ಕನ್ನಡಪ್ರಭ ವಾರ್ತೆ ಮಳವಳ್ಳಿ
ಮಕ್ಕಳನ್ನು ಪಠ್ಯ ವಿಷಯಗಳಿಗಷ್ಟೇ ಸೀಮಿತಗೊಳಿಸದೆ ಅವರಲ್ಲಿ ಸಾಮಾನ್ಯಜ್ಞಾನವನ್ನೂ ಬೆಳೆಸುವಂತೆ ರಾಮನಗರ ಡಯಟ್ ಉಪನ್ಯಾಸಕ ಕೆ.ಪಿ.ಬಾಬು ಹೇಳಿದರು.ತಾಲೂಕಿನ ಕಲ್ಕುಣಿ ಗ್ರಾಮದ ವಿಶ್ವಪ್ರಜ್ಞ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಉಚಿತ ನೋಟ್‌ಬುಕ್ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ, ಪೋಷಕರ ಸಭೆ, ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು.
ಓದಿಗೆ ನೀಡುವಷ್ಟೇ ಪ್ರಾಧಾನ್ಯತೆಯನ್ನು ಸಾಮಾನ್ಯ ಜ್ಞಾನ ಬೆಳವಣಿಗೆಗೂ ಪೋಷಕರು ನೀಡಬೇಕು. ಮಕ್ಕಳು ಕೇವಲ ಅಂಕವೀರರಾದರೆ ಪ್ರಯೋಜನವಿಲ್ಲ. ಸಂಸ್ಕೃತಿ-ಸಂಸ್ಕಾರವನ್ನೂ ಚಿಕ್ಕ ವಯಸ್ಸಿನಲ್ಲೇ ಬೆಳೆಸಿಕೊಳ್ಳಬೇಕು. ಪ್ರಪಂಚದ ಆಗು-ಹೋಗುಗಳನ್ನು ತಿಳಿಸುವ ಸಾಮರ್ಥ್ಯವನ್ನು ಹೆಚ್ಚಿಸಬೇಕಿದೆ. ಮಕ್ಕಳ ಚುಟವಟಿಕೆಗಳನ್ನು ಗಮನಿಸಿ ಸಾಧನೆಗೆ ಪ್ರೇರೇಪಿಸಬೇಕು. ಆಗ ಮಕ್ಕಳು ಆದರ್ಶ ವಿದ್ಯಾರ್ಥಿಗಳಾಗುವುದಕ್ಕೆ ಸಾಧ್ಯವಾಗಲಿದೆ ಎಂದರು.ಮಕ್ಕಳು ಮೊಬೈಲ್‌ನ್ನು ಶಿಕ್ಷಣ ಮತ್ತು ಜ್ಞಾನ ಸಂಪಾದನೆಗೆ ಪೂರಕವಾಗುವಂತೆ ಉಪಯೋಗಿಸುವುದಕ್ಕಷ್ಟೇ ಸೀಮಿತವಾಗಿರಬೇಕು. ಅತಿಯಾದ ವ್ಯಾಮೋಹಕ್ಕೆ ಒಳಗಾಗದಂತೆ ಪೋಷಕರು ಎಚ್ಚರ ವಹಿಸಬೇಕು. ಮಕ್ಕಳಿಗೆ ಮೊಬೈಲ್‌ನಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಆರಂಭದಲ್ಲೇ ಅವರಿಗೆ ತಿಳಿವಳಿಕೆ-ಜಾಗೃತಿ ಮೂಡಿಸಿ ಕಲಿಕೆಯತ್ತ ಅವರು ಆಕರ್ಷಿಸುವಂತೆ ಮಾಡಬೇಕು. ಮಕ್ಕಳು ಪೋಷಕರನ್ನು ಅನುಕರಿಸುವುದರಿಂದ ಅವರೆದುರು ಮೊಬೈಲ್ ನೋಡುವುದನ್ನು ಮಾಡಬಾರದು ಎಂದರು.
ಮಕ್ಕಳು ಶಾಲೆಯ ಪಠ್ಯ ಪುಸ್ತಕಗಳ ಜೊತೆಗೆ ದಿನಪತ್ರಿಕೆಗಳು, ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ದಿನಪತ್ರಿಕೆಗಳಿಂದ ದೈನಂದಿನ ಬೆಳವಣಿಗೆಗಳು, ಹೊಸ ವಿಚಾರಗಳನ್ನು ತಿಳಿಯಬಹುದು. ಪುಸ್ತಕಗಳು ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದಕ್ಕೆ ಸಹಕಾರಿಯಾಗಲಿವೆ. ಭಾಷಾ ಪ್ರೌಢಿಮೆ, ಭಾಷೆಯ ಮೇಲೆ ಹಿಡಿತ ಸಾಧಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ನುಡಿದರು.
ಪೋಷಕರು ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡುವುದನ್ನು ಬಿಡಬೇಕು. ಓದಿನ ಕಡೆ ಆಸಕ್ತಿ ಮೂಡುವಂತೆ ಮನವೊಲಿಸಬೇಕೇ ಹೊರತು ಒತ್ತಡ ಹಾಕಬಾರದು. ಇದರಿಂದ ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳಿರುತ್ತವೆ. ಮಕ್ಕಳನ್ನು ಪ್ರೀತಿಯಿಂದ ಗೆಲ್ಲಬೇಕು ಎಂದು ಪೋಷಕರಿಗೆ ತಿಳಿಸಿದರು.
ಜಂಕ್‌ಫುಡ್, ಫಾಸ್ಟ್‌ಫುಡ್‌ಗಳ ಆಕರ್ಷಣೆಗೊಳಗಾಗಿ ಮಕ್ಕಳು ಆರೋಗ್ಯ ಕೆಡಿಸಿಕೊಳ್ಳಬಾರದು. ಮಕ್ಕಳು ಸೊಪ್ಪು, ತರಕಾರಿ, ಮೀನು, ಮೊಟ್ಟೆ ಸೇರಿದಂತೆ ಪೌಷ್ಠಿಕಾಂಶಯುಕ್ತ ಆಹಾರ ಸೇವಿಸುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ. ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಓದುವ ಸಮಯವನ್ನು ಮಕ್ಕಳೇ ಆಯ್ಕೆ ಮಾಡಿಕೊಂಡು ಅಭ್ಯಾಸದಲ್ಲಿ ತೊಡಗಬೇಕು. ಎಷ್ಟು ಗಂಟೆ ಕಾಲ ಓದಿದೆ ಎನ್ನುವುದಕ್ಕಿಂತ ಎಷ್ಟು ವಿಷಯಗಳನ್ನು ಅರ್ಥೈಸಿಕೊಂಡೆ ಎನ್ನುವುದು ಮುಖ್ಯವಾಗಲಿದೆ. ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ರೂಢಿಸಿಕೊಂಡಾಗ ಧೈರ್ಯ, ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದರು.ಕಾರ್ಯಕ್ರಮದಲ್ಲಿ ಬೆಂಗಳೂರಿನ ಶ್ರೀಗಂಧ ಫೌಂಡೇಷನ್ ಹಾಗೂ ಶ್ರೀ ವಿನಾಯಕ ಮಿತ್ರ ಮಂಡಳಿ ವತಿಯಿಂದ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್, ಪೆನ್ ಪೆನ್ಸಿಲ್, ಸಮವಸ್ತ್ರಗಳನ್ನು ವಿತರಣೆ ಮಾಡಲಾಯಿತು. ಶಾಲೆಯ ಹಳೆಯ ವಿದ್ಯಾರ್ಥಿ ಹರೀಶ್, ನಿರ್ದೇಶಕರಾದ ಚಂದನ್, ಮುಖ್ಯ ಶಿಕ್ಷಕ ಶಿವರಾಮು, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.