ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಲ್ಲಿ ಜೀವನ ಕೌಶಲ್ಯ, ಶಿಸ್ತು, ಸೇವಾ ಮನೋಭಾವ, ನಾಯಕತ್ವ ಹಾಗೂ ಉತ್ತಮ ನಾಗರಿಕ ಗುಣಗಳನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ. ರಾಜ್ಯದಲ್ಲಿ ಸುಮಾರು 8.50 ಲಕ್ಷ ಮಕ್ಕಳು ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಸಂಘಟನೆಯ ವ್ಯಾಪಕತೆಯನ್ನು ತೋರಿಸುತ್ತದೆ. ತಾಲೂಕಿನಲ್ಲಿ ಸುಮಾರು 20 ಸಾವಿರ ಮಕ್ಕಳಿದ್ದು, ಪ್ರತಿಯೊಬ್ಬ ಮಗುವಿಗೂ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಪರಿಚಯವಾಗಬೇಕು. ಸಂಘಟನೆಯ ಸದಸ್ಯತ್ವಕ್ಕಿಂತ ಅದರ ವಿಚಾರ, ತತ್ವ, ಶಿಸ್ತು ಮತ್ತು ಸೇವಾ ಮನೋಭಾವವನ್ನು ಮಕ್ಕಳಿಗೆ ತಲುಪಿಸುವುದು ಮುಖ್ಯ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರುಶಾಲೆಗಳಲ್ಲಿ ಶಿಕ್ಷಣದ ಜೊತೆಗೆ ಸ್ಕೌಟ್ಸ್–ಗೈಡ್ಸ್ ಮೂಲಕ ಮಕ್ಕಳಲ್ಲಿ ಶಿಸ್ತು, ಸಮಯಪಾಲನೆ, ಸೇವಾ ಮನೋಭಾವ, ನಾಯಕತ್ವ, ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು ಎಂದು ಮಾಜಿ ಸಚಿವ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ರಾಜ್ಯ ಮುಖ್ಯ ಆಯುಕ್ತರಾದ ಡಾ. ಪಿ.ಜಿ.ಆರ್. ಸಿಂಧ್ಯ ಕರೆ ನೀಡಿದರು.ಪಟ್ಟಣದ ಯುರೋಕಿಡ್ಸ್ ವಿದ್ಯಾ ವಿಕಾಸ ಪಬ್ಲಿಕ್ ಶಾಲಾ ಆವರಣದಲ್ಲಿ ಮಂಗಳವಾರ ನಡೆದ ಕಬ್ಸ್ ಬುಲ್‌ ಬುಲ್ಸ್, ಸ್ಕೌಟ್ಸ್ ಮತ್ತು ಗೈಡ್ಸ್ ದಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಲ್ಲಿ ಜೀವನ ಕೌಶಲ್ಯ, ಶಿಸ್ತು, ಸೇವಾ ಮನೋಭಾವ, ನಾಯಕತ್ವ ಹಾಗೂ ಉತ್ತಮ ನಾಗರಿಕ ಗುಣಗಳನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ. ರಾಜ್ಯದಲ್ಲಿ ಸುಮಾರು 8.50 ಲಕ್ಷ ಮಕ್ಕಳು ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಸಂಘಟನೆಯ ವ್ಯಾಪಕತೆಯನ್ನು ತೋರಿಸುತ್ತದೆ. ತಾಲೂಕಿನಲ್ಲಿ ಸುಮಾರು 20 ಸಾವಿರ ಮಕ್ಕಳಿದ್ದು, ಪ್ರತಿಯೊಬ್ಬ ಮಗುವಿಗೂ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಪರಿಚಯವಾಗಬೇಕು. ಸಂಘಟನೆಯ ಸದಸ್ಯತ್ವಕ್ಕಿಂತ ಅದರ ವಿಚಾರ, ತತ್ವ, ಶಿಸ್ತು ಮತ್ತು ಸೇವಾ ಮನೋಭಾವವನ್ನು ಮಕ್ಕಳಿಗೆ ತಲುಪಿಸುವುದು ಮುಖ್ಯ ಎಂದು ತಿಳಿಸಿದರು.ಖಾಸಗಿ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳನ್ನು ಆರಂಭಿಸಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು. ಈ ನಿಟ್ಟಿನಲ್ಲಿ ಸಂಘಟನೆಯ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯವರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು. ಮ್ಯಾನೇಜಿಂಗ್ ಟ್ರಸ್ಟಿ ಬಿ.ಎಂ. ರಂಗನಾಥ್ ಮಾತನಾಡಿ ಮುಂದಿನ ದಿನಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳನ್ನು ಈ ಚಟುವಟಿಕೆಗಳಿಗೆ ಸೇರ್ಪಡೆಗೊಳಿಸಿ, ಅವರಲ್ಲಿ ನಾಯಕತ್ವ ಹಾಗೂ ಸಾಮಾಜಿಕ ಜವಾಬ್ದಾರಿಯ ಗುಣಗಳನ್ನು ಬೆಳೆಸಲು ಆದ್ಯತೆ ನೀಡಲಾಗುವುದು ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಭಾಗ್ಯಮ್ಮ ಮಾತನಾಡಿ, ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್ ಪೂರಕವಾಗಿವೆ. ಶಾಲಾ ಶಿಕ್ಷಣದೊಂದಿಗೆ ಶಿಸ್ತು, ಸೇವೆ ಮತ್ತು ಸಮಾಜದ ಬಗ್ಗೆ ಜವಾಬ್ದಾರಿಯ ಮನೋಭಾವ ಬೆಳೆಸುವಲ್ಲಿ ಇಂತಹ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಎಲ್ಲ ಶಾಲೆಗಳಲ್ಲೂ ಇಂತಹ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.ರೋಟರಿ ಕ್ಲಬ್ ಅಧ್ಯಕ್ಷ ಬಿ.ಬಿ. ಶಿವರಾಜು ಮಾತನಾಡಿ, ಶಿಕ್ಷಣ ಎಂದರೆ ಕೇವಲ ಅಂಕಗಳನ್ನು ಗಳಿಸುವುದಲ್ಲ. ಶಿಸ್ತು, ಸಮಯಪಾಲನೆ, ಸೇವಾ ಮನೋಭಾವ, ನಾಯಕತ್ವ, ಧೈರ್ಯ, ದೇಶಪ್ರೇಮ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವುದೇ ನಿಜವಾದ ಶಿಕ್ಷಣ. ಶಿಕ್ಷಣದ ಜೊತೆಗೆ ಸಮಾಜ ಸೇವೆ, ಪರಿಸರ ಸಂರಕ್ಷಣೆ, ಸ್ವಚ್ಛತೆ, ಪರಸ್ಪರ ಸಹಕಾರ ಹಾಗೂ ಕಷ್ಟದಲ್ಲಿರುವವರಿಗೆ ನೆರವಾಗುವ ಗುಣಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಡಾ. ಪಿ.ಜಿ.ಆರ್‌. ಸಿಂಧ್ಯ ಅವರಂತಹ ಹಿರಿಯರ ಅನುಭವ ಮತ್ತು ಮಾರ್ಗದರ್ಶನ ಯುವ ಪೀಳಿಗೆಗೆ ದಾರಿದೀಪವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ಸಂಘಟನಾ ಆಯುಕ್ತರಾದ ಪ್ರಭಾಕರ್ ಭಟ್, ಹಾಸನ ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ಸುರೇಶ್ ಗುರೂಜಿ, ಸ್ಕೌಟ್ಸ್ ಮತ್ತು ಗೈಡ್ಸ್ ಮಾಜಿ ಕಾರ್ಯದರ್ಶಿ ಪರಶುರಾಮ ಎಂ, ಅನ್ನಪೂರ್ಣ ಎಜುಕೇಶನಲ್ ಮತ್ತು ಚಾರಿಟಬಲ್ ಟ್ರಸ್ಟ್‌ನ ಟ್ರಸ್ಟಿ ಆಶಾ ರಂಗನಾಥ್, ಆಡಳಿತಾಧಿಕಾರಿ ಹಾಗೂ ಟ್ರಸ್ಟಿ ಪದ್ಮಾ ಜಯಕುಮಾರ್ ಪಾಟೀಲ, ಯುರೋಕಿಡ್ಸ್ ಸಂಯೋಜಕಿ ಶಾಲಿನಿ ಕೇಶವ್ ಸಿ., ಶಾಲೆಯ ಪ್ರಾಂಶುಪಾಲ ಶ್ರೀ ಬಾಲಾಜಿ ಎಸ್, ಶಾಲೆಯ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.