶೇಖರ ಪೂಜಾರ, ಧನಂಜಯ ಕಡ್ಲೆಬಾಳ್ ಇತರರು ಇದ್ದರು.
- - -ಬಾಕ್ಸ್ * ರೈತರ ಪರ ಬಿಜೆಪಿ ನಿಲ್ಲಲಿದೆ: ಛಲವಾದಿ ನಾರಾಯಣ ಸ್ವಾಮಿ ಧಾರವಾಡ, ಹಾವೇರಿಗೆ ತಮ್ಮ ತಂಡ ಮೊನ್ನೆ ಭೇಟಿ ನೀಡಿದ್ದು, ಧಾರವಾಡದಲ್ಲಿ ವಕ್ಫ್ ಆಸ್ತಿಯಲ್ಲದ ಹಿಂದೂ ರುದ್ರಭೂಮಿ, ಕೋ-ಆಪರೇಟಿವ್ ಸೊಸೈಟಿ, ಶಾಲೆ, ಅಂಬೇಡ್ಕರ್ ಪ್ರತಿಮೆ ಇರುವ ಪ್ರದೇಶ, ದೇವಸ್ಥಾನಗಳನ್ನೂ ವಕ್ಫ್ ಆಸ್ತಿಯಾಗಿ ಮಾಡಿದ್ದಾರೆ. ಹರಿಹರ ತಾ. ಭಾನುವಳ್ಳಿಯಲ್ಲಿ 1 ಎಕರೆ ಖಬರಸ್ಥಾನದ ಜೊತೆಗೆ 4.20 ಎಕರೆ ಹಾಗೂ ಪಕ್ಕದ 2 ಎಕರೆ ಜಾಗವೂ ಸೇರಿದಂತೆ ಒಟ್ಟು ಆರೂ ಮುಕ್ಕಾಲು ಎಕರೆ ಜಾಗ ವಕ್ಫ್ ಆಸ್ತಿಗೆ ಸೇರಿಸಿರುವುದು ಗಮನಕ್ಕೆ ಬಂದಿದೆ. ಚಿತ್ರದುರ್ಗ, ತುಮಕೂರು ಮಾರ್ಗವಾಗಿ ತಂಡದೊಂದಿಗೆ ಬೆಂಗಳೂರಿಗೆ ತೆರಳುತ್ತೇವೆ ಎಂದು ನಾರಾಯಣ ಸ್ವಾಮಿ ಹೇಳಿದರು. ಸಿಂಧಗಿಯಲ್ಲಿ 11ನೇ ಶತಮಾನದ ವಿರಕ್ತಮಠದ ಆಸ್ತಿಯನ್ನೂ ವಕ್ಫ್‌ಗೆ ಸೇರಿಸಿದ್ದಾರೆ. ವಕ್ಫ್ ಮಂಡಳಿ ಇಲ್ಲದ ಕಾಲದಲ್ಲಿ 4 ಎಕರೆ ಜಮೀನು ದಾನ ಕೊಟ್ಟವರು ಯಾರೆಂಬುದೇ ಪ್ರಶ್ನೆ. ಚಳ್ಳಕೆರೆಯಲ್ಲಿ ಚರ್ಮ ಹದ ಮಾಡುವ ದಲಿತರಿಗೆ ಸೇರಿದ 6 ಎಕರೆ ಜಾಗವನ್ನು ಪಕ್ಕದ ಮಸೀದಿಯವರು ವಕ್ಫ್ ಆಸ್ತಿಯೆನ್ನುತ್ತಿದ್ದಾರೆ. ತೊಂದರೆಗೊಳಗಾದವರು, ರೈತರ ಪರ ಬಿಜೆಪಿ ನಿಲ್ಲಲಿದೆ ಎಂದು ಅಭಯ ನೀಡಿದರು.
- - -- (ಛಲವಾದಿ ನಾರಾಯಣ ಸ್ವಾಮಿ)
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))