ಕನ್ನಡಪ್ರಭ ವಾರ್ತೆ ಮಧುಗಿರಿ
ಮಕ್ಕಳಿಗೆ ದೇಶಪ್ರೇಮ, ಸೇವೆ, ಸಹಕಾರ, ಸಂಸ್ಕಾವಂತರನ್ನರಾಗಿಸಲು ಶಿಸ್ತು ಬದ್ಧ ವ್ಯವಸ್ಥೆಯಲ್ಲಿ ತರಬೇತಿ ನೀಡಿ ಸಮಾಜಮುಖಿ ಚಿಂತನೆಯನ್ನು ಬಿತ್ತಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯ ರಾಜ್ಯಾಧ್ಯಕ್ಷ, ಮಾಜಿ ಸಚಿವ ಡಾ. ಪಿ.ಜಿ.ಆರ್. ಸಿಂಧ್ಯಾ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಮಧುಗಿರಿ ಉಪವಿಭಾಗ ವ್ಯಾಪ್ತಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎನ್‌ಎಸ್‌ಎಸ್, ಎನ್‌ಸಿಸಿ ಹಾಗೂ ಸ್ಕೌಟ್ಸ್-ಗೈಡ್ಸ್‌ಗಳ ಉದ್ದೇಶ ಒಂದೇ ಆಗಿದ್ದು, ಅವುಗಳ ಕಾರ್ಯವಿಧಾನ ಮಾತ್ರ ವಿಭಿನ್ನವಾಗಿದೆ. ಪಠ್ಯೇತರ ಚಟುವಟಿಕೆಯಾಗಿರದೆ ಔಪಚಾರಿಕ ಶಿಕ್ಷಣದ ಅವಿಭಾಜ್ಯ ಅಂಗವಾಗಿ ರೂಪಗೊಂಡಿವೆ. ಕೇವಲ ಸೇವಾ ಮನೋಭಾವ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವುದಕ್ಕೆ ಸೀಮಿತವಾಗದೆ, ಸದಸ್ಯರಿಗೆ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತಾ ತರಬೇತಿಗಳನ್ನು ನೀಡಿ ಉತ್ತಮ ಮಾನವ ಸಂಪನ್ಮೂಲವನ್ನು ರೂಪಿಸುವ ಕೆಲಸವನ್ನು ಮಾಡಬೇಕು. ಪ್ರತಿಯೊಂದಕ್ಕೂ ಸರ್ಕಾರವನ್ನು ಅವಲಂಬಿಸದೆ ಸಮಾಜದ ಸಹಕಾರವನ್ನೂ ಪಡೆಯಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿಗಳನ್ನು ಮಾದಕ ವಸ್ತುಗಳ ದುಷ್ಪರಿಣಾಮ ಹಾಗೂ ಸಮಾಜಘಾತಕ ಶಕ್ತಿಗಳಿಂದ ದೂರವಿಡುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಮುಖ ಪಾತ್ರ ವಹಿಸುತ್ತಿದೆ. ಇದೇ ಕಾರಣದಿಂದ ಪ್ರಾಥಮಿಕ ಶಾಲಾ ಹಂತದಿಂದಲೇ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವ್ಯಾಪ್ತಿಯ ಸುಮಾರು 250 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಇದನ್ನು ಪಠ್ಯಕ್ರಮದ ಭಾಗವಾಗಿ ಅಳವಡಿಸುತ್ತಿದ್ದು, ಅದನ್ನು ಕ್ರಿಯಾಶೀಲಗೊಳಿಸುವ ನಿಟ್ಟಿನಲ್ಲಿ ತಜ್ಞರು ಪರಿಣಿತರಿಂದ ಹೊಸ ಹೊಸ ವಿಷಯಗಳನ್ನು ಅವರ ಗಮನಕ್ಕೆ ತಂದು ಅದರತ್ತ ಆಸಕ್ತಿ ಮೂಡಿಸಬೇಕು ಎಂದರು.ಜಿಲ್ಲಾ ಶಿಕ್ಷಣಾಧಿಕಾರಿ ವೇದಮೂರ್ತಿ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಲ್ಲಿ ಸಹಕಾರ, ಶಿಸ್ತು, ಸೇವಾ ಮನೋಭಾವ, ಸಮಯಪಾಲನೆ, ಮಾನವೀಯ ಮೌಲ್ಯಗಳು, ರಾಷ್ಟ್ರಪ್ರೇಮ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ ಎಂದರು.
ಜಿಲ್ಲಾ ಆಯುಕ್ತೆ ಲತಾ ನಾರಾಯಣ್ ಮಾತನಾಡಿ, ಪದವಿ ಕಾಲೇಜುಗಳ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಂದ ಏಕಶಿಲಾ ಬೆಟ್ಟದಲ್ಲಿ ಚಾರಣ ಶಿಬಿರವನ್ನು ಆಯೋಜಿಸುವ ಬಗ್ಗೆ ಮಾತನಾಡಿದ ಅವರು ,ಹಿತ್ತಲ ಗಿಡ ಮದ್ದಲ್ಲ ಎಂಬಂತೆ ಮಧುಗಿರಿಯಲ್ಲಿರುವ ಏಕಶಿಲಾ ಗಿರಿ ವಿಶ್ವ ಪ್ರಸಿದ್ಧಿ ಪಡೆದು ನಾನಾ ರಾಜ್ಯಗಳಿಂದ ಚಾರಣಕ್ಕೆ ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ವಾರಂತ್ಯದಲ್ಲಿ ತಂಡೋಪ ತಂಡವಾಗಿ ಬರುತ್ತಿದ್ದು,ಅದೇ ರೀತಿ ನಮ್ಮ ಜಿಲ್ಲೆಯ ಸುತ್ತಮುತ್ತಲಿನವರಿಗೆ ತರಬೇತಿ ನೀಡಿ ಚಾರಣ ಶಿಬಿರವನ್ನು ಏರ್ಪಡಿಸಬೇಕಿದೆ ಎಂದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ಡಿ.ಎಸ್. ಮುನೀಂದ್ರಕುಮಾರ್, ರಾಜ್ಯ ಸಂಘಟನಾ ಆಯುಕ್ತ ಕರಿಸಿದ್ದಪ್ಪ, ಶ್ಯಾಮಲಾ, ಎಂ.ಕೆ. ನಂಜುಂಡಯ್ಯ, ಗಂಗಣ್ಣ, ಸಹನಾ ನಾಗೇಶ್, ಇತಿಹಾಸ ಪ್ರಾಧ್ಯಾಪಕಿ ವೇದಲಕ್ಷ್ಮೀ, ಪ್ರೊ. ಮ.ಲ.ನ. ಮೂರ್ತಿ, ಉಮಾ ಮಲ್ಲೇಶ್,ಎಂ.ಎಸ್. ಶಂಕರ್ ನಾರಾಯಣ್, ಪಾರ್ವತಿ ಶರ್ಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.