ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದೆ, ಅನೇಕ ಕವಿ, ಸಾಹಿತಿಗಳು, ಗಣ್ಯರ ಕೊಡುಗೆಯಿಂದ ಕನ್ನಡ ಭಾಷೆ ಶ್ರೀಮಂತವಾಗಿದೆ. ಮಂಡ್ಯ ರಾಜ್ಯದಲ್ಲಿಯೇ ಅತಿಹೆಚ್ಚು ಕನ್ನಡ ಭಾಷೆ ಮಾತನಾಡುವ ಜಿಲ್ಲೆಯಾಗಿದ್ದು, ಕನ್ನಡ ಭಾಷಾಭಿಮಾನವನ್ನು ನಾಡಿಗೆ ತೋರಿಸಿದ ಜಿಲ್ಲೆಯಾಗಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಪ್ರತಿಯೊಬ್ಬರು ಕನ್ನಡ ನಾಡು-ನುಡಿ, ಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಂಡು ಅನ್ಯಭಾಷಿಗರಿಗೂ ಕನ್ನಡದ ಬಗ್ಗೆ ಅಭಿಮಾನ ಬೆಳೆಸುವ ಕೆಲಸ ಮಾಡಬೇಕು ಎಂದು ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಕರೆ ನೀಡಿದರು.ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ನಾಡಹಬ್ಬಗಳ ಆಚರಣಾ ಸಮಿತಿಯಿಂದ ನಡೆದ 71 ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ಹರಿದು ಹಂಚಿಹೋಗಿದ್ದ ಕನ್ನಡನಾಡನ್ನು ಅನೇಕ ಮಹನೀಯರು, ಸಾಹಿತಿಗಳು, ರಾಜಕಾರಣಿಗಳು, ಸಂಘ-ಸಂಸ್ಥೆಗಳು ಒಗ್ಗೂಡಿ ಒಂದುಗೂಡಿದ ಪರಿಣಾಮ ಕನ್ನಡ ರಾಜ್ಯ ಉದಯವಾಯಿತು ಎಂದರು.
ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದೆ, ಅನೇಕ ಕವಿ, ಸಾಹಿತಿಗಳು, ಗಣ್ಯರ ಕೊಡುಗೆಯಿಂದ ಕನ್ನಡ ಭಾಷೆ ಶ್ರೀಮಂತವಾಗಿದೆ. ಮಂಡ್ಯ ರಾಜ್ಯದಲ್ಲಿಯೇ ಅತಿಹೆಚ್ಚು ಕನ್ನಡ ಭಾಷೆ ಮಾತನಾಡುವ ಜಿಲ್ಲೆಯಾಗಿದ್ದು, ಕನ್ನಡ ಭಾಷಾಭಿಮಾನವನ್ನು ನಾಡಿಗೆ ತೋರಿಸಿದ ಜಿಲ್ಲೆಯಾಗಿದೆ ಎಂದು ಬಣ್ಣಿಸಿದರು.ರಾಜ್ಯೋತ್ಸವದಲ್ಲಿ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಅವರು ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಎಲ್ಲಾ ಬ್ಯಾಂಡೆಸೆಟ್ ತಂಡಗಳು ಗಣ್ಯರಿಗೆ ಪಥಸಂಚಲನದ ಮೂಲಕ ವಂದನೆ ಸಲ್ಲಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 21 ಮಂದಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿವಿಧ ಶಾಲೆಗಳಿಂದ ಸುಮಾರು 18 ಕ್ಕೂ ಅಧಿಕ ಶಾಲಾ ಮಕ್ಕಳ ತಂಡದಿಂದ ನೃತ್ಯ ಪ್ರದರ್ಶನ ಮೂಡಿಬಂತು. ಕನ್ನಡ ನಾಡು-ನುಡಿ, ಭಾಷೆಗೆ ಸಂಬಂಧಿಸಿದ ನೃತ್ಯಗಳು ಮೂಡಿಬಂದವು. ಪಟ್ಟಣದ ಬಿಜಿಎಸ್ ಶಾಲೆ ಮಕ್ಕಳ ನೃತ್ಯ ಆಕರ್ಷಣೆಯಾಗಿತ್ತು. ಉತ್ತಮವಾಗಿ ನೃತ್ಯಮಾಡಿದ ತಂಡಕ್ಕೆ ತಾಲೂಕು ಆಡಳಿತದಿಂದ ಬಹುಮಾನ ವಿತರಣೆ ಮಾಡಲಾಯಿತು.ಸಮಾರಂಭದಲ್ಲಿ ತಹಸೀಲ್ದಾರ್ ಜಿ.ಆದರ್ಶ, ತಾಪಂ ಇಒ ವೀಣಾ, ಬಿಇಒ ಧರ್ಮಶೆಟ್ಟಿ, ಮುಖ್ಯಾಧಿಕಾರಿ ಸತೀಶ್ಕುಮಾರ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಎಂ.ಅಂಕೇಗೌಡ, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ರಮೇಶ್, ರೈತಸಂಘದ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಅನೇಕ ಸಂಘಟನೆಗಳು ಮುಖಂಡರು, ಅಧಿಕಾರಿಗಳು ಹಾಜರಿದ್ದರು.
ಸತತ 4ನೇ ಬಾರಿ ನಾಡಹಬ್ಬಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಗೈರುಪಾಂಡವಪುರ:ನಾಡಹಬ್ಬ ಕನ್ನಡ ರಾಜ್ಯೋತ್ಸವಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಸತತ 4ನೇ ಬಾರಿಗೂ ಗೈರಾಗಿದ್ದಾರೆ.
ತಾಲೂಕು ಆಡಳಿತ ವತಿಯಿಂದ ನಡೆಯುವ ರಾಷ್ಟ್ರೀಯ ಹಾಗೂ ನಾಡಹಬ್ಬಗಳ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿ ನಡೆಸಿಕೊಡುವುದು ಕ್ಷೇತ್ರದ ಶಾಸಕರ ಜವಾಬ್ದಾರಿ. ಆದರೆ, ದರ್ಶನ್ಪುಟ್ಟಣ್ಣಯ್ಯ ಅವರು ಶಾಸಕರಾಗಿ ಆಯ್ಕೆಯಾದ ಬಳಿಕ ಒಮ್ಮೆಯೂ ಕನ್ನಡ ರಾಜ್ಯೋತ್ಸವ ಆಚರಣೆಗೆ ಭಾಗವಹಿಸದಿರುವುದು ಬೇಸರ ತರಿಸಿದೆ.ಈ ವಿಚಾರವಾಗಿ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಅವರನ್ನು ಪತ್ರಕರ್ತರು ಪ್ರಶ್ನಿಸಿದರೆ ನಾನು ಇದೀಗ ಉಪವಿಭಾಗಾಧಿಕಾರಿಯಾಗಿ ತಾಲೂಕಿಗೆ ಬಂದಿದ್ದೇನೆ. ಈ ವಿಚಾರವಾಗಿ ಶಾಸಕರೊಂದಿಗೆ ಚರ್ಚಿಸುತ್ತೇನೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ.ಶಾಸಕ ದರ್ಶನ್ಪುಟ್ಟಣ್ಣಯ್ಯ ಕನ್ನಡ ರಾಜ್ಯೋತ್ಸವಕ್ಕೆ ಗೈರಾಗುವ ಮೂಲಕ ಕನ್ನಡ ಭಾಷೆಗೆ ಅಗೌರವ ತಂದಿದ್ದಾರೆ. ಶಾಸಕರಿಗೆ ನಾಡಹಬ್ಬ, ರಾಷ್ಟ್ರೀಯ ಹಬ್ಬಗಳು, ಮಹನೀಯರ ಜಯಂತಿಗಳಲ್ಲಿ ಭಾಗವಹಿಸಲು ನಿರಾಶಕ್ತಿ ತೋರುತ್ತಿದ್ದಾರೆ.ಶನಿವಾರ ಮಂಡ್ಯದಲ್ಲಿ ನಡೆದ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಶಾಸಕರು ಅದೇ ದಿನ ರಾತ್ರಿ ಪಕ್ಷದ ಕಾರ್ಯಕರ್ತರ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದಾರೆ. ಆದರೆ, ಮರುದಿನ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಗೈರಾಗಿದ್ದಾರೆ. ಶಾಸಕರಿಗೆ ಕನ್ನಡ ರಾಜ್ಯೋತ್ಸವಕ್ಕಿಂತ ಮಗನ ಹುಟ್ಟುಹಬ್ಬವೇ ಹೆಚ್ಚಾಗಿದೆ. ಶಾಸಕರ ಈ ನಡೆಗೆ ಕ್ಷೇತ್ರದ ಜನರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.