ಸಾರಾಂಶ
ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಕ್ಕಳಿಗೆ ಪ್ರಶಸ್ತಿ ವಿತರಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಕ್ಕಳಲ್ಲಿ ಕುತೂಹಲ ಮೂಡಿಸುವ, ಸೂಕ್ತ ಅವಕಾಶ ಕಲ್ಪಿಸುವ ಮತ್ತು ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡುವ ಮೂಲಕ ಅವರಲ್ಲಿನ ಸೃಜನಶೀಲತೆ ಅರಳಲು ಅವಕಾಶ ನೀಡಬೇಕು ಎಂದು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.ಭಾನುವಾರ ಪ್ರೆಸ್ ಕ್ಲಬ್ ಮತ್ತು ಬಾಲ ಭವನ ಆಯೋಜಿಸಿದ್ದ ಚಿಣ್ಣರ ಜಾಗೃತಿ - ಪ್ರಶಸ್ತಿ ಸಂಭ್ರಮ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿ, ಮಕ್ಕಳು ಕಲಿಕೆಯ ಕುತೂಹಲ ಮತ್ತು ಅಧ್ಯಯನಶೀಲತೆಯನ್ನು ಎಂದೂ ಕಳೆದುಕೊಳ್ಳಬಾರದು. ಇಲ್ಲದಿದ್ದರೆ ನಿಮ್ಮೊಳಗಿನ ಪ್ರತಿಭೆ ಬಾಡುತ್ತದೆ. ಮೊಬೈಲ್, ಟ್ಯಾಬ್ ಗೀಳು ನಿಮ್ಮೊಳಗಿನ ಸೃಜನಶೀಲತೆಯನ್ನು ಕೊಂದು ಪ್ರತಿಭಾ ಶೂನ್ಯರನ್ನಾಗಿಸುತ್ತದೆ. ಮೊಬೈಲ್ ಬಿಡಿ-ಪುಸ್ತಕ ಹಿಡಿ-ಮೈದಾನದ ಕಡೆ ನಡಿ ಎನ್ನುವುದನ್ನು ಪಾಲಿಸಬೇಕು ಎಂದರು.
ಹಿಂದೆ ಕತೆಗಳನ್ನು ಕೇಳುವ ಮೂಲಕ ಮಕ್ಕಳ ಕಲ್ಪನಾ ಜಗತ್ತು ವಿಪರೀತ ವಿಕಾಸಗೊಳ್ಳುತ್ತಿತ್ತು. ಇದನ್ನು ಜವಾಹರಲಾಲ್ ನೆಹರೂ ಅವರು ಮನಗಂಡು ಮಕ್ಕಳ ದೃಷ್ಟಿಕೋನದಲ್ಲಿ ದೇಶದ ಅಭಿವೃದ್ಧಿ ಮತ್ತು ಪ್ರಗತಿಯ ನೀಲನಕ್ಷೆಯನ್ನು ಅವರು ಸಿದ್ಧಪಡಿಸಿದ್ದರು ಎಂದು ಸ್ಮರಿಸಿದರು.ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್ ಮಾತನಾಡಿ, ಮಕ್ಕಳನ್ನು ಆನ್‌ಲೈನ್ ಗೇಮ್‌ಗಳಿಂದ ದೂರವಿರಿಸಲು ಪಾಲಕರು ಎಚ್ಚರಿಕೆ ವಹಿಸಬೇಕು. ಅದರ ಬದಲು ಜನರ ಜತೆ ಹೆಚ್ಚು ಬೆರೆಯಲು ಅವಕಾಶ ನೀಡಿ. ಕ್ರೀಡೆಗೆ ಪ್ರೋತ್ಸಾಹಿಸಿ ಎಂದು ಹೇಳಿದರು.
ಪ್ರೆಸ್ ಕ್ಲಬ್ ಅಧ್ಯಕ್ಷರಾದ ಶ್ರೀಧರ್, ನಟ ಹಾಗೂ ಕಲಾ ನಿರ್ದೇಶಕ ಅರುಣ್ ಸಾಗರ್ , ಬಾಲ ಭವನ ಅಧ್ಯಕ್ಷರಾದ ಬಿ.ಆರ್.ನಾಯ್ಡು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹೇಶ್, ಸಚಿವರಾದ ಕೆ.ಹೆಚ್.ಮುನಿಯಪ್ಪ ಅವರ ಆಪ್ತ ಕಾರ್ಯದರ್ಶಿ ನಟರಾಜ್, ಜನಪದ ಕಲಾವಿದ ಪಿಚ್ಚಳ್ಳಿ ಶ್ರೀನಿವಾಸ್, ಗಾಯಕ ಅಕ್ಬರ್ ಸೇರಿ ಇತರರಿದ್ದರು.