ಸಾರಾಂಶ
ಅಳ್ನಾವರ: ನೂತನ ತಾಲೂಕಿನ ಆಡಳಿತ ಭವನ ಪ್ರಜಾಸೌಧ ಕಟ್ಟಡಕ್ಕೆ ಶಂಕುಸ್ಥಾಪನೆ, ನಾಡ ಕಚೇರಿ ಕಟ್ಟಡ ಉದ್ಘಾಟನೆ ಸೇರಿದಂತೆ ಸುಮಾರು ₹15 ಕೋಟಿಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರ ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಚಾಲನೆ ನೀಡಿದರು.
ಇಲ್ಲಿಯ ಪಪಂ ಕಚೇರಿಯ ಆವರಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಲಾಡ್, ₹8.60 ಕೋಟಿ ವೆಚ್ಚದ ಪ್ರಜಾಸೌಧ, ₹26.30 ಲಕ್ಷ ವೆಚ್ಚದಲ್ಲಿ ನಾಡ ಕಚೇರಿ, ₹50.13 ಲಕ್ಷ ವೆಚ್ಚದಲ್ಲಿ ಪಶು ಆಸ್ಪತ್ರೆಯ ಕಟ್ಟಡ ಹಾಗೂ ₹12 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಅಂಗನವಾಡಿ ಕಟ್ಟಡಗಳನ್ನು ಲೋಕಾರ್ಪಣೆಗೊಳಿಸಲಾಗಿದೆ. ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ತಾಲೂಕಾಗಿರುವ ಅಳ್ನಾವರದಲ್ಲಿ ಇದೀಗ ಅನೇಕ ಅಭಿವೃದ್ಧಿ ಪರ ಯೋಜನೆಗಳನ್ನು ರಾಜ್ಯ ಸರ್ಕಾರ ಕಾರ್ಯಗತಗೊಳಿಸುತ್ತಿದೆ ಎಂದರು.ಪ್ರಜಾಸೌಧ ಕಟ್ಟಡ ಪಟ್ಟಣದ ಹೊರಭಾಗದಲ್ಲಿದ್ದರೂ ಮುಂದಿನ ದಿನಗಳಲ್ಲಿ ಪಟ್ಟಣ ಬೆಳದಂತೆ ಕೇಂದ್ರಸ್ಥಾನವಾಗುತ್ತದೆ. ಪ್ರಜಾಸೌಧ ನಿರ್ಮಾಣಕ್ಕಾಗಿ ಯಾವುದೇ ರೈತರ ಅಥವಾ ಇತರರ ಜಮೀನು ಪಡೆಯದೇ ಲಭ್ಯವಿರುವ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾಗುತ್ತಿದೆ. ಹಲವಾರು ದಶಕಗಳ ಸಮಸ್ಯೆಯಾಗಿದ್ದ ಪುನರ್ವಸತಿ ಗ್ರಾಮವಾಗಿರುವ ಹೊನ್ನಾಪೂರದ ಜಮೀನು ಸರ್ವೇ ಮಾಡಿಸುವ ಮೂಲಕ ಪಹಣಿ ದುರಸ್ತಿ ಮಾಡಿಸಲಾಗಿದೆ. ಸಿದ್ದಾಪೂರ ಮತ್ತು ಕೃಷ್ಣಗಿರಿ, ಅಂಬೊಳ್ಳಿ, ಗೌಳಿ ದಡ್ಡಿ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆಯಿಂದ ಬಹಳಷ್ಟು ಅನುಕೂಲವಾಗಿದೆ ಎಂದರು.
ಗ್ಯಾರಂಟಿಗೆ ₹92 ಕೋಟಿ: ಅಳ್ಳಾವರ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ₹71,90 ಕೋಟಿ ವೆಚ್ಚದಲ್ಲಿ ಒಟ್ಟು 3780 ಮನೆಗಳಿಗೆ ನಿರಂತರ ನೀರು ಪೂರೈಕೆ ಮಾಡಲಾಗುತ್ತಿದೆ. ₹1.50 ಕೋಟಿ ವೆಚ್ಚದಲ್ಲಿ ಕಂಬಾರಗಣವಿ ಸೇತುವೆ ನಿರ್ಮಾಣವಾಗಿದೆ. ಗ್ಯಾರಂಟಿ ಯೋಜನೆಯಡಿ ಅಳ್ನಾವರ ತಾಲೂಕಿಗೆ ಇಲ್ಲಿವರೆಗೂ ₹92 ಕೋಟಿ ಮೊತ್ತವನ್ನು ಹಂಚಿಕೆ ಮಾಡಲಾಗಿದೆ. ಇದರಿಂದ ಜನರ ಆರ್ಥಿಕ ಸುಧಾರಣೆಗೆ ಸಹಕಾರಿಯಾಗಿದೆ ಎಂದ ಅವರು, ಅಳ್ಳಾವರ ಪಟ್ಟಣದಲ್ಲಿರುವ 6 ಬೆಡ್‍ಗಳ ಸಾಮರ್ಥ್ಯದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಬೆಡ್‍ಗಳ ಸಮುದಾಯ ಆರೋಗ್ಯ ಕೇಂದ್ರ ಅಂತಾ ಉನ್ನತಿಕರಿಸಿ, ಸರ್ಕಾರವು 2025 ನೇ ಸಾಲಿನ ಆಯುವ್ಯದಲ್ಲಿ ಮಂಜೂರು ಮಾಡಿದೆ. ಅಕ್ರಮ ಸಾಗುವಳಿ ಮಾಡಿದವರಿಗೆ ಭೂಮಿ ಹಂಚಿಕೆಗೆ ಫಾರ್ಮ 57 ರಲ್ಲಿ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗುತ್ತದೆ. ಈಗ ತಿರಸ್ಕೃತಗೊಂಡ ಅರ್ಜಿಗಳನ್ನು ಮರು ಪರಿಶೀಲನೆಗೆ ಅವಕಾಶ ಸಹ ನೀಡಲಾಗುವುದು ಎಂದರು.ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ನೌಕರರಿಗೆ ತಮ್ಮಲ್ಲಿರುವ ಗರ್ವ ಬಿಟ್ಟು ಸಮನ್ವಯತೆಯಿಂದ ಸಾರ್ವಜನಿಕರ ಹಿತದೃಷ್ಠಿಯಿಂದ ಕೆಲಸ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದಾಗ ಸಮಸ್ಯೆಗಳನ್ನು ದೂರ ಮಾಡಬಹುದಾಗಿದೆ. ಕೆಲಸದ ಮೂಲಕ ಜನರ ಆಶೀರ್ವಾದ ಪಡೆಯಬೇಕು ಎಂದರು.
ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೌಡಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಪ್ರಸ್ತುತ ಪಡಿಸಿದರು. ಪಪಂ ಅಧ್ಯಕ್ಷ ಮಧು ಬಡಸ್ಕರ, ಉಪಾದ್ಯಕ್ಷ ಅಮೋಲ ಗುಂಜೀಕರ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಮಲ್ಲನಗೌಡ ಪಾಟೀಲ, ಗ್ಯಾರಂಟಿ ಯೋಜನೆಯ ವಿನಾಯಕ ಕುರುಬರ, ತಾಪಂ ಇಒ ಪ್ರಶಾಂತ ತುರಕಾಣಿ, ಎಂ.ಎಸ್. ಬಿರಾದಾರ, ಪಪಂ ಮುಖ್ಯಾಧಿಕಾರಿ ಪ್ರಕಾಶ ಮಗದುಮ್, ವಾಸೀಮ್‌ಖಾನ ಜಹಗೀರದಾರ, ಬಿಇಒ ರಾಮಚಂದ್ರ ಸದಲಗಿ, ಕೃಷಿ ಇಲಾಖೆಯ ರಾಜಶೇಖರ ಅಣ್ಣುಗೌಡರ ಮತ್ತಿತರರು ಇದ್ದರು.ಪ್ರಚಾರದಿಂದ ಸುಧಾರಣೆ ಕಾಣಲ್ಲ: ರಾಜ್ಯ ಕಾಂಗ್ರೆಸ್ ಅಭಿವೃದ್ಧಿ ಪರ್ವದಲ್ಲಿ ಹೋಗುತ್ತಿದ್ದರೆ, ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಜಾರಿಗೆ ತಂದಿದ್ದ 20 ಅಂಶಗಳ ಕಾರ್ಯಕ್ರಮಗಳನ್ನು ಹೊರತು ಪಡಿಸಿ ಕೇಂದ್ರ ಸರ್ಕಾರವು ದೇಶದಲ್ಲಿ ಯಾವುದೇ ಹೊಸ ಯೋಜನೆಗಳು ಕಾರ್ಯಗತಗೊಳಿಸುತ್ತಿಲ್ಲ. ದೇಶ ಯಾವುದೇ ರಾಜಕೀಯ ಪಕ್ಷಗಳಿಗೆ ಸೇರಿದ್ದಲ್ಲ. ಪ್ರಚಾರದಿಂದ ಮಾತ್ರ ದೇಶ ಸುಧಾರಣೆ ಕಾಣುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಸಚಿವ ಸಂತೋಷ ಲಾಡ್ ಟೀಕಿಸಿದರು.