ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಹೆಲ್ತ್ ಇನ್ಪಾಸ್ಟ್ರಕ್ಚರ್ ಮಿಷನ್ ಯೋಜನೆಯಡಿ ಇಲ್ಲಿಯ ಬ್ರಿಮ್ಸ್ ಆಸ್ಪತ್ರೆಯಲ್ಲಿ 22 ಕೋಟಿ ರು.ವೆಚ್ಚದಲ್ಲಿ ನಿರ್ಮಿಸುತ್ತಿರುವ 50 ಹಾಸಿಗೆಗಳ ತೀವ್ರ ನಿಗಾ ಘಟಕಕ್ಕೆ ಮಂಗಳವಾರ ಶಿಲಾನ್ಯಾಸ ನಡೆಯಿತು.ನವದೆಹಲಿಯಿಂದ ವರ್ಚುವಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಈ ಘಟಕದ ಕಾಮಗಾರಿಗೆ ಚಾಲನೆ ನೀಡಿದರು. ದೇಶಾದ್ಯಂತ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಮಾರು 12850 ಕೋಟಿ ರು.ವೆಚ್ಚದ ವಿವಿಧ ಕಾಮಗಾರಿಗಳಿಗೆ ಈ ವೇಳೆ ಪ್ರಧಾನಿ ಮೋದಿ ಅವರು ಚಾಲನೆ ಕೊಟ್ಟರು.
ಕೇಂದ್ರ ಸರ್ಕಾರ, ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಸಹಯೋಗದಿಂದ ಬ್ರಿಮ್ಸ್ ಅಡಿಟೋರಿಯಮ್‌ನಲ್ಲಿ ಆಯೋಜಿಸಿದ್ದ ವರ್ಚುವಲ್ ಚಾಲನೆ ಸಮಾರಂಭದಲ್ಲಿ ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಪೂಜೆ ನೆರವೇರಿಸಿದರು. ಈ ವೇಳೆ ದೊಡ್ಡ ಪರದೆ ಮೂಲಕ ದೆಹಲಿಯಿಂದ ನಡೆದ ವರ್ಚುವಲ್ ಸಭೆಯನ್ನು ವೀಕ್ಷಿಸಿದರು.ಬೀದರ್ ಗಡಿ ಭಾಗದಲ್ಲಿದೆ. ಇಲ್ಲಿಯ ಜನರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ತೀವ್ರ ನಿಗಾ ಘಟಕ ಸ್ಥಾಪಿಸಬೇಕು ಎಂಬುದು ಜಿಲ್ಲೆಯ ಜನರ ಬಹು ದಿನಗಳ ಬೇಡಿಕೆಯಾಗಿತ್ತು. ಅತೀ ಅವಶ್ಯಕವಾಗಿದ್ದ ಈ ಯೋಜನೆಗೆ ಕೇಂದ್ರ ಸರ್ಕಾರ ಅಸ್ತು ನೀಡಿ, ಪ್ರಧಾನಿಯವರಿಂದಲೇ ಇಂದು ಶಿಲಾನ್ಯಾಸ ನೆರವೇರಿರುವುದು ಬಹಳ ಸಂತಸ ತಂದಿದೆ. ಸುಸಜ್ಜಿತ ಸಿದ್ಧವಾಗುವ ತೀವ್ರ ನಿಗಾ ಘಟಕ ಆಘಾತ, ಅಪಘಾತ, ಅವಘಡದ ರೋಗಿಗಳಿಗೆ ವರದಾನವಾಗಲಿದೆ ಎಂದರು.
ಜನರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸಲು ಕೇಂದ್ರ ಸರ್ಕಾರ ಅನೇಕ ಯೋಜನೆ ಜಾರಿಗೆ ತರುತ್ತಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಎಲ್ಲರಿಗೂ 5 ಲಕ್ಷದವರೆಗೆ ಉತ್ತಮ, ಉತ್ಕ್ರಷ್ಟ, ಉಚಿತ ಚಿಕಿತ್ಸೆ ಕಲ್ಪಿಸಲಾಗುತ್ತಿದೆ.70 ವರ್ಷ ಮೇಲ್ಪಟ್ಟ ಎಲ್ಲ ಹಿರಿಯರಿಗೂ ಯಾವುದೇ ಷರತ್ತುಗಳಿಲ್ಲದೆ ಇಂದಿನಿಂದ ಪ್ರತಿ ವರ್ಷ 5 ಲಕ್ಷದವರೆಗೆ ಚಿತ ಚಿಕಿತ್ಸೆ ನೀಡುವ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ ಎಂದರು.
ನಗರಸಭೆ ಅಧ್ಯಕ್ಷ ಮಹ್ಮದ್ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಬ್ರಿಮ್ಸ್ ನೂತನ ನಿರ್ದೇಶಕಿ ಡಾ.ಶಾಂತಲಾ ಕೌಜಲಗಿ, ಬ್ರಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಿವಯೋಗಿ ಬಾಳಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜ್ಞಾನೇಶ್ವರ ನಿರುಗಡೆ, ಜಿಲ್ಲಾ ಸರ್ಜನ್ ಡಾ.ಮಹೇಶ ಬಿರಾದಾರ, ಡಾ.ರಾಜಶೇಖರ ಕೌಜಲಗಿ ಇತರರಿದ್ದರು.ವೈದ್ಯ ಕಾಲೇಜಿನ ವಿದ್ಯಾರ್ಥಿಗಳು, ಗಣ್ಯರು, ಅಧಿಕಾರಿಗಳು, ಬ್ರಿಮ್ಸ್ ಬೋಧಕ, ಬೋಧಕೇತರ ಸಿಬ್ಬಂದಿ ವರ್ಚುವಲ್ ಮೂಲಕ ಮೋದಿ ಅವರ ಭಾಷಣ ಆಲಿಸಿದರು.