ಸರ್ಕಾರಿ ಶಾಲೆ, ನೂತನ ಗ್ರಾಪಂ ಕಟ್ಟಡಕ್ಕೆ ಶಾಸಕರಿಂದ ಶಂಕುಸ್ಥಾಪನೆ

| Published : Feb 26 2024, 01:33 AM IST

ಸಾರಾಂಶ

ಶಾಸಕ ಎಚ್.ವಿ. ವೆಂಕಟೇಶ್ ತಾಲೂಕಿನ ಹಲವು ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿ ಶಾಲೆ, ರಸ್ತೆ ಮತ್ತು ಗ್ರಾಪಂ ಕಟ್ಟಡದ ಪ್ರಗತಿ ಕಾರ್ಯಗಳಿಗೆ ಗುದ್ದಲಿ ಪೂಜೆ ಹಾಗೂ ಇತರೆ ದೇವಸ್ಥಾನದ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಪಾವಗಡ

ಇಲ್ಲಿನ ಶಾಸಕ ಎಚ್.ವಿ. ವೆಂಕಟೇಶ್ ತಾಲೂಕಿನ ಹಲವು ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿ ಶಾಲೆ, ರಸ್ತೆ ಮತ್ತು ಗ್ರಾಪಂ ಕಟ್ಟಡದ ಪ್ರಗತಿ ಕಾರ್ಯಗಳಿಗೆ ಗುದ್ದಲಿ ಪೂಜೆ ಹಾಗೂ ಇತರೆ ದೇವಸ್ಥಾನದ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿದರು. ತಾಯಿ ಮಗುವಿನ ಹಾರೈಕೆ ಆಸ್ಪತ್ರೆಯ ವಿಭಾಗಕ್ಕೆ ತೆರಳಿದ ಶಾಸಕರು, ಸರ್ಕಾರದಿಂದ ಸಿಗುವ ಸೌಲಭ್ಯ ಮತ್ತು ಇತರೆ ವೈದ್ಯರ ಚಿಕಿತ್ಸೆ ಕುರಿತು ಮಾಹಿತಿ ಪಡೆದರು. ಬಳಿಕ ರೋಗಿಗಳಿಗೆ ತೊಂದರೆ ಆಗದ ರೀತಿಯಲ್ಲಿ ವೈದ್ಯರು ನಿಗಾವಹಿಸಬೇಕು. ತಾಯಿ ಮತ್ತು ಮಕ್ಕಳ ಹಾರೈಕೆ ಹಾಗೂ ಆಸ್ಪತ್ರೆಯ ವಿವಿಧ ವಿಭಾಗದ ರೋಗಿಗಳಿಗೆ ತೊಂದರೆ ಆಗದ ರೀತಿಯಲ್ಲಿ ಚಿಕಿತ್ಸೆ ಬಗ್ಗೆ ಕಾಲಕಾಲಕ್ಕೆ ಹೆಚ್ಚು ಆಸಕ್ತಿವಹಿಸಿ ಕೆಲಸ ಮಾಡುವಂತೆ ಆಸ್ಪತ್ರೆಯ ಹಿರಿಯ ವೈದ್ಯರಿಗೆ ಎಚ್ಚರಿಕೆ ನೀಡಿದರು.

ಬಳಿಕ ತಾಲೂಕಿನ ನಾಗಲಾಪುರ ಗ್ರಾಮಕ್ಕೆ ತೆರಳಿ ಅಲ್ಲಿನ 13ಲಕ್ಷ ವೆಚ್ಚದ ಪ್ರಾಥಮಿಕ ಶಾಲಾ ಕೊಠಡಿಯ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರೆವೇರಿಸಿದರು. ನಂತರ ಕನ್ನಮೇಡಿ ಗ್ರಾಮಕ್ಕೆ ತೆರಳಿ ನೂತನ ಗ್ರಾಪಂ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರೆವೇರಿಸಿದ್ದಾರೆ. ತಾಲೂಕಿನ ಬಿ.ಕೆ.ಹಳ್ಳಿ ಗ್ರಾಪಂನ ಕ್ಯಾತಗಾನಕೆರೆಗೆ ತೆರಳಿದ ಅವರು ಅಲ್ಲಿನ ಸ್ಥಳೀಯ ಮುಖಂಡರ ಜತೆ ಸೇರಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಂಜನೇಯಸ್ವಾಮಿ ದೇವಸ್ಥಾನದ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಂಡರು.

ಇದೇ ವೇಳೆ ಆಯಾ ಗ್ರಾಪಂಗಳ ಸ್ಥಳೀಯ ಹಿರಿಯ ಗ್ರಾಮಸ್ಥರು ಸೇರಿದಂತೆ ತಾಲೂಕು ಮಟ್ಟದ ಆನೇಕ ಮಂದಿ ಕಾಂಗ್ರೆಸ್ ಮುಖಂಡರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.