ಕನ್ನಡಪ್ರಭ ವಾರ್ತೆ ಬೆಳಗಾವಿ
ಮಾಜಿ ಸೈನಿಕನ ಸಾವನ್ನು ರಸ್ತೆ ಅಪಘಾತ ಮತ್ತು ಹೃದಯಾಘಾತ ಎಂದು ಬಿಂಬಿಸಿ ಮುಚ್ಚಿಹಾಕಲು ವ್ಯವಸ್ಥಿತ ಸಂಚು ನಡೆದಿತ್ತು ಎಂಬ ವಿಷಯ ಬಹಿರಂಗವಾಗಿದ್ದು, ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ₹2 ಕೋಟಿ ವಿಮೆ ಹಣಕ್ಕಾಗಿ ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ಗಂಡನನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳನ್ನು ತಿರುಚಲು ಎಫ್‌ಎಸ್‌ಎಲ್ ಅಧಿಕಾರಿಗಳು, ಪೊಲೀಸ್ ಕಮಿಷನರ್ ಎಫ್ ಡಿಎ ಕೈಜೋಡಿಸಿದ್ದರು ಎಂಬ ಸಂಗತಿ ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯ ಘೋಡಗೇರಿ ಗ್ರಾಮದ ಮಾಜಿ ಸೈನಿಕ ಸಂದೀಪ್ ಮಂಜರಗಿ ಸಾವಿನ ಪ್ರಕರಣ ಆರಂಭದಲ್ಲಿ ಸಾಮಾನ್ಯ ಅಪಘಾತವೆಂದು ಪರಿಗಣಿಸಲಾಗಿತ್ತು. ಆದರೆ, ಪ್ರಕರಣದ ತನಿಖೆ ಆಳಕ್ಕೆ ಇಳಿದಂತೆ ಇದು ಪೂರ್ವನಿಯೋಜಿತ ಕೊಲೆ ಎಂಬುದು ಬೆಳಕಿಗೆ ಬಂದಿದ್ದು, ಈಗ ಪ್ರಕರಣಕ್ಕೆ ಮತ್ತೊಂದು ಸ್ಫೋಟಕ ತಿರುವು ಸಿಕ್ಕಿದೆ. ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು ತಿರುಚಿ ತನಿಖೆಯ ದಿಕ್ಕು ತಪ್ಪಿಸಲು ನಡೆಸಿರುವ ಪ್ರಯತ್ನದ ಬಗ್ಗೆ ಬೆಳಕಿಗೆ ಬಂದಿದೆ. ಈ ಸಂಬಂಧ ಬೆಳಗಾವಿಯ ಎಫ್‌ಎಸ್‌ಎಲ್ ಕಚೇರಿಯ ಹಿರಿಯ ವೈಜ್ಞಾನಿಕ ಅಧಿಕಾರಿ ಪಿ.ಎನ್. ನಾಗರಾಜ್, ಪ್ರಯೋಗಾಲಯ ಸಹಾಯಕ ಚನ್ನಯ್ಯ, ಗುಮಾಸ್ತ ಅಪ್ಪಾಸಾಬ ನಾಯಕ್ ಹಾಗೂ ಪೊಲೀಸ್ ಕಮಿಷನರ್ ಕಚೇರಿಯ ಎಫ್‌ಡಿಎ ಅಶೋಕ ಗುಜನಾಳ ಎಂಬುವರನ್ನು ಬಂಧಿಸಲಾಗಿದೆ.
ಕೃತ್ಯ ಬಯಲಾಗಿದ್ದು ಹೇಗೆ?ಪ್ರಕರಣದ ತನಿಖೆಗೆ ಮಹತ್ವದ ತಿರುವು ನೀಡಿದ್ದು ಆರೋಪಿ ಪುಂಡಲೀಕ ಡೊಂಬರ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಸ್ಟೇಟಸ್. ಅದನ್ನು ಆಧರಿಸಿ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆಯ ಸಂಪೂರ್ಣ ಸಂಚು ಬಯಲಿಗೆ ಬಂದಿದೆ. ಸುಮಾ ಮಂಜರಗಿ ಹಾಗೂ ಪುಂಡಲೀಕ ಡೊಂಬರ್ ನಡುವೆ ಕಳೆದ ಎರಡೂವರೆ ವರ್ಷಗಳಿಂದ ಅಕ್ರಮ ಸಂಬಂಧವಿತ್ತು. ಸಂದೀಪ್ ಹೆಸರಲ್ಲಿ ವಿವಿಧ ಕಂಪನಿಗಳಿಂದ ಸುಮಾರು ಎರಡು ಕೋಟಿ ರೂಪಾಯಿ ಮೌಲ್ಯದ ವಿಮೆ ಮಾಡಿಸಲಾಗಿತ್ತು. ವಿಮೆ ಹಣ ಪಡೆಯುವ ಉದ್ದೇಶದಿಂದಲೇ ಕೊಲೆಗೆ ಸಂಚು ರೂಪಿಸಲಾಗಿತ್ತು ಎಂದು ಎಸ್ಪಿ ಕೆ.ರಾಮರಾಜನ್ ಮಾಹಿತಿ ನೀಡಿದ್ದಾರೆ.
ಸಲೈನ್ ಬಾಟಲಿಯಲ್ಲಿ ವಿಷ
ಜೆಜಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ರಾಹುಲ್ ಜೋಗಿ ಸಹಾಯದಿಂದ ಸಂದೀಪ್ ಅವರನ್ನು ವಿಶೇಷ ಕೊಠಡಿಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಈ ವೇಳೆ ಸಲೈನ್ ಬಾಟಲಿಯಲ್ಲಿ ವಿಷ ಮಿಶ್ರಣ ಮಾಡಿ ಕೊಲೆ ಮಾಡಲಾಗಿದೆ ಎಂಬ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಮುಚ್ಚಿಹಾಕಲು ಆರ್‌ಎಂಪಿ ವೈದ್ಯ ಬಸವರಾಜ್ ಭಸ್ಮೆ, ಪೊಲೀಸ್ ಕಮಿಷನರ್ ಕಚೇರಿಯ ಎಫ್‌ಡಿಎ ಅಶೋಕ ಗುಜನಾಳ, ಎಫ್‌ಎಸ್‌ಎಲ್ ಸಿಬ್ಬಂದಿ ಅಪ್ಪಾಸಾಬ ನಾಯಕ್, ಲ್ಯಾಬ್ ಅಸಿಸ್ಟೆಂಟ್ ಚನ್ನಯ್ಯ ಹಾಗೂ ಹಿರಿಯ ವೈಜ್ಞಾನಿಕ ಅಧಿಕಾರಿ ಪಿ.ಎನ್.ನಾಗರಾಜ್ ಸಹಕರಿಸಿದ್ದಾರೆಂದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
-----ಕೋಟ್
ಈ ಪ್ರಕರಣದಲ್ಲಿ ಇದುವರೆಗೆ ಪತ್ನಿ ಸುಮಾ ಮಂಜರಗಿ, ಪ್ರಿಯಕರ ಪುಂಡಲೀಕ ಡೊಂಬರ್, ಸಚಿನ್ ಎಂಬಾತ ಸೇರಿ ಒಟ್ಟು ಒಂಬತ್ತು ಆರೋಪಿಗಳನ್ನು ಬಂಧಿಸಲಾಗಿದೆ. ಹಣ ಪಡೆದು ಸುಳ್ಳು ವರದಿ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಎಫ್‌ಎಸ್‌ಎಲ್ ವರದಿ ತಿರುಚಿರುವ ಮಾಹಿತಿ ತಿಳಿದ ಕೆಲ ಯೂಟ್ಯೂಬರ್‌ಗಳು ಆರೋಪಿ ಸುಮಾಳನ್ನು ಬ್ಲಾಕ್‌ಮೇಲ್ ಮಾಡಿರುವ ಅಂಶವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಕೆ.ರಾಮರಾಜನ್, ಬೆಳಗಾವಿ ಎಸ್ಪಿ
------ಬಾಕ್ಸ್
₹3 ಲಕ್ಷ ಹಣದ ವ್ಯವಹಾರಪ್ರಕರಣದ ಪ್ರಮುಖ ಆರೋಪಿ ಸುಮಾ ಮಂಜರಗಿ ಮೂಲಕ ಹಣದ ವ್ಯವಹಾರ ನಡೆದಿದ್ದು, ಎಫ್‌ಡಿಎ ಅಶೋಕ ಗುಜನಾಳ ಎಂಬಾತ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಸುಮಾರು ₹ 3 ಲಕ್ಷ ಹಣ ಪಡೆದು ಎಫ್‌ಎಸ್‌ಎಲ್ ವರದಿ ತಿರುಚಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಕಳೆದ ಮಾರ್ಚ್ 13ರಂದು ಸಂದೀಪ ಮಂಜರಗಿ ಬೈಕ್ ಸ್ಕಿಡ್ ಆಗಿ ಬಿದ್ದಿದ್ದಾನೆ ಎಂದು ಹೇಳಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೊದಲು ಹುಕ್ಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಬಳಿಕ ಘಟಪ್ರಭಾದ ಜೆಜಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ವೇಳೆ ಮಾರ್ಚ್ 15ರಂದು ಸಂದೀಪ ಸಾವನ್ನಪ್ಪಿದ್ದರು. ಹೃದಯಾಘಾತದಿಂದ ಸಾವಾಗಿದೆ ಎಂದು ಘೋಷಿಸಲಾಗಿತ್ತು. ಆದರೆ,ದೇಹದಲ್ಲಿ ಯಾವುದೇ ಗಂಭೀರ ಗಾಯಗಳಿಲ್ಲದಿದ್ದರೂ ವ್ಯಕ್ತಿ ಸಾವನ್ನಪ್ಪಿರುವುದು ತನಿಖಾಧಿಕಾರಿಗಳ ಅನುಮಾನಕ್ಕೆ ಕಾರಣವಾಗಿತ್ತು. ಮರಣೋತ್ತರ ಪರೀಕ್ಷೆ ಹಾಗೂ ಎಫ್‌ಎಸ್‌ಎಲ್ ವರದಿಯಲ್ಲಿಯೂ ವಿಷಪ್ರಯೋಗದ ಯಾವುದೇ ಸುಳಿವು ಇಲ್ಲ ಎಂದು ಉಲ್ಲೇಖಿಸಲಾಗಿತ್ತು.