ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟ್ವಾಳ
ವಿದ್ಯೆ ಕಲಿಸಿದ ಶಿಕ್ಷಕಿಗೆ ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನಾಭರಣವನ್ನು ಕಾಣಿಕೆಯಾಗಿ ನೀಡಿ ಹಳೆವಿದ್ಯಾರ್ಥಿಗಳೆಲ್ಲ ಧನ್ಯತೆ ಪಡೆದುಕೊಂಡರೆ, ತನ್ನ ವಿದ್ಯಾರ್ಥಿಗಳ ಪ್ರೀತಿಗೆ ಶಿಕ್ಷಕಿ ಆನಂದಬಾಷ್ಪ ಹರಿಸಿದ ಭಾವನಾತ್ಮಕ ಸನ್ನಿವೇಶವದು.
ಹೌದು ಈ ವಿದ್ಯಮಾನ ನಡೆದದ್ದು ಪಾಣೆಮಂಗಳೂರಿನ ಅಕ್ಕರಂಗಡಿಯಲ್ಲಿರುವ ದಾರುಲ್ ಇಸ್ಲಾಮ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಜಯಲಕ್ಷ್ಮೀ ಆರ್. ಭಟ್ ಅವರು ಅಕ್ಕರಂಗಡಿಯ ದಾರುಲ್ ಇಸ್ಲಾಮ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 28 ವರ್ಷಗಳಿಂದ ಶಿಕ್ಷಕಿಯಾಗಿದ್ದು, 2020ರಲ್ಲಿ ನಿವೃತ್ತರಾಗಿದ್ದರು.
ಬಳಿಕ ಶಿಕ್ಷಕರ ಕೊರತೆಯ ಹಿನ್ನೆಲೆಯಲ್ಲಿ ಅದೇ ಶಾಲೆಯಲ್ಲಿ ಯಾವುದೇ ವೇತನ ಪಡೆಯದೆ ಸೇವೆಯನ್ನು ಮುಂದುವರಿಸಿದ್ದರು. ಈ ರೀತಿ ಒಟ್ಟು 31 ವರ್ಷಗಳ ಕಾಲ ದಾರುಲ್ ಇಸ್ಲಾಮ್ ಶಾಲೆಯಲ್ಲಿ ಕಾರ್ಯ ನಿರ್ವಹಿಸಿದ ಜಯಲಕ್ಷ್ಮೀ ಭಟ್ ವಿದ್ಯಾರ್ಥಿಗಳ ಪಾಲಿಗೆ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದರು. ಈ ಅವಧಿಯಲ್ಲಿ ಸುಮಾರು 2000ದಷ್ಟು ವಿದ್ಯಾರ್ಥಿಗಳಿಗೆ ಅವರು ಮಾರ್ಗದರ್ಶಕರಾಗಿದ್ದರು.
ಈ ಹಿನ್ನೆಲೆಯಲ್ಲಿ ಸೇವಾ ನಿವೃತ್ತರಾಗುತ್ತಿರುವ ತಮ್ಮ ನೆಚ್ಚಿನ ಶಿಕ್ಷಕರಿಗೆ ಉಡುಗೊರೆಯೊಂದನ್ನು ನೀಡಲು ಹಳೆ ವಿದ್ಯಾರ್ಥಿಗಳು ಯೋಜನೆ ರೂಪಿಸಿದರು. ಈ ಕುರಿತಾಗಿ ವಾಟ್ಸ್ಆ್ಯಪ್ ಗ್ರೂಪ್ ರಚಿಸಿ, ಅದರಲ್ಲಿ ಚರ್ಚಿಸಿ ಕೊನೆಗೆ ಚಿನ್ನದ ಸರ ಉಡುಗೊರೆಯಾಗಿ ನೀಡಲು ನಿರ್ಧರಿಸಿದರು.
ಈ ನಿಟ್ಟಿನಲ್ಲಿ ಊರವರ ಸಹಕಾರದೊಂದಿಗೆ ಹಣ ಹೊಂದಿಸಿದ ಹಳೆ ವಿದ್ಯಾರ್ಥಿಗಳು ಸುಮಾರು 2 ಲಕ್ಷ 10 ಸಾವಿರ ರು. ಸಂಗ್ರಹಿಸಿದರು. ಆ ಮೊತ್ತದಲ್ಲಿ 33 ಗ್ರಾಂನ ಚಿನ್ನದ ಸರವನ್ನು ಖರೀದಿಸಿದ್ದರು.
ಈ ಉಡುಗೊರೆ ವಿಚಾರವನ್ನು ಅತ್ಯಂತ ಗೌಪ್ಯವಾಗಿರಿಸಿದ್ದ ಹಳೆ ವಿದ್ಯಾರ್ಥಿಗಳ ತಂಡ, ಬುಧವಾರ ನಡೆದ ಶಾಲಾ ವಾರ್ಷಿಕೋತ್ಸವದಂದು ನೆಚ್ಚಿನ ಶಿಕ್ಷಕಿಯನ್ನು ಸನ್ಮಾನಿಸುವ ವೇಳೆ ಚಿನ್ನಾಭರಣವನ್ನು ಅಚ್ಚರಿಯ ಉಡುಗೊರೆಯಾಗಿ ನೀಡಿದರು. ಹಿರಿಯ ವಿದ್ಯಾರ್ಥಿಗಳ ಪ್ರೀತಿಯ ಕೊಡುಗೆಗೆ ಶಿಕ್ಷಕಿಯ ಕಂಗಳು ಆನಂದಬಾಷ್ಪದಿಂದ ತುಂಬಿತ್ತು.
ಯಾವುದೇ ಸನ್ಮಾನ, ಉಡುಗೊರೆ ಬೇಡ ಎಂದು ನನ್ನ ಎಲ್ಲ ವಿದ್ಯಾರ್ಥಿಗಳಲ್ಲಿ ಹೇಳಿದ್ದೆ. ನನ್ನ ಅರಿವಿಗೆ ಬಾರದೆ ಅವರು ಉಡುಗೊರೆಯ ಮೂಲಕ ತಮ್ಮ ಪ್ರೀತಿಯನ್ನು ತೋರ್ಪಡಿಸಿದ್ದಾರೆ. ನನ್ನ ವಿದ್ಯಾರ್ಥಿಗಳೆಲ್ಲರೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತಾರೆ ಜಯಲಕ್ಷ್ಮೀ ಆರ್. ಭಟ್.
ಜಯಲಕ್ಷ್ಮೀ ಟೀಚರ್ ನಮ್ಮ ಪಾಲಿಗೆ ಕೇವಲ ಶಿಕ್ಷಕಿಯಾಗಿರಲಿಲ್ಲ. ಅವರು ಪೋಷಕರಂತೆ ನಮ್ಮನ್ನು ನೋಡಿಕೊಂಡಿದ್ದರು. ನಮ್ಮೆಲ್ಲರ ಮೇಲೆ ಅವರು ವಿಶೇಷ ಕಾಳಜಿ, ಅಕ್ಕರೆಯನ್ನಿಟ್ಟಿದ್ದರು.
ಇಂದು ನಾವು ಉದ್ಯೋಗ ನಿಮಿತ್ತ ಬೇರೆ ಊರಿನಲ್ಲಿದ್ದರೂ ಅವರನ್ನು ಸ್ಮರಿಸುತ್ತಿರುತ್ತೇವೆ ಎನ್ನುತ್ತಾರೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಾಕೀರ್ ಅಕ್ಕರಂಗಡಿ. ಹಳೆ ವಿದ್ಯಾರ್ಥಿಗಳು ನೀಡಿರುವ ಚಿನ್ನಕ್ಕೆ ಬೆಲೆ ಕಟ್ಟಬಹುದು.
ಆದರೆ ಅವರ ಚಿನ್ನದಂತಹ ಹೃದಯಕ್ಕೆ ಬೆಲೆ ಕಟ್ಟಲಾಗದು. ಈ ಸನ್ಮಾನ ಶಿಕ್ಷಕಿಯು ಎಷ್ಟರ ಮಟ್ಟಿಗೆ ವಿದ್ಯಾರ್ಥಿಗಳಲ್ಲಿ ಪ್ರಭಾವ ಬೀರಿದ್ದರು ಎಂಬುದನ್ನು ಸೂಚಿಸುತ್ತದೆ. ಶಿಕ್ಷಕರನ್ನು ಗೌರವಿಸುವ ಮೂಲಕ ವಿದ್ಯಾರ್ಥಿಗಳು ಉತ್ತಮ ಸ್ಥಾನಕ್ಕೆ ಏರಲು ಸಾಧ್ಯ ಎನ್ನುತ್ತಾರೆ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ.